ಸಿರುಗುಪ್ಪ: ತಾಲೂಕಿನ ಶಾನವಾಸಪುರ ಗ್ರಾಮದ ರೈತ ಶಂಕರಗೌಡ ಅರ್ಧ ಎಕರೆಯಲ್ಲಿ ಕರಿಬೇವಿನ ಬೆಳೆ ಬೆಳೆದಿದ್ದು ಅರ್ಧ ಎಕರೆಯಲ್ಲಿ ಬೆಳೆದ ಕರಿಬೇವು ಮತ್ತು ಕರಿಬೇವಿನ ಬೀಜ ಮಾರಾಟ ಮಾಡಿ ರೂ. 80 ಸಾವಿರ ಆದಾಯ ಪಡೆದಿದ್ದಾನೆ. ರೈತ ಕರಿಬೇವು ಬೆಳೆದ ಅರ್ಧ ಎಕರೆ ಜಮೀನಿನಲ್ಲಿ ಮಳೆನೀರು ನಿಲ್ಲುತ್ತಿದ್ದರಿಂದ ಸರಿಯಾದ ಬೆಳೆ ಬರುತ್ತಿರಲಿಲ್ಲ.
ಹೇಗಾದರೂ ಮಾಡಿ ಬೆಳೆ ಬೆಳೆಯಬೇಕೆಂದರೂ ಅಲ್ಲಿ ಯಾವುದೇ ಬೆಳೆ ಬೆಳೆಯದೇ ನಷ್ಟ ಅನುಭವಿಸುತ್ತಿದ್ದ, ಆದರೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ರೂ. 54 ಸಾವಿರ ಸಹಾಯಧನದಲ್ಲಿ 444 ಕರಿಬೇವಿನ ಗಿಡಗಳನ್ನು ಒಂದು ವರ್ಷದ ಹಿಂದೆ ನೆಟ್ಟಿದ್ದು, ಕರಿಬೇವಿನ ಗಿಡಗಳು ಉತ್ತಮವಾಗಿ ಯಾವುದೇ ರೋಗ ರುಜಿನಗಳ ಬಾಧೆ ಇಲ್ಲದೆ ಬೆಳೆದಿದ್ದು, ಒಂದು ಕೆಜಿ ಕರಿಬೇವು ರೂ. 50ರಿಂದ 60 ರೂ.ಗಳಿಗೆ ಮಾರಾಟವಾಗಿದ್ದು, ಬಳ್ಳಾರಿ ಮತ್ತು ಸ್ಥಳಿಯವಾಗಿ ತರಕಾರಿ ವ್ಯಾಪಾರ ಮಾಡುವವರು ರೈತನ ಜಮೀನಿಗೆ ಬಂದು ಕರಿಬೇವನ್ನು ಖರೀದಿ ಮಾಡುತ್ತಿರುವುದರಿಂದ ರೈತನಿಗೆ ಮಾರಾಟ ಮಾಡಲು ಮಾರುಕಟ್ಟೆಯ ಸಮಸ್ಯೆ ಇರುವುದಿಲ್ಲ.
ಉತ್ತಮವಾಗಿ ಬೆಳೆದ ಕರಿಬೇವಿನ ಕೆಲವು ಗಿಡಗಳಲ್ಲಿ ಬೀಜಗಳು ಬಲಿತ್ತಿದ್ದು, ಕರಿಬೇವಿನ ಬೀಜಗಳನ್ನು ಈ ರೈತನು ಒಂದು ಕೆಜಿಗೆ ರೂ. 300ರಿಂದ 500 ದರಕ್ಕೆ ಮಾರಾಟ ಮಾಡಿದ್ದು ಉತ್ತಮ ಇಳುವರಿಯೊಂದಿಗೆ ಬೀಜ ಮಾರಿದ್ದರಿಂದ ಅರ್ಧ ಎಕರೆಗೆ ರೂ. 80 ಸಾವಿರ ಲಾಭ ಬಂದಿರುತ್ತದೆ. ಆದರೆ ಲಾಕ್‌ಡೌನ್ ಸಮಯದಲ್ಲಿ ಒಂದು ಕೆಜಿ ಕರಿಬೇವಿನ ಬೆಲೆ ರೂ. 15ಕ್ಕೆ ಇಳಿದಿದ್ದರಿಂದ ಕರಿಬೇವನ್ನು ಮಾರಾಟ ಮಾಡದೇ ಬೀಜ ಮಾಡಲು ಮುಂದಾಗಿದ್ದರು.
ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯಡಿ ನನ್ನ ಅರ್ಧ ಎಕರೆ ಜಮೀನಿನಲ್ಲಿ ಕರಿಬೇವಿನ ಬೆಳೆಯನ್ನು ಬೆಳೆದಿದ್ದು, ಲಾಕ್ ಡೌನ್ ಸಮಯದಲ್ಲಿ ಕರಿಬೇವಿಗೆ ಬೇಡಿಕೆ ಕಡಿಮೆಯಾಗಿದ್ದು, ರೂ. 15ಕ್ಕೆ ಒಂದು ಕೆಜಿಯಂತೆ ಮಾರಾಟವಾಗಿತ್ತು. ಇದರಿಂದಾಗಿ ಆಗ ಕರಿಬೇವು ಮಾರಾಟ ಮಾಡುವುದನ್ನು ನಿಲ್ಲಿಸಿದ್ದರಿಂದ ಗಿಡದಲ್ಲಿ ಉತ್ತಮವಾದ ಬೀಜಗಳು ಹುಟ್ಟಿಕೊಂಡವು.
ಬೀಜಗಳ ಮಾರಾಟದಿಂದ ರೂ. 30ಸಾವಿರ ಮತ್ತು ಮಾರುಕಟ್ಟೆಯಲ್ಲಿ ರೂ. 50ರಂತೆ ಒಂದು ಕೆಜಿಗೆ ಕರಿಬೇವು ಮಾರಾಟವಾಗಿರುವುದರಿಂದ ರೂ. 50 ಸಾವಿರ ಒಟ್ಟು 80 ಸಾವಿರ ಲಾಭ ಬಂದಿದೆ ಎಂದು ರೈತ ಶಂಕರಗೌಡ ತಿಳಿಸಿದ್ದಾನೆ.
ನರೇಗಾ ಯೋಜನೆಯಡಿ ಕರಿಬೇವು ಬೆಳೆದ ರೈತ ಶಂಕರಗೌಡನಿಗೆ ನಮ್ಮ ಇಲಾಖೆಯಿಂದ ರೂ. 54 ಸಾವಿರ ಸಹಾಯಧನವನ್ನು ನೀಡಿದ್ದೇವೆ. ಕರಿಬೇವು ಉತ್ತಮವಾಗಿ ಬೆಳೆದಿದ್ದು, ಕರಿಬೇವು ಮತ್ತು ಕರಿಬೇವಿನ ಬೀಜ ಮಾರಾಟದಿಂದ ಉತ್ತಮ ಲಾಭ ಗಳಿಸಿದ್ದು ರೈತರಿಗೆ ಮಾದರಿಯಾಗಿದ್ದಾನೆ.
ವಿಶ್ವನಾಥ, ತೋಟಗಾರಿಕೆ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕ