ನೆಲ್ಲೂರು: ದೇಶದಾದ್ಯಂತ ನವರಾತ್ರಿ ಪೂಜೆಯ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ನಡೆಯುತ್ತಿದೆ. ಅದೇ ರೀತಿ ಆಂಧ್ರಪ್ರದೇಶದ ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಬರೋಬ್ಬರಿ 5 ಕೋಟಿ ರೂ. ನೋಟಿನಿಂದ ದೇವಿಯನ್ನು ಅಲಂಕರಿಸಲಾಗಿದೆ.
2000 ರೂ., 500 ರೂ., 200 ರೂ., 100 ರೂ., 50 ರೂ., ಮತ್ತು 10 ರೂ. ಮುಖ ಬೆಲೆಯ ನೋಟುಗಳಿಂದ ಹೂವುಗಳನ್ನು ತಯಾರಿಸಿ, ಅದರಿಂದ ದೇಗುಲವನ್ನು ಅಲಂಕರಿಸಲಾಗಿದೆ. ಅಲಂಕಾರಕ್ಕೆಂದು ಒಟ್ಟು 5 ಕೋಟಿ, 16 ಲಕ್ಷ ರೂಪಾಯಿ ಮೌಲ್ಯದ ನೋಟನ್ನು ಬಳಸಿರುವುದಾಗಿ ತಿಳಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಇದೇ ದೇಗುಲದಲ್ಲಿ 11 ಕೋಟಿ ರೂಪಾಯಿ ಮೌಲ್ಯದ ನೋಟಿನಿಂದ ಅಲಂಕಾರ ಮಾಡಲಾ ಗಿತ್ತು. ನೋಟಿನ ಜೊತೆ, 7ಕೆಜಿ ಚಿನ್ನ ಮತ್ತು 6ಕೆಜಿ ಬೆಳ್ಳಿ ಆಭರಣವನ್ನು ದೇವಿಗೆ ತೊಡಿಸಿರುವುದಾಗಿ ನೆಲ್ಲೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಕ್ಕಳ ದ್ವಾರಕಾನಾಥ್ ತಿಳಿಸಿದ್ದಾರೆ.
ಜಿಎಸ್ಟಿ ದರ ಪರಿಷ್ಕರಣೆಗೆ ಚಿಂತನೆ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಕೆಲವೊಂದು ಸೇವೆಗಳಿಗೆ ತೆರಿಗೆ ಹೆಚ್ಚು ಮಾಡಿ, ಕೆಲವು ಸೇವೆಗಳಿಗೆ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸಮಿತಿ ಡಿಸೆಂಬರ್‌ನಲ್ಲಿ ಸಭೆ ಸೇರಿ ಸದ್ಯ ಇರುವ ಶೇ.5, ಶೇ.12, ಶೇ.18 ಮತ್ತು ಶೇ.28ರ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರಲು ಪರಾಮರ್ಶೆ ನಡೆಸಲಿದೆ. ಸದ್ಯ ಇರುವ ಎರಡು ಕನಿಷ್ಠ ಹಂತಗಳನ್ನು ಶೇ.6, ಶೇ.13ಕ್ಕೆ ಏರಿಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಮುಂದಿನ ವರ್ಷ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಈ ಪರಿಷ್ಕರಣೆಗೆ ಯೋಚಿಸಲಾಗಿದೆ.