ಜಮ್ಮು-ಕಾಶ್ಮೀರ: ಎರಡು ಸಮುದಾಯಗಳ ನಡುವೆ ಅವಹೇಳನಕಾರಿ ಭಾಷೆ ಬಳಸಿ ವಾಕ್ಸಮರ ನಡೆಸಿದ ಪರಿಣಾಮ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿರುವುದಾಗಿ ಆರೋಪಿಸಿ ಕೋಮು ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಕಿಶ್ತ್ವಾರ ಜಿಲ್ಲೆ ಮತ್ತು ಭಾರ್ದೇವಾ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ಯಾ?: ಅಡ್ಡಮತದಾನಕ್ಕೆ ಕಿಡಿಕಾರಿದ ಕುಮಾರಸ್ವಾಮಿ
ಮುಂಜಾಗ್ರತಾ ಕ್ರಮವಾಗಿ ಚಿನಾಬ್ ಕಣಿವೆ ಪ್ರದೇಶದ ಕಿಶ್ತ್ವಾರ್, ಡೋಡಾ ಮತ್ತು ರಂಬಾನ್ ಜಿಲ್ಲೆಗಳಲ್ಲಿ ಎಲ್ಲಾ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಉಭಯ ಸಮುದಾಯಗಳ ಮುಖಂಡರ ಜತೆ ಶಾಂತಿ ಪಾಲನೆ ಮಾತುಕತೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರ್ದೇವಾ ಪ್ರದೇಶದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರಾಲಿಯಲ್ಲಿ ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಂತರ ಕೋಮು ಉದ್ವಿಗ್ನತೆ ಹೊತ್ತಿಕೊಂಡಿರುವುದಾಗಿ ವರದಿ ವಿವರಿಸಿದೆ.
ಪ್ರವಾದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವುದಾಗಿ ಫೇಸ್ ಬುಕ್ ಪೋಸ್ಟ್ ಹಾಕಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನಾ ರಾಲಿಯಲ್ಲಿ ಬಿಜೆಪಿ ಯುವ ಮೋರ್ಚಾದ ಮುಖಂಡ ಸೇರಿದಂತೆ ಹಲವರನ್ನು ಬಂಧಿಸುವಂತೆ ಒತ್ತಾಯಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿದ ಕೂಡಲೇ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸೇನೆ ಹಾಗೂ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.