ಪಣಜಿ : ಗೋವಾದಲ್ಲಿ ಕರ್ಫ್ಯೂ ಕಾಲಾವಧಿಯನ್ನು ಇನ್ನೂ 7 ದಿನಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ಜುಲೈ 12 ರ ಬೆಳಿಗ್ಗೆ 7 ಗಂಟೆಯ ವರೆಗೆ ರಾಜ್ಯದಲ್ಲಿ ಕರ್ಫ್ಯೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಘೋಷಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಜಾರಿಯಲ್ಲಿದ್ದ ಕರ್ಫ್ಯೂ ಜುಲೈ 5 ರಂದು ಮುಕ್ತಾಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿ ವಿಸ್ತರಣೆ ಮಾಡಲಾಗಿದೆ. ಈವರೆಗೆ ಬೆಳಿಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದ್ದು, ಇದೀಗ ಅಂಗಡಿಗಳನ್ನು ಸಂಜೆ 6 ಗಂಟೆಗಳ ವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೇರ್ ಕಟಿಂಗ್ ಸೆಲೂನ್, ಹೊರ ಕ್ರೀಡಾಂಗಣ, ಸ್ಟೇಡಿಯಂ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ನಿರ್ಬಂಧಗಳ ಸಡಿಲಿಕೆ ಸಾಧ್ಯವಿಲ್ಲ, ಕೋವಿಡ್ ನ ಎರಡನೇ ಅಲೆ ಇನ್ನೂ ಮುಗಿದಿಲ್ಲ : ಕೇಂದ್ರ
ಕಳೆದ ಬಾರಿ ರಾಜ್ಯ ಕರ್ಫ್ಯೂ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಮಾಲ್ ಗಳಲ್ಲಿನ ಅಂಗಡಿ ತೆರೆಯಲು ವಿನಾಯತಿ ನೀಡಲಾಗಿತ್ತು. ಇದೀಗ ಹೇರ್ ಕಟಿಂಗ್ ಸೆಲೂನ್, ಹೊರ ಕ್ರೀಡಾಂಗಣ, ಸ್ಟೇಡಿಯಂಗಳಿಗೂ ಕೂಡ ವಿನಾಯತಿ ನೀಡಲಾಗಿದೆ.
ಗೋವಾ ರಾಜ್ಯದಲ್ಲಿ ಇಂದು (ಶುಕ್ರವಾರ, ಜುಲೈ 2) 183 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸದ್ಯ 2174 ಸಕ್ರೀಯ ಪ್ರಕರಣಗಳಿವೆ. ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಶೇ 96.87 ರಷ್ಟಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 14337 ಸೋಂಕಿತರು ಗುಣಮುಖ; 2984 ಹೊಸ ಪ್ರಕರಣ ಪತ್ತೆ