ಬೆಂಗಳೂರು: ನಗರದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆ ದ್ವಿಗುಣಗೊಂಡಿದ್ದು, ಮಂಗಳವಾರ ಒಂದೇ ದಿನ 4,274 ಜನ ಸೋಂಕಿನಿಂದ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಕಳೆದ ಕೇವಲ ಐದು ದಿನಗಳಲ್ಲಿ 9,298 ಜನ ಗುಣಮುಖರಾಗಿದ್ದಾರೆ. ಆ.2 ರಂದು 2,332 ಜನರು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಬಳಿಕ ಆ.3 ರಂದು 2,693 ಮಂದಿ ಕೋವಿಡ್ ದಿಂದ ಮುಕ್ತಿ ಪಡೆದಿದ್ದರು. ಇದರೊಂದಿಗೆ ಒಟ್ಟಾರೆ 27,877 ಮಂದಿ ಬಿಡುಗಡೆ ಆಗಿದ್ದಾರೆ. ಇನ್ನು ತೀವ್ರ ನಿಗಾಘಟಕದಲ್ಲಿ 322 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಖ್ಯೆ ಕೊಂಚ ಇಳಿಕೆಯಾಗಿದೆ.
ಈ ಮಧ್ಯೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕ್ರಮದಲ್ಲಿ ಸಾಗಿದೆ. 2,035 ಹೊಸ ಪ್ರಕರಣಗಳು ಮಂಗಳವಾರ ದಾಖಲಾಗಿವೆ. ಇದರೊಂದಿಗೆ ಒಟ್ಟಾರೆ 63,033 ಸೋಂಕಿತರಾಗಿದ್ದಾರೆ. ಈ ಪೈಕಿ 34,021 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ಮತ್ತೆ 30 ಮಂದಿ ಬಲಿಯಾಗಿದ್ದು, 22 ಪುರುಷರು ಮತ್ತು 8 ಮಂದಿ ಮಹಿಳೆಯರು ಇದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 1,134ಕ್ಕೆ ಏರಿಕೆಯಾಗಿದೆ.
23,080 ಕಂಟೈನ್ಮೆಂಟ್ ವಲಯಗಳು: ನಗರದಲ್ಲಿ ಪ್ರಸ್ತುತ ಕೋವಿಡ್ ಪಾಸಿಟಿವ್ ದರ ಶೇ. 17.84ರಷ್ಟಿದ್ದು, ಸಕ್ರಿಯ ಪ್ರಮಾಣ ಶೇ. 54ರಷ್ಟಿದೆ. ಅಲ್ಲದೆ 9,918 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಗರದಲ್ಲಿ ಒಟ್ಟು 23,080 ಕಂಟೈನ್ಮೆಂಟ್ ವಲಯವಿದ್ದು, ಇದರಲ್ಲಿ 12,050 ಸಕ್ರಿಯ ಕಂಟೈನ್ಮೆಂಟ್ ವಲಯಗಳಿವೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು 6,717 ಸಕ್ರಿಯ ವಲಯಗಳಿವೆ.
ಐಐಎಸ್ಸಿಯಲ್ಲೂ ಕೋವಿಡ್ : ಭಾರತೀಯ ವಿಜ್ಞಾನ ಸಂಸ್ಥೆ (ಐಐಸ್ಸಿ)ಯಲ್ಲಿ ವಿದ್ಯಾರ್ಥಿ ಗಳು, ಬೋಧಕರು, ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 19 ಮಂದಿಗೆ ಸೋಂಕು ದೃಢಪಟ್ಟಿದೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದ ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲಾ 50 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.