Advertisement
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳಾದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಧಿಕಾರಿಗಳ ಕಾರ್ಯವೈಖರಿಯನ್ನು ಬದಲಿಸಲು ಸಾಕಷ್ಟು ಶ್ರಮಿಸಲಾಗಿದೆ. ಜನರ ನೂರಾರು ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಬಗೆಹರಿಸಲಾಗಿದೆ.ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ತಹಶೀಲ್ದಾರ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಶೇ.60ರಷ್ಟು ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಮೂಲಕ ರೈತರ ದಶಕಗಳ ಸಮಸ್ಯೆಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ 6 ತಿಂಗಳಿಂದ ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ಸಭೆ ಕರೆದು ಪರಿಶೀಲಿಸಲಾಗಿದೆ. ಇಲಾಖೆಯಲ್ಲಿ ಅಕ್ರಮ ಎಸಗಿದವರು, ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದೂ ಕಳೆದ ಐದು ವರ್ಷಗಳಿಂದ ಶಿಕ್ಷೆಗೆ ಒಳಗಾಗದಿದ್ದ, ಸುಮಾರು 350ಕ್ಕೂ ಅಧಿಕ ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಪಟ್ಟ ಕಡತವನ್ನು 6 ತಿಂಗಳಲ್ಲಿ ವಿಲೇ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹಲವು ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳಿದ್ದು, ಹಲವರಿಗೆ ಕಡ್ಡಾಯ ನಿವೃತ್ತಿ, ಪಿಂಚಣಿಯಲ್ಲಿ ಕಡಿತ ಸಹಿತ ಹಲವು ಶಿಕ್ಷೆಗಳಿಗೆ ಗುರಿಪಡಿಸಲಾಗಿದೆ. ಇನ್ನುಳಿದ ಪ್ರಕರಣಗಳನ್ನೂ ಶೀಘ್ರ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದ್ದಾರೆ.
Related Articles
ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಆಸ್ತಿ ಖಾಸಗಿಯವರ-ಭೂಗಳ್ಳರ ಪಾಲಾಗಿದೆ. ಹೀಗಾಗಿ ಈ ಭೂಮಿಯನ್ನು ಮರಳಿ ಸರಕಾರದ ವಶಕ್ಕೆ ಪಡೆಯುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡಕ್ಕೆ ಪ್ರತಿ ವಾರಾಂತ್ಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸೂಚಿಸಲಾಗಿದೆ. ಈ ತಂಡ ಈಗಾಗಲೇ ಬೆಂಗಳೂರಿನಲ್ಲಿ ನೂರಾರು ಕೋಟಿ ರೂ. ಮೌಲ್ಯದ 60 ಎಕ್ರೆಗೂ ಅಧಿಕ ಒತ್ತುವರಿಯನ್ನು ತೆರವುಗೊಳಿಸಿದೆ. ಸರಕಾರಿ ಭೂಮಿಗಳನ್ನು ಗುರುತಿಸಿ ರಕ್ಷಿಸಲು ಅಧಿಕಾರಿಗಳ ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ವಿವರಿಸಿದ್ದಾರೆ.
Advertisement