ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನ.1ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮದ ರಾಜ್ಯಮಟ್ಟದ ಕಾರ್ಯಕ್ರಮ ಮತ್ತು ಮಕ್ಕಳ ಹಬ್ಬ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ 9 ಸಾವಿರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ 80 ಶಾಲೆಗಳ 9 ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇs… ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ದೇಶಾಭಿಮಾನಕ್ಕೆ ಸಂಬಂಧಿಸಿದ ನೃತ್ಯ ರೂಪಕ, ಸಾಮೂಹಿಕ ಕವಾಯತು, ಯೋಗ ಪ್ರದರ್ಶನದ ಜತೆಗೆ ನಾಡು ಕಂಡ ವೀರರಿಗೆ ನಮನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಯೋಗಿಕ ಯೋಗಾಭ್ಯಾಸ: ದೇಶದಲ್ಲೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ “ಯೋಗ’ ವಿಷಯವನ್ನು ಪಠ್ಯದಲ್ಲಿ ಅಳವಡಿಸಲಿದೆ. ಯೋಗಾಭ್ಯಾಸದಲ್ಲಿ ಯುವ ಜನತೆ ಹೆಚ್ಚು ತೊಡಗಿಸಿಕೊಳ್ಳುವಂಥೆ ಪ್ರೇರೇಪಿಸಲು ಪಠ್ಯದ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಇದೇ ವೇಳೆ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲದಲ್ಲಿ ಪ್ರಾಯೋಗಿಕ ಅಭ್ಯಾಸ ಮಾಡಲಿದ್ದಾರೆ.
ಇ-ಕಲಿಕೆ: ಕನ್ನಡ ಭಾಷೆಯನ್ನು ಅತ್ಯಂತ ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಿ ಕಲಿಯುವ ಸರಳ ವಿಧಾನವೊಂದನ್ನು “ಕನ್ನಡ ಸೌರಭ’ ಇ-ಕಲಿಕೆಯಲ್ಲಿ ಅಳವಡಿಸಲಾಗಿದೆ. ಚಿತ್ರ, ಶಬ್ಧ ಮತ್ತು ಅನಿಮೇಷನ್ ಮೂಲಕ ಕನ್ನಡ ಭಾಷೆ ಕಲಿಯಲು ಇದು ಪೂರಕವಾಗಲಿದೆ.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನಿರ್ದೇಶನದಲ್ಲಿ ಕನ್ನಡ ನಾಡಿನ ಕಲಾವಿದರ ಕುರಿತಾದ ಚಿತ್ರಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಕನ್ನಡ ಶಾಲೆಯ ಮಕ್ಕಳು ಹಾಗೂ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.