Advertisement

ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಭವ

06:00 AM Apr 06, 2018 | |

ಆಧುನಿಕ ಬದುಕು ನೀಡಿರುವ ಸವಲತ್ತುಗಳ ಉಪಭೋಗ ಸಂಸ್ಕೃತಿಯ ವೈಭವದಲ್ಲಿ ಮುಳುಗೇಳುತ್ತಿರುವ ಇಂದಿನ ಜನತೆಗೆ ತಾವು ಎಲ್ಲಿಂದ ಬಂದಿದ್ದೇವೆ ಎನ್ನುವ ಪರಿಜ್ಞಾನವಿಲ್ಲ. ತಮ್ಮ ಮೂಲ ಹೇಗಿತ್ತು ಎಂಬುದನ್ನು ತಿಳಿಯುವ ಕುತೂಹಲವೂ ಇಲ್ಲ. ಈ ರೀತಿ ಇತಿಹಾಸವನ್ನು ವಿಸ್ಮತಿಯ ಅಂಚಿಗೆ ತಳ್ಳುವುದು ಅಪಾಯದ ಸೂಚನೆ ಎಂಬುದನ್ನು ಮನಗಂಡ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಮಾನವಿಕ ಸಂಘವು ಕರಾವಳಿಯ ಬುಡಕಟ್ಟು ಸಂಸ್ಕೃತಿಯ ಅನಾವರಣವನ್ನು ಧ್ಯೇಯವಾಗಿಟ್ಟುಕೊಂಡು ಎರಡು ದಿನಗಳ ಬುಡಕಟ್ಟು ಸಮ್ಮೇಳನವನ್ನು ಆಯೋಜಿಸಿತ್ತು. ಆಳುವವರ ನಿರ್ಲಕ್ಷ್ಯದಿಂದಾಗಿ ನಶಿಸಿ ಹೋಗುತ್ತಿರುವ ಬುಡಕಟ್ಟು ಸಂಸ್ಕೃತಿಯ ಬಗೆಗಿನ ಕಾಳಜಿ, ಬುಡಕಟ್ಟು ಪರಿಷತ್ತಿನ ರೂಪೀಕರಣ ಮತ್ತು ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚೆ, ಸಂವಾದ ಹಾಗೂ ವಿಚಾರ ಸಂಕಿರಣಗಳು, ಬುಡಕಟ್ಟು ಸಮುದಾಯಗಳ ಕಲಾ ಕೌಶಲ ಮತ್ತು ಸಾಂಸ್ಕೃತಿಕ ಅನಾವರಣಗಳಿಗೆ ಅವಕಾಶ ನೀಡುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿತ್ತು. 

Advertisement

ಉದ್ಘಾಟನೆಗಿಂತ ಮೊದಲು ನಡೆದ ಶೋಭಯಾತ್ರೆಯಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವೈವಿಧ್ಯಮಯ ಜನಪದ ಕಲೆಗಳಾದ ಕೋಲಾಟ, ಡೊಳ್ಳುಕುಣಿತ, ಕೀಲುಗುದುರೆಗಳು ಗಮನಸೆಳೆದವು. ಅಪರಾಹ್ನದ ವೇಳೆ ಪೂರ್ತಿಯಾಗಿ ವಿವಿಧ ಬುಡಕಟ್ಟು ಸಮುದಾಯಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಯಡ್ತಾಡಿ ಕೇಸಪುರದ ರಾಮ ನಾಯ್ಕ ಮತ್ತು ತಂಡದವರಿಂದ ಕುಡುಬಿ ಜನಾಂಗದವರ ಕೋಲಾಟ ಮತ್ತು ಹೋಳಿ ನೃತ್ಯ, ಮರವಂತೆಯ ಗಣೇಶ್‌ ಮತ್ತು ತಂದವರಿಂದ ಕೊರಗ ಸಮುದಾಯದವರ ಡೊಳ್ಳು ಕುಣಿತ, ಜೀವನದಲ್ಲಿ ಎದುರಾಗುವ ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾಗುವ ಡೋಲು ಬಾರಿಸುವ ರೀತಿ, ಹೆಣ್ಣು ಮಕ್ಕಳು ಹುಟ್ಟಿದಾಗ ಇಡೀ ಸಮುದಾಯವು ಸಂಭ್ರಮದಿಂದದ ಕುಣಿಯುವ ಪರಿ, ಯಲ್ಲಾಪುರದ ಸಿದ್ಧಿ ಸಮುದಾಯಕ್ಕೆ ಸೇರಿದ‌ ಮಂಜು ಸಿದ್ಧಿ ಮತ್ತು ಬಳಗದವರ ಡಮಾಮಿ ಮತ್ತು ಪುಗಡೆ ನೃತ್ಯ, ಅಂಕೋಲದ ಬಡಿಗೆರ ಹಾಲಕ್ಕಿ ಸಮುದಾಯದವರಿಮದ ತಾರಲೆ ಕುಣಿತ ಮತ್ತು ಹಾಡುಗಳು ಆಕರ್ಷಕವಾಗಿದ್ದವು. ಸಮ್ಮೇಳನದ ಸರ್ವಾಧ್ಯಕ್ಷರಾದ ಸ್ವತಃ ಸಾವಿರಾರು ಪದ್ಯಗಳನ್ನು ರಚಿಸಿ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪದ್ಮಶ್ರೀ ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಹಾಲಕ್ಕಿ ನೃತ್ಯ ತಂಡದ ನೇತೃತ್ವ ವಹಿಸಿದ್ದರು.ಎಲ್ಲ ನೃತ್ಯಗಳಲ್ಲೂ ವೇದಿಕೆಯ ತುಂಬ ಹತ್ತು – ಹದಿನೈದಕ್ಕೂ ಮಿಕ್ಕಿ ಕಲಾವಿದರು ಬಣ್ಣ ಬಣ್ಣದ ಪೋಷಾಕು ಮತ್ತು ಹೊಳೆಯುವ ತೊಡುಗೆಗಳನ್ನು ಧರಿಸಿದ್ದು ತಾವೇ ಹಾಡುತ್ತ ವಾದ್ಯಗಳನ್ನು ಬಾರಿಸುತ್ತ ಭಾವಾಭಿನಯ ಕೂಡಾ ಮಾಡುತ್ತ ಶಿಸ್ತುಬದ್ಧವಾಗಿ ನರ್ತಿಸಿದ್ದರಿಂದ ಪ್ರಸ್ತುತಿಯ ಸೌಂದರ್ಯ ಇನ್ನಷ್ಟು ಕಳೆಗಟ್ಟಿತ್ತು. 

ಸಮ್ಮೇಳನದ ಎರಡನೆಯ ದಿನ ಪೂರ್ತಿಯಾಗಿ ವಿಚಾರ ಸಂಕಿರಣದ ಉಪನ್ಯಾಸ ಮಂಡನೆ ಮತ್ತು ಚರ್ಚೆಗಳಿಗೆ ಮೀಸಲಾಗಿತ್ತು. ಬುಡಕಟ್ಟು ಸಮುದಾಯದವರೇ ತಮ್ಮ ಅನುಭವಗಳನ್ನು ವಿವರಿಸಿ ಅಳಲುಗಳನ್ನು ತೋಡಿಕೊಂಡದ್ದು ಸನ್ನಿವೇಶದ ವೈಶಿಷ್ಟ್ಯವಾಗಿತ್ತು. ತಾವು ಅರಣ್ಯದ ಸಂರಕ್ಷಣೆ ಮಾಡುವವರು, ನಿಸರ್ಗವನ್ನು ಪೂಜಿಸುವವರು. ಆದರೆ ಸರಕಾರವು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಮಾತ್ರವಲ್ಲದೆ ನಮ್ಮ ಬದುಕನ್ನೂ ನಾಶ ಮಾಡುತ್ತಿದೆ ಎಂದು ಅವರು ಹೇಳಿದರು. ತರುವಾಯ ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡು ಅವರ ಶ್ರೇಯೋಭಿವೃದ್ಧಿಯ ಕುರಿತು ಚಿಂತಿಸಲು ಒಂದು ಬುಡಕಟ್ಟು ಪರಿಷತ್ತನ್ನು ರೂಪಿಸುವ ಕುರಿತು ಸಮಾಲೋಚನೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಡಾ| ಹೆಚ್‌. ಶಾಂತಾರಾಮ್‌ ಅವರು ಬುಡಕಟ್ಟು ಸಮುದಾಯದವರನ್ನು ಸಾಕ್ಷರರನ್ನಾಗಿ ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯ ಎಂದು ಸಲಹೆಯಿತ್ತರು.

ನಾಗರಿಕರಿಗಿಂತ ಭಿನ್ನವಾಗಿ ತಮ್ಮ ಆಚಾರ ವಿಚಾರ, ಆಹಾರ ವಿಹಾರ ನಡವಳಿಕೆಗಳಲ್ಲಿ ಅನನ್ಯತೆಯನ್ನು ಕಾಯ್ದುಕೊಂಡಿರುವ ಬುಡಕಟ್ಟು ಸಮುದಾಯದ ಮಂದಿ ನಮ್ಮ ದೇಶದ ಸಂಸ್ಕೃತಿಯ ನಿಜವಾದ ಪ್ರತಿನಿಧಿಗಳು. ಸೂರ್ಯ, ಚಂದ್ರ, ಗಿಡ ಮರ, ಪ್ರಾಣಿ ಪಕ್ಷಿ, ನದಿ ಕಡಲುಗಳನ್ನು ಪೂಜ್ಯಭಾವದಿಂದ ಆರಾಧಿಸಿಕೊಂಡು ಬಂದವರು ಅವರು.
ಡಾ|ಹಿ.ಶಿ.ಬೋರಲಿಂಗಯ್ಯ                                           

ಪಾರ್ವತಿ ಜಿ. ಐತಾಳ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next