Advertisement

ಕಬ್ಬನ್‌ ಪಾರ್ಕಿಂಗ್‌ ತಾಣ!

12:55 AM Aug 17, 2019 | Lakshmi GovindaRaj |

ಬೆಂಗಳೂರು: ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್‌ ನಗರದ ಎರಡು ಶ್ವಾಸಕೋಶಗಳು. ಆದರೆ, ಕಬ್ಬನ್‌ ಪಾರ್ಕ್‌ ವಾಹನ ನಿಲುಗಡೆ ತಾಣವಾಗಿ ಮಾರ್ಪಡುತ್ತಿದ್ದು, ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಬಾಲಭವನದಿಂದ ಪ್ರಸ್‌ಕ್ಲಬ್‌ವರೆಗಿನ ಕಿಂಗ್ಸ್‌ ರಸ್ತೆಯಲ್ಲಿ ತೋಟಗಾರಿಕೆ ಇಲಾಖೆಯೇ ಅಧಿಕೃತವಾಗಿ ಟೆಂಡರ್‌ ಕರೆದು “ವಾಹನ ನಿಲುಗಡೆ’ಗೆ ಅವಕಾಶ ಕೊಟ್ಟಿದೆ. ಹೀಗಾಗಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ನಗರದ ಪೂರ್ವ ವಿಭಾಗದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಪಾರ್ಕ್‌ನಲ್ಲಿ ವಾಹನ ನಿಲ್ಲಿಸುತ್ತಾರೆ.

Advertisement

ಜತೆಗೆ ಉದ್ಯಾನಕ್ಕೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆ ಸಹ ಇಲ್ಲೇ ಆಗುತ್ತದೆ. ಗೋಪಾಲಗೌಡ ವೃತ್ತ, ಹಡ್ಸನ್‌ ವೃತ್ತ, ವಿಠ್ಠಲ ಮಲ್ಯ ವೃತ್ತ ಕಡೆಗಳಿಂದಲೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ನಿತ್ಯ ಸಾವಿರಾರು ವಾಹನಗಳ ನಿರಂತರ ಓಡಾಟ, ನೂರಾರು ವಾಹನಗಳ ನಿಲುಗಡೆಯಿಂದ 197 ಎಕರೆ ವ್ಯಾಪ್ತಿಯ ಉದ್ಯಾನ ವಾತಾವರಣ ಕಲುಷಿತಗೊಳ್ಳುವುದರ ಜತೆಗೆ ಅಲ್ಲಿನ ಪ್ರಾಣಿಸಂಕುಲಗಳ ವಂಶಾಭಿವೃದ್ಧಿಗೂ ಮಾರಕವಾಗುವ ಆತಂಕ ಎದುರಾಗಿದೆ.

ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುವುದರಿಂದ ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ವಾರಾಂತ್ಯದ ಎರಡು ದಿನಗಳು (ಶನಿವಾರ ಮತ್ತು ಭಾನುವಾರ) ಸಂಪೂರ್ಣವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ಕಿಂಗ್ಸ್‌ ರಸ್ತೆಯಲ್ಲಿ ಮಾತ್ರ ಎಂದಿನಂತೆ ವಾಹನ ಓಡಾಟ ಹಾಗೂ ಪಾರ್ಕಿಂಗ್‌ಗೆ ಅವಕಾಶವಿರುತ್ತದೆ. ವಾಹನ ನಿಲುಗಡೆಗೆ ಅವಕಾಶ ಕೊಟ್ಟಿರುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಪಾರ್ಕ್‌ ಅಭಿವೃದ್ಧಿ ಪಡಿಸಬೇಕಾದ ತೋಟಗಾರಿಕೆ ಇಲಾಖೆಯೇ ವಾಹನಗಳ ನಿಲುಗಡೆಗೆ ಅವಕಾಶ ಕೊಟ್ಟಿರುವ ಕುರಿತು ಪರಿಸರವಾದಿಗಳು, ಕಬ್ಬನ್‌ಪಾರ್ಕ್‌ ವಾಕರ್ಸ್‌ ಅಸೋಸಿಯೇಷನ್‌ ಆಕ್ಷೇಪ ವ್ಯಕ್ತಪಡಿಸಿದರೂ ಪ್ರಯೋಜನವಾಗಿಲ್ಲ. ವಾಹನಗಳ ಓಡಾಟದ ಜತೆಗೆ ನಿಲುಗಡೆಯಿಂದ ಉದ್ಯಾನವನದಲ್ಲಿರುವ ಮರ, ಗಿಡಗಳಿಗೆ ಹಾನಿಯಾಗುತ್ತಿದೆ ಹಾಗೂ ಪ್ರಾಣಿಗಳ ವಂಶಾಭಿವೃದ್ಧಿಗೂ ತೊಂದರೆ ಆಗುತ್ತದೆ.

ಸಮಸ್ಯೆ ಏನು?: ಪ್ರತಿ ವಾಹನ ಸ್ಟಾರ್ಟ್‌ ಮಾಡುವಾಗ ಮತ್ತು ನಿಲ್ಲಿಸುವಾಗ ಕೆಲವು ಸೆಕೆಂಡ್‌ಗಳು ವಾಹನಗಳು ಉಗುಳುವ ಹೊಗೆ ಮನುಷ್ಯನ ದೇಹದ ಮೇಲೆ ಮತ್ತು ಪಾರ್ಕ್‌ನಲ್ಲಿರುವ ಹಕ್ಕಿಗಳು, ಚಿಟ್ಟೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬೆಳಗ್ಗೆ 9ರ ನಂತರ ಅದು ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ. ಬಿಸಿಲಿನ ತಾಪ ಹೆಚ್ಚಾದ ಸಂದರ್ಭದಲ್ಲಿ ವಾಹನಗಳಿಂದ ಬರುವ ವಿಷಯುಕ್ತ ಅನಿಲ ಗಾಳಿಯಲ್ಲಿ ಬೆರೆತು ಇಡೀ ವಾತವರಣವೇ ಕಲುಷಿತಗೊಳ್ಳುತ್ತದೆ.

Advertisement

ಅದರಿಂದ ಮನುಷ್ಯನ ಕಣ್ಣು, ಹೃದಯ ಸಮಸ್ಯೆ ಉಂಟಾಗುತ್ತದೆ. ಮರ, ಗಿಡಗಳ ಎಲೆಗಳು, ಕಾಯಿ ಉದುರುವುದು, ಹಕ್ಕಿಗಳ ಮರಿಗಳು, ಚಿಟ್ಟೆಗಳ ಮೊಟ್ಟೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆ ಅವಧಿಯಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಅದನ್ನು ನಾವುಗಳು ಗಮನಿಸಲು ಸಾಧ್ಯವಾಗುವುದಿಲ್ಲ. ಆದರೆ, ನಿಧಾನವಾಗಿ ಅದರ ದುಷ್ಪರಿಣಾಮಗಳು ನಮ್ಮ ಅರಿವಿಗೆ ಬರುತ್ತವೆ ಎನ್ನುತ್ತಾರೆ ಪರಿಸರವಾದಿ ಯಲ್ಲಪ್ಪ ರೆಡ್ಡಿ.

ದಿನದಿಂದ ದಿನಕ್ಕೆ ಕಬ್ಬನ್‌ಪಾರ್ಕ್‌ನಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅಂದಾಜಿನ ಪ್ರಕಾರ ನಿತ್ಯ 10-15 ಸಾವಿರ ವಾಹನಗಳು ಪಾರ್ಕ್‌ ಒಳರಸ್ತೆಗಳಲ್ಲಿ ಓಡಾಡುತ್ತವೆ. ವಾಹನಗಳನ್ನು ನಿಲ್ಲಿಸುವ ನಿರ್ದಿಷ್ಟ ಜಾಗದಲ್ಲಿ ವಾಹನಗಳು ಉಗುಳುವ ಹೊಗೆ ಗಾಳಿಯಲ್ಲಿ ಬೆರೆತು, ಓಜೋನ್‌ ಪದರಕ್ಕೂ ಹಾನಿ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವುಗಳಿಗೆ ಕಡಿವಾಣ ಹಾಕಲೇಬೇಕು. ಕೂಡಲೇ ತೋಟಗಾರಿಕೆ ಇಲಾಖೆ ವಾಹನ ನಿಲುಗಡೆ ನಿಷೇಧಿಸಬೇಕು ಎಂದು ಯಲ್ಲಪ್ಪರೆಡ್ಡಿ ಹೇಳಿದರು.

ಎಲ್ಲೆಲ್ಲಿ ವಾಹನ ನಿಲುಗಡೆ?: ವಿಧಾನಸೌಧದಿಂದ ಪ್ರಸ್‌ಕ್ಲಬ್‌ ಮಾರ್ಗವಾಗಿ ವಿಠ್ಠಲ ಮಲ್ಯ ರಸ್ತೆಗೆ ಹೋಗುವ ಕಿಂಗ್ಸ್‌ ರಸ್ತೆಯ ಎಡಬದಿಯಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ಇನ್ನು ಕಬ್ಬನ್‌ಪಾರ್ಕ್‌ನ ಪ್ರವೇಶ ದ್ವಾರ(ಮತ್ಸಾಲಯ ಹಾಗೂ ಬಾಲಭವನ ಮುಂಭಾಗ) ತೋಟಗಾರಿಕೆ ಇಲಾಖೆಯೇ ಅಧಿಕೃತವಾಗಿ ವಾಹನ ನಿಲುಗಡೆಗೆ ಅವಕಾಶ ನೀಡಿದೆ. ಬಿಎಸ್‌ಎನ್‌ಎಲ್‌ ಕಚೇರಿ ಮುಂಭಾಗದಲ್ಲಿ ಸಂಚಾರ ಪೊಲೀಸರು ಟೋಯಿಂಗ್‌ ಮಾಡುವ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಕೇಂದ್ರ ಗ್ರಂಥಾಲಯ ಮುಂಭಾಗ ಹಾಗೂ ಕರ್ನಾಟಕ ಸಚಿವಾಲಯ ಕ್ಲಬ್‌ ಮುಂಭಾಗದಲ್ಲಿಯೂ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ.

ವಾಹನ ಓಡಾಡುವುದು, ನಿಲುಗಡೆ ಮಾಡುವುದರಿಂದ ಎಷ್ಟು ಪ್ರಮಾಣದಲ್ಲಿ ವಾತಾವರಣ ಕಲುಷಿತವಾಗುತ್ತದೆ ಆಗುತ್ತದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಹೊರಗಡೆ ಹೊಲಿಸಿದರೆ ಈ ಭಾಗದಲ್ಲಿ ಉತ್ತಮ ಗಾಳಿ ಇದೆ. ವಾಹನಗಳು ಓಡಾಟ ಕಡಿಮೆ ಮಾಡಿದರೆ, ಇನ್ನಷ್ಟು ಒಳ್ಳೆಯ ಗಾಳಿ ಪಡೆಯಬಹುದು. ಸದ್ಯ ಹಡ್ಸನ್‌ ವೃತ್ತದಿಂದ ಕಬ್ಬನ್‌ಪಾರ್ಕ್‌ ಪ್ರವೇಶಿಸುವ ದಾರಿಯನ್ನು ಮಚ್ಚುವ ಪ್ರಸ್ತಾವ ಸರ್ಕಾರದ ಮುಂದಿದೆ. ಆಗ ಇನ್ನಷ್ಟು ಉತ್ತಮ ವಾತಾವರಣ ನಿರ್ಮಾಣ ಮಾಡಬಹುದು.
-ಜಿ. ಕುಸುಮಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನ

ವಾಹನ ನಿಲುಗಡೆ ನಿಷೇಧಿಸುವ ಕುರಿತು ಈ ಹಿಂದೆ ಬಹಳಷ್ಟು ಬಾರಿ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಲಾಲ್‌ಬಾಗ್‌ ಮಾದರಿಯಲ್ಲಿಯೇ ಕಬ್ಬನ್‌ಪಾರ್ಕ್‌ನಲ್ಲಿಯೂ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ಅವಕಾಶ ಕೊಡಬಾರದು.
-ಎಸ್‌.ಉಮೇಶ್‌, ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next