ಬೆಂಗಳೂರು: ಕಬ್ಬನ್ ಉದ್ಯಾನಕ್ಕೆ ಹಡ್ಸನ್ ವೃತ್ತದ ಬಳಿ ತೋಟಗಾರಿಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಿರುವ ಪ್ರವೇಶದ್ವಾರವನ್ನು ತೋಟಗಾರಿಕೆ ಇಲಾಖೆ ಸಚಿವ ಎಂ.ಸಿ.ಮನಗೂಳಿ ಬುಧವಾರ ಉದ್ಘಾಟಿಸಿದರು.
ಜತೆಗೆ ಉದ್ಯಾನದಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಹಮ್ಮಿಕೊಂಡಿರುವ ಸೈಕಲ್ ಪ್ರವಾಸೋದ್ಯಮ ಹಾಗೂ ಉದ್ಯಾನದಲ್ಲಿ 600 ಸಸಿ ನೆಡುವ ಕಾರ್ಯಕ್ರಮಕ್ಕೂ ಸಚಿವರು ಚಾಲನೆ ನೀಡಿದರು. ಮೇಯರ್ ಗಂಗಾಂಬಿಕೆ, ತೋಟಗಾರಿಕೆ ಇಲಾಖೆ ಆಯುಕ್ತ ವೆಂಕಟೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿದೇಶಕರ ಮಹಾಂತೇಶ್ ಮುರುಗೋಡ ಅವರು, 1948ರಲ್ಲಿ ರಾಜ್ಯ ಸರ್ಕಾರ ಚಾಮರಾಜೇಂದ್ರ ಉದ್ಯಾನವನವೆಂದು ಆದೇಶ ಹೊರಡಿಸಿತು. ಕಬ್ಬನ್ ಉದ್ಯಾನದಲ್ಲಿ ಒಟ್ಟು 7 ಪ್ರವೇಶದ್ವಾರವಿದ್ದು, ಅವುಗಳಲ್ಲಿ ಎಲ್ಲೂ ಈ ಹೆಸರನ್ನು ನಮೂದಿಸಿರಲಿಲ್ಲ. ಹೀಗಾಗಿಯೇ, ಕಬ್ಬನ್ ಪಾರ್ಕ್ ಅಂತಲೇ ಪ್ರಸಿದ್ಧಿ ಪಡೆದಿದೆ.
ಇನ್ನು ಎರಡು ವರ್ಷಗಳ ಹಿಂದೆ ಹೈಕೋರ್ಟ್ ಬಳಿ ಒಂದು ಪ್ರವೇಶ ದ್ವಾರ ನಿರ್ಮಾಣ ಮಾಡಿ ಚಾಮರಾಜೇಂದ್ರ ಉದ್ಯಾನ ಎಂದು ಹೆಸರನ್ನು ಸೂಚಿಸಲಾಗಿತ್ತು. ಆ ಬಳಿಕ ಹಡ್ಸಸ್ ವೃತ್ತದ ಬಳಿ 40 ಲಕ್ಷ ರೂ. ವೆಚ್ಚದಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ ಎಂದರು.
ಇನ್ನು ಉದ್ಯಾನದಲ್ಲಿ ಸೈಕಲ್ ಪ್ರವಾಸೋದ್ಯಮ ಆರಂಭಿಸಲಾಗಿದೆ. ಡಿಸ್ಕವರಿ ವಿಲೇಜ್ ಸಹಯೋಗದೊಂದಿಗೆ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ನಿಗದಿತ ದರದೊಂದಿಗೆ ಆ್ಯಪ್ ಒಂದರ ಮೂಲಕ ಸೈಕಲ್ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸೈಕಲ್ ದರಪಟ್ಟಿ
-500 ರೂ. ಭದ್ರತಾ ಠೇವಣಿ
-50 ರೂ. ಮೊಲದ 3 ಗಂಟೆಗೆ
-100 ರೂ. 3ರಿಂದ 6 ಗಂಟೆಗೆ
ನೋಂದಾಯಿತ ಸದಸ್ಯರಿಗೆ ದರಪಟ್ಟಿ
-25 ರೂ. ಮೊದಲ ಎರಡು ಗಂಟೆಗೆ
-50 ರೂ. 2-4 ಗಂಟೆಗೆ
-75 ರೂ. 4-6 ಗಂಟೆಗೆ
-100 ರೂ. 6 ಗಂಟೆ ಮೇಲ್ಪಟ್ಟು