Advertisement

ಕಬ್ಬನ್‌ ಉದ್ಯಾನಕ್ಕೆ ಹೊಸ ಸ್ಪರ್ಶ

11:35 AM Oct 28, 2018 | Team Udayavani |

ಬೆಂಗಳೂರು: ರಾಜಧಾನಿ ಕೇಂದ್ರ ಭಾಗದಲ್ಲಿರುವ ಪಾರಂಪಾರಿಕ ಇತಿಹಾಸ ಹೊಂದಿರುವ  ಕಬ್ಬನ್‌ ಉದ್ಯಾನಕ್ಕೆ ಹೊಸ ಸ್ಪರ್ಶ ನೀಡಲು ಬೆಸ್ಕಾಂ, ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಮುಂದಾಗಿ ರೂಪು-ರೇಷೆ ಸಿದ್ಧಪಡಿಸಿದೆ.

Advertisement

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಯೋಜನೆಯ ಅನುದಾನವೂ ಸಿಕ್ಕಿದೆ. ವಾಯುವಿಹಾರಿಗಳ ನೆಚ್ಚಿನ ತಾಣವಾಗಿರುವ ಕಬ್ಬನ್‌ ಉದ್ಯಾನಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದು ಶೌಚಾಲಯ, ಬೀದಿದೀಪ, ಪಾದಾಚಾರಿ ಮಾರ್ಗದಂತಹ ಮೂಲ ಸೌಕರ್ಯಗಳ ಸಮಸ್ಯೆ ಇದೆ.

ಇದನ್ನು ನಿವಾರಿಸಲು ಕಾರ್ಯಯೋಜನೆ ರೂಪಿಸಿದ್ದು  ಈಗಾಗಲೇ ಕಾಮಗಾರಿಯೂ ಆರಂಭಗೊಂಡಿದೆ.  ಜತೆಗೆ ಆಯುಷ್ಯ ತುಂಬಿದ ಬಿದಿರು ಮರಗಳು ಆಗ್ಗಾಗ್ಗೆ ನೆಲಕ್ಕುರುಳಿ ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ, ಹಳೆಯ ಬಿದಿರು ಮರಗಳನ್ನು ಬುಡದಿಂದಲೇ ತೆರವುಗೊಳಿಸಿ ಹೊಸ ತಳಿಯ ಬಿದಿರು ನೆಡಲಾಗುತ್ತಿದೆ. 

ಆರು ಕೋಟಿ ರೂ. ವೆಚ್ಚದಲ್ಲಿ ಬೀದಿದೀಪಗಳು: ಕಬ್ಬನ್‌ ಉದ್ಯಾನದಲ್ಲಿರುವ ಸುಮಾರು 50 ವರ್ಷ ಹಳೆಯ ಬೀದಿದೀಪಗಳಿಗೆ ಮುಕ್ತಿ ನೀಡಲು ಕಳೆದ ವರ್ಷವೇ ಬೆಸ್ಕಾಂ ಯೋಜನೆ ರೂಪಿಸಿತ್ತು. ಕಾರಣಾಂತರಗಳಿಂದ ಕಾಮಗಾರಿ ಕೇವಲ ಕಾಗದಕ್ಕೆ ಸೀಮಿತವಾಗಿತ್ತು. ಪ್ರಸ್ತುತ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ಒಟ್ಟು ಆರು ಕೋಟಿ ರೂ. ವೆಚ್ಚದಲ್ಲಿ ಉದ್ಯಾನದ ಎಲ್ಲಾ 750 ದೀಪ ಹಾಗೂ ಕಂಬಗಳನ್ನು ಇಲಾಖೆ ಬದಲಿಸುತ್ತಿದೆ.

ಉದ್ಯಾನದ ಒಂದು ಬದಿಯಿಂದ ಕಾಮಗಾರಿ ನಡೆಸುತ್ತಿದ್ದು, ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.  ಹೊಸ ಕಂಬಗಳ ಹಾಕಿದ ನಂತರ ಹಳೆಯ ಕಂಬಗಳನ್ನು ತೋಟಗಾರಿಗೆ ಇಲಾಖೆ ಅಧೀನಕ್ಕೆ ನೀಡಲಾಗುತ್ತಿದ್ದು, ಅವುಗಳನ್ನು ನಗರದ ಇತರೆ ಉದ್ಯಾನಗಳಲ್ಲಿ ಬಳಸಿಕೊಳ್ಳುವಂತೆ ದುರಸ್ತಿ ಮಾಡಿಕೊಡಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಹಳೆಯ ಬಿದುರು ಜಾಗಕ್ಕೆ ಹೊಸ ಬಿದಿರು: ಉದ್ಯಾನದಲ್ಲಿ ಅರಣ್ಯ ಇಲಾಖೆಯ ಸಹಾಯ ಪಡೆದು ಹಳೆಯ 200ಕ್ಕೂ ಹೆಚ್ಚು ಬಿದಿರು ಮರಗಳನ್ನು ತೆರವು ಮಾಡಿ ಆ ಜಾಗದಲ್ಲಿ ಅರಣ್ಯ ಇಲಾಖೆಯ ನರ್ಸರಿಗಳಿಂದ 400 ದೇಸಿ ಮತ್ತು ವಿದೇಶಿ ಆಕರ್ಷಕ ಬಿದಿರು ತಳಿಗಳನ್ನು ತರಿಸಿ ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಉದ್ಯಾನದಲ್ಲಿ ಅಗತ್ಯ ಶೌಚಾಲಯಗಳಿಲ್ಲದೆ ವಾಯುವಿಹಾರಿಗಳಿಗೆ ಸಮಸ್ಯೆಯಾಗುತ್ತಿತ್ತು.

ಈ ಕುರಿತು ಉದ್ಯಾನ ಅಧಿಕಾರಿಗಳು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಅವರಿಗೆ ನೆರವು ಕೋರಿದ್ದು, ಅದಕ್ಕೆ ಸ್ಪಂದಿಸಿದ ಸಂಸದರು ಒಟ್ಟು 60 ಲಕ್ಷ ರೂ. ಅನುದಾನ ನೀಡಿದ್ದಾರೆ. ಅನುದಾನ ಬಳಸಿಕೊಂಡು ಉದ್ಯಾನದ ಬಾಲಭವನ, ಯುಬಿ ಸಿಟಿ ದ್ವಾರ ಹಾಗೂ ಸೆಂಚುರಿ ಕ್ಲಬ್‌ ಪಕ್ಕ ವೈನ್‌ಬೋರ್ಡ್‌ ಬಳಿ ಹೈಟೆಕ್‌ ಶೌಚಾಲಯಗಳು ನಿರ್ಮಾಣವಾಗಿದ್ದು, ಮುಂದಿನ ತಿಂಗಳು ಸಾರ್ವಜನಿಕ ಮುಕ್ತವಾಗಲಿವೆ.  

ಹೈಟೆಕ್‌ ಬೀದಿದೀಪಗಳು: ಬೆಸ್ಕಾಂ ಅಳವಡಿಸುತ್ತಿರುವ ಬೀದಿದೀಪಗಳು ಸ್ವಯಂ ಚಾಲಿತ ತಂತ್ರಜ್ಞಾನ ಜತೆಗೆ ಡಿಮ್ಮರ್‌, ಮೋಷನ್‌ ಸೆನ್ಸಾರ್‌ನಂತಹ ಹೈಟೆಕ್‌ ತಂತ್ರಜ್ಞಾನ ಹೊಂದಿವೆ. ಇದರಿಂದ ವಾತಾವರಣದ ಬೆಳಕಿನ ತೀಕ್ಷ್ಣತೆಗೆ ತಕ್ಕಂತೆ ದೀಪಗಳು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿವೆ. ಜತೆಗೆ ಮೋಷನ್‌ ಸೆನ್ಸಾರ್‌ ಇರುವುದರಿಂದ ಸಂಜೆ ಹಾಗೂ ರಾತ್ರಿ ವೇಳೆ ಸಾರ್ವಜನಿಕರು ಸಂಚರಿಸಿದಾಗ ಮಾತ್ರ ಕಾರ್ಯನಿರ್ವಹಿಸುತ್ತವೆ. ಮೊದಲ ಬಾರಿಗೆ ಈ ತಂತ್ರಜ್ಞಾನದ ಬೀದಿ ದೀಪಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ.    

ಸ್ಮಾರ್ಟ್‌ಸಿಟಿಯಡಿ 20 ಕೋಟಿ ರೂ.: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ  ಕಬ್ಬನ್‌ ಉದ್ಯಾನವನ್ನು ಅಭಿವೃದ್ಧಿ ಪಡಿಸಲು ಪಾಲಿಕೆ ಮುಂದಾಗಿದ್ದು, 20 ಕೋಟಿ ರೂ. ಮೀಸಲಿಟ್ಟಿದೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯು ಉದ್ಯಾನದ ಅಗತ್ಯತೆ ಹಾಗೂ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಿದೆ.

 ಈಗಾಗಲೇ ವಿಶೇಷ ಉದ್ದೇಶ ವಾಹಕ (ಎಸ್‌ವಿಪಿ), ಪಾಲಿಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಲಾಗಿದ್ದು, ಸ ರ್ಕಾರವು ಅನು ಮೋ ದನೆ ನೀಡಿದೆ. ಇನ್ನು ವರ್ಷಾಂತ್ಯಕ್ಕೆ ಕಾಮಗಾರಿಗಳ ಟೆಂಡರ್‌ ಕರೆಯಲಾಗುವುದು. ಪ್ರಸ್ತಾವನೆಯಲ್ಲಿ ಉದ್ಯಾನದಲ್ಲಿ ಜ್ಞಾನಾರ್ಜನೆ ಕೇಂದ್ರ ನಿರ್ಮಾಣ, ಬಾಲಭವನ ಬಳಿಯ ಕೆರೆ ಪುನರುಜ್ಜೀವನ, ಸಮರ್ಪಕ ಪಾದಾಚಾರಿ ಮಾರ್ಗ ನಿರ್ಮಾಣ, ಇಂಗು ಗುಂಡಿಗಳ ನಿರ್ಮಾಣ, ಸುರಕ್ಷಿತ ಬೇಲಿ ಅಳವಡಿಕೆ, ಸೈಕಲ್‌ ಪಥ ಹಾಗೂ ಪರಿಸರ ಸ್ನೇಹಿ ಕಲಾಕೃತಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ . 

ಸಿಲಿಕಾನ್‌ ಸಿಟಿಯನ್ನು ಸ್ಮಾರ್ಟ್‌ ಸಿಟಿಯನ್ನಾಗಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮುಂದಾಗಿದ್ದು, ಅದರಂತೆ ನಗರದ ವಿವಿಧ ಪ್ರದೇಶಗಳ ಮರು ನಿರ್ಮಾಣ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅದರಂತೆ ಈ ಬಾರಿ ಕಬ್ಬನ್‌ ಉದ್ಯಾನಕ್ಕೆ ಆಯ್ಕೆ ಮಾಡಿದ್ದು, 20 ಕೋಟಿ ರೂ. ಮೀಸಲಿರಿಸಲಾಗಿದೆ. 
-ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ  

ಕಬ್ಬನ್‌ ಉದ್ಯಾನದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸೌಂದರ್ಯ ಮತ್ತಷ್ಟು ಹೆಚ್ಚಿಸಲು ಸರ್ಕಾರದ ವಿವಿಧ ಇಲಾಖೆಗಳು ನೆರವು ನೀಡುತ್ತಿವೆ. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ 20 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಹಾಯಕವಾಗಲಿದೆ.
-ಮಹಾಂತೇಶ್‌ -ಮುರುಗೋಡ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ  

ಉದ್ಯಾನದಲ್ಲಿದ್ದ 50 ವರ್ಷ ಹಳೆಯ ಬೀದಿದೀಪಗಳನ್ನು ಬದಲಿಸಿ ಅವುಗಳ ಜಾಗಕ್ಕೆ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ 750 ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ. ಎಇಡಿ ಬಲ್ಬ್ನೊಂದಿಗೆ ಡಿಮ್ಮರ್‌, ಮೋಷನ್‌ ಸೆನ್ಸಾರ್‌ನಂತಹ ಹೈಟೆಕ್‌ ತಂತ್ರಜ್ಞಾನಗಳನ್ನು ಹೊಂದಿವೆ.
-ಜಿ.ಶೀಲಾ, ಪ್ರಧಾನ ವ್ಯವಸ್ಥಾಪಕರು, ಗ್ರಾಹಕ ಸಂಪರ್ಕ ವಿಭಾಗ ಬೆಸ್ಕಾಂ.  

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next