ಬೆಂಗಳೂರು: ಒಳಚರಂಡಿ ಕೊಳವೆ ಬಿರುಕು ಬಿಟ್ಟ ಪರಿಣಾಮ ಕಬ್ಬನ್ ಪಾರ್ಕ್‌ನ ಒಂದು ಬದಿಯಲ್ಲಿ ಹಲವು ದಿನಗಳಿಂದ ಕೊಳಚೆ ನೀರು ಹರಿಯುತ್ತಿದ್ದು, ದುರ್ನಾತದೊಂದಿಗೆ ಇಡೀ ಪ್ರದೇಶದ ನೈರ್ಮಲ್ಯ ಹಾಳಾಗಿ ವಾಯುವಿಹಾರಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಹಾದು ಹೋಗಿರುವ ಜಲಮಂಡಳಿ ಒಳಚರಂಡಿ ಮುಖ್ಯ ಕೊಳವೆಯಲ್ಲಿ ಬಿರುಕು ಕಾಣಿಸಿಕೊಂಡು ಬಾಲ ಭವನ ಬಳಿ ಕೊಳಚೆ ನೀರು ಉದ್ಯಾನದ ಕಡೆಗೆ ಹರಿಯುತ್ತಿದೆ. ಇದರಿಂದಾಗಿ ಬಾಲಭವನದ ಸುತ್ತಮುತ್ತ ದುರ್ವಾಸನೆ ಹೆಚ್ಚಾಗಿದೆ.
ಕೆಲ ದಿನಗಳಿಂದ ನಿರಂತರವಾಗಿ ಹರಿಯುತ್ತಿರುವ ಕೊಳಚೆ ನೀರು, ಕಬ್ಬನ್ ಉದ್ಯಾನದ ಕೆರೆ ಸೇರುತ್ತಿದ್ದು, ಆ ಭಾಗದಲ್ಲೆಲ್ಲಾ ಇನ್ನಷ್ಟು ದುರ್ವಾಸನೆ ವ್ಯಾಪಿ ಸಿದೆ. ಜತೆಗೆ ಸೊಳ್ಳೆ ಹಾವಳಿ ಹೆಚ್ಚಾಗಿದೆ. ಇದೇ ಕೊಳವೆ ಮಾರ್ಗ ರಾಜಭವನದ ರಸ್ತೆಯ ಪ್ರಧಾನ ಅಂಚೆ ಕಚೇರಿ ಬಳಿಯೂ ಒಡೆದಿದ್ದು, ರಸ್ತೆ ತುಂಬೆಲ್ಲಾ ಕೊಳಚೆ ನೀರು ಹರಿದು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಈ ಕುರಿತು ಕಬ್ಬನ್ ಉದ್ಯಾನದ ಅಧಿಕಾರಿಗಳು ಹಾಗೂ ಸಾರ್ವಜನಿಕರು ದೂರು ನೀಡಿದ್ದರೂ ಜಲಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ.
ತೆರವಾಗದ ಬಿದಿರು ಮರ: ಉದ್ಯಾನದಲ್ಲಿ ಹೂ ಬಿಟ್ಟು ಸೊರಗಿದ ಬಿದಿರು ಮೆಳೆ ಗಳು ಯಾವುದೇ ಸಂದರ್ಭದಲ್ಲೂ ಬುಡಮೇಲಾಗುವ ಸ್ಥಿತಿಯಲ್ಲಿವೆ. ಅವುಗಳ ತೆರವಿಗೆ ತಿಂಗಳ ಹಿಂದೆಯೇ ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿತ್ತು. ಆದರೆ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ತಿಂಗಳಿಂದೀಚೆಗೆ ನಗರದಲ್ಲಿ ಸುರಿದ ಮಳೆಗೆ ಉದ್ಯಾನದಲ್ಲಿ ಮೂರ್‍ನಾಲ್ಕು ಬೃಹದಾಕಾರದ ಮರಗಳು ಧರೆಗುರುಳಿವೆ. ಅವುಗಳ ತೆರವು ಕಾರ್ಯವೂ ವಿಳಂಬವಾಗಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕಬ್ಬನ್ ಉದ್ಯಾನಕ್ಕೆ ಹಲವು ದಿನಗಳಿಂದ ಕೊಳಚೆ ನೀರು ಹರಿಯುತ್ತಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಶುದ್ಧ ಗಾಳಿ ಸೇವನೆಗೆಂದು ಉದ್ಯಾನಕ್ಕೆ ಬರುವವರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ನಡೆದಾಡುವಂತಾಗಿದೆ.
-ರಮೇಶ್, ವಾಯುವಿಹಾರಿ
ಒಳಚರಂಡಿ ಕೊಳವೆ ಬಿರುಕು ಬಿಟ್ಟಿರುವ ಬಗ್ಗೆ ಈಗಾಗಲೇ ಜಲಮಂಡಳಿಗೆ ದೂರು ನೀಡಲಾಗಿದ್ದು, ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ತಿಂಗಳೊಳಗೆ ಅರಣ್ಯ ಇಲಾಖೆ ನೆರವಿನೊಂದಿಗೆ ಉದ್ಯಾನದಲ್ಲಿ ಒಣಗಿದ ಬಿದಿರು ಮೆಳೆಗಳನ್ನು ತೆರವುಗೊಳಿಸಿ ಹೊಸದಾಗಿ ನಾಟಿ ಮಾಡಿಸಲಾಗುವುದು.
-ಮಂಹಾತೇಶ್ ಮುರಗೋಡ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ (ಕಬ್ಬನ್ ಉದ್ಯಾನವನ)