Advertisement

ಉಸ್ತುವಾರಿ ಸಚಿವರೇ ಇಲ್ಲ ; ಕೊರೊನಾ ಸಂಕಷ್ಟ ನಿಲ್ತಿಲ್ಲ!

04:47 PM Apr 24, 2021 | Team Udayavani |

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಲೇ ಇದ್ದು, ಈ ಪರಿಸ್ಥಿತಿಯಲ್ಲಿ ಜನರೊಟ್ಟಿಗಿದ್ದು ಅವರಿಗೆ ಧೈರ್ಯ ತುಂಬಬೇಕಾದ ಜಿಲ್ಲೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾದ ಉಸ್ತುವಾರಿ ಸಚಿವರೇ ಇಲ್ಲದಿರುವುದು ಜಿಲ್ಲೆ ಜನರ ದೌರ್ಭಾಗ್ಯವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ. ರವಿ ಅವರು ನೇಮಕವಾದ ಬಳಿಕ “ಒಬ್ಬರಿಗೆ ಒಂದು ಹುದ್ದೆ’ (ಪಕ್ಷದ ಅಲಿಖೀತ ನಿಯಮ)ಯಂತೆ 2020 ಅ.5ರಂದು ತಮ್ಮ ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದರು.

Advertisement

ಒಂದೂವರೆ ತಿಂಗಳ ಕಾಲ ಮಂತ್ರಿಯಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿದು ಅವರ ರಾಜೀನಾಮೆ ಅಂಗಿಕಾರಗೊಂಡ ಬಳಿಕ 5 ತಿಂಗಳು ಕಳೆದರೂ ಸರ್ಕಾರ ಮಾತ್ರ ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಜಿಲ್ಲೆಯಲ್ಲಿ ಕಠಿಣ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರು ಸಂಪರ್ಕ ಕೊಂಡಿಯಾಗಿರಬೇಕು. ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಹೆಚ್ಚಿನ ನೆರವನ್ನು ಪಡೆದುಕೊಳ್ಳಬೇಕು. ಜನರೊಟ್ಟಿಗಿದ್ದು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸ ಮಾಡಬೇಕು.

ಆದರೆ, ಇಷ್ಟು ದಿನಗಳು ಕಳೆದರೂ ಉಸ್ತುವಾರಿ ಸಚಿವರನ್ನು ನೇಮಕ ಮಾಡದಿರುವುದು ಯಾಕೆ ಎಂಬ ಜಿಲ್ಲೆಯ ಜನರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಾದಾಗ ಜಿಲ್ಲಾ ಉಸ್ತುವಾರಿ ಸಚಿವರು ಸಾಲು ಸಾಲು ಸಭೆ ನಡೆಸಿ ಅ ಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗಿತ್ತು. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲೂ ಆಡಳಿತ ಯಂತ್ರವನ್ನು ಚುರುಕುಗೊಳಿಸಲಾಗಿತ್ತು. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲವನ್ನು ಅಂದಿನ ಉಸ್ತುವಾರಿ ಸಚಿವರು ಮಾಡಿದ್ದರು. ಇಂದು ಕೊರೊನಾ ಎರಡನೇ ಅಲೆ ವ್ಯಾಪಕವಾಗುತ್ತಿದ್ದು, ಜನರೊಟ್ಟಿಗಿದ್ದು ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲದಂತಾಗಿದೆ. ಶಾಸಕ ಸಿ.ಟಿ. ರವಿ ಸೇರಿದಂತೆ ಇನ್ನುಳಿದ ಶಾಸಕರು ಅಧಿಕಾರಿಗಳ ಸಭೆ ನಡೆಸಿ ಕೊರೊನಾ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ, ಜನರಲ್ಲಿ ಆತ್ಮಸ್ಥೈರ್ಯ, ಆಡಳಿತ ಯಂತ್ರ ಚುರುಕುಗೊಳಿಸುವ ಹಾಗೂ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇರಬೇಕಿತ್ತು ಎಂಬುದು ಜನರ ಅಭಿಪ್ರಾಯವಾಗಿದೆ.

 ಜಿಲ್ಲೆಯ ಕಡೆ ಮುಖ ಮಾಡದ ಸಂಸದರು: ಜಿಲ್ಲೆಯಲ್ಲಿ ಕೋವಿಡ್‌-19 ಎರಡನೇ ಅಲೆ ನಿಧಾನಗತಿಯಲ್ಲಿ ವೇಗ ಪಡೆದುಕೊಳ್ಳುತ್ತಿದೆ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಸರ್ಕಾರ ಅನೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜನರಲ್ಲಿ ಜೀವಭಯ ನಿರಂತರವಾಗಿ ಕಾಡುತ್ತಿದೆ. ಆದರೆ ಜಿಲ್ಲೆಯ ಜನತೆಯನ್ನು ಪ್ರತಿನಿಧಿ ಸುವ ಸಂಸದೆ ಶೋಭಾ ಕರಂದ್ಲಾಜೆ ಅವರು ಜಿಲ್ಲೆಗೆ ಭೇಟಿ ನೀಡಿ ಜನರಲ್ಲಿ ಆತ್ಮಸ್ಥೈರ್ಯ ಮತ್ತು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡದಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ವಾರದಲ್ಲಿ ಎರಡು ದಿನ ಜಿಲ್ಲೆಗೆ ಭೇಟಿ ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದರು.

ಆದರೆ, ಇಂತಹ ವಿಷಮ ಪರಿಸ್ಥತಿಯಲ್ಲಿ ಸಂಸದರು ಜಿಲ್ಲೆಯ ಜನರೊಟ್ಟಿಗಿಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಡೂರು ಲೋಕಸಭಾ ಕ್ಷೇತ್ರವನ್ನು ಸಂಸದ ಪ್ರಜ್ವಲ್‌ ರೇವಣ್ಣ ಪ್ರತಿನಿಧಿ ಸುತ್ತಿದ್ದು, ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯವಹಿಸಿರುವುದಕ್ಕೆ ಜನರಲ್ಲಿ ಬೇಸರ ವ್ಯಕ್ತವಾಗುತ್ತಿದೆ. ಕೊರೊನಾದಂತಹ ವಿಷಮ ಪರಿಸ್ಥತಿಯಲ್ಲಿ ಜನರೊಟ್ಟಿಗಿರಬೇಕಾದ ಜನಪ್ರತಿನಿಧಿ ಗಳು ಇಲ್ಲದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next