Advertisement

ವಿತಂಡವಾದದ ಮಿಥ್ಯೆಯನ್ನು ವೈಚಾರಿಕತೆಯ ಸತ್ಯದೊಂದಿಗೆ ಎದುರಿಸಬೇಕು : ಸಿ.ಟಿ.ರವಿ

01:55 AM Jun 12, 2022 | Team Udayavani |

ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಗೆ ಮಾಡುತ್ತಿರುವ ವಿರೋಧ ಹಾಗೂ ಅಪಪ್ರಚಾರವು ಹಿಂದುತ್ವವನ್ನು ಜಾತಿಯ ಮೂಲಕ ತುಂಡರಿಸುವ, ರಾಷ್ಟ್ರೀಯತೆಯನ್ನು ಪ್ರಾದೇಶಿಕವಾದದಿಂದ ದುರ್ಬಲಗೊಳಿಸುವ ಸಂಚಿನ ಭಾಗವಾಗಿದೆ. ಈ ವಿತಂಡವಾದದ ಮಿಥ್ಯೆಯನ್ನು ವೈಚಾರಿಕತೆಯ ಸತ್ಯದೊಂದಿಗೆ ಎದುರಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Advertisement

ಪಠ್ಯ ರಾಜಕಾರಣ: ಸತ್ಯ-ಮಿಥ್ಯೆ ವಿಚಾರದಲ್ಲಿ ಸಿಟಿಜನ್‌ ಕೌನ್ಸಿಲ್‌ ಮಂಗಳೂರು ಚಾಪ್ಟರ್‌ ನಗರದ ಸಂಘ ನಿಕೇತನದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಪ್ರಸ್ತುತ ನಡೆಯುತ್ತಿರುವುದು ಭಾರತೀಕರಣ ಮತ್ತು ತುಕ್‌ಡೆ ಗ್ಯಾಂಗ್‌ಗಳ ನಡುವಣ ಸಂಘರ್ಷ. ರಾಷ್ಟ್ರೀಯತೆಯ ಚಿಂತನೆ ಒಂದೆಡೆಯಾದರೆ ಆದನ್ನು ದುರ್ಬಲಗೊಳಿಸುವ ಹುನ್ನಾರಗಳು ಇನ್ನೊಂದೆಡೆ. ಇದನ್ನು ಎದುರಿಸುವ ತಾಕತ್ತು ವೈಚಾರಿಕತೆಗೆ ಇದೆ. ವೈಚಾರಿಕ ಯುದ್ಧದಲ್ಲಿ ಸತ್ಯ ಎಂದಿಗೂ ಗೆಲ್ಲುತ್ತದೆ ಎಂದರು.

ಈಗ ದೊರೆಯುತ್ತಿರುವುದು ಮಾರ್ಕ್‌ ಮತ್ತು ಮಾರ್ಕ್ಸ್ ವಾದದ ಶಿಕ್ಷಣ. ಕಾಂಗ್ರೆಸ್‌, ಕಮ್ಯುನಿಸ್ಟ್‌ ಮತ್ತು ಕನ್ವರ್ಷನ್‌ ಈ ಮೂರು “ಸಿ ಕ್ಯೂಬ್‌’ಗಳು ಸೇರಿ ಶಿಕ್ಷಣದಲ್ಲಿ ಭಾರತೀಯತೆ ಯನ್ನು ಹೊಸಕಿಹಾಕಿವೆ. ಸ್ವಾತಂತ್ರ್ಯದ ಬಳಿಕ ಬಹಳಷ್ಟು ವರ್ಷ ಮಾನವ ಸಂಪನ್ಮೂಲ, ಶಿಕ್ಷಣ ಖಾತೆ ಒಂದು ವರ್ಗದ ಕೈಯಲ್ಲಿತ್ತು. ಅಲ್ಲಿಂದ ಇಲ್ಲಿವರೆಗೂ ಋಣಾತ್ಮಕ ಅಂಶಗಳನ್ನೇ ಪಠ್ಯಪುಸ್ತಕಗಳಲ್ಲಿ ಹೇಳುತ್ತ ಮಿಥ್ಯೆಯನ್ನೇ ಮಕ್ಕಳಿಗೆ ಕಲಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ| ಧರ್ಮ ಅವರು ವಾಸ್ತವಿಕತೆ ಏನು ಎಂಬುದನ್ನು ತಿಳಿಯಪಡಿಸ ಬೇಕಾಗಿದೆ. ರಾಷ್ಟ್ರೀಯ ಏಕತೆ ಜತೆಗೆತ್ಯಾಗವನ್ನು ಬೆಳೆಸಿಕೊಳ್ಳಬೇಕು. ಪಠ್ಯಗಳು ಇದಕ್ಕೆ ಅಡಿಪಾಯವಾಗಬೇಕಾಗಿದೆ ಎಂದವರು ಹೇಳಿದರು.

ಶಾಸಕ ಕುಮಾರ್‌ ಬಂಗಾರಪ್ಪ ಪ್ರಸ್ತಾವನೆಗೈದರು. ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಸ್ವಾಗ‌ತಿಸಿದರು. ಸಿಟಿಜನ್‌ ಕೌನ್ಸಿಲ್‌ ಮಂಗಳೂರು ಚಾಪ್ಟರ್‌ ಅಧ್ಯಕ್ಷ ಎಂ.ಚಿದಾನಂದ ಕೆದಿಲಾಯ ಅವರು ವಂದಿಸಿದರು.

Advertisement

ಆಕ್ರಮಣ ಮಾಡಿದವರ ವೈಭವೀಕರಣ
ಅಲೆಕ್ಸಾಂಡರ್ ನನ್ನು ಗ್ರೇಟ್‌ ಎಂದು ಮಕ್ಕಳಿಗೆ ಕಲಿಸಲಾಗುತ್ತಿದೆ. ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಆತ ನಮಗೆ ಹೇಗೆ ಗ್ರೇಟ್‌? ನಮ್ಮ ದೇಶದ ವೀರ ಪುರುಷರು, ವೀರಸಾವರ್ಕರ್‌, ಶಿವಾಜಿ ಮಹಾರಾಜ್‌, ರಾಮಾಯಣ, ಮಹಾಭಾರತದ ಬಗ್ಗೆ, ನಮ್ಮ ಪರಂಪರೆಯ ಶ್ರೇಷ್ಠತೆಯ ಬಗ್ಗೆ ಯಾವುದೇ ಪಠ್ಯದಲ್ಲಿ ಕಲಿಸುತ್ತಿಲ್ಲ. ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದುರಸ್ತಿ ಮಾಡುವ ಕಾರ್ಯ ಆರಂಭಗೊಂಡಿದೆ. ಈಗ ಆಗಿರುವುದು ಸ್ವಲ್ಪ ಮಾತ್ರ. ಮುಂದಕ್ಕೆ ಬಹಳಷ್ಟು ಆಗಲಿಕ್ಕಿದೆ ಎಂದು ಸಿ.ಟಿ.ರವಿ ಹೇಳಿದರು.

ವಿಶ್ವನಾಥ್‌ ಪಠ್ಯಪುಸ್ತಕ ಓದಿ ಮಾತನಾಡಲಿ
ಬಂಟ್ವಾಳ: ಪಠ್ಯಪುಸ್ತಕ ಪರಿಷ್ಕರಣೆ ಸರಿಯಾಗಿಲ್ಲ ಎಂಬ ಹೇಳಿಕೆ ನೀಡಿರುವ ಎಚ್‌. ವಿಶ್ವನಾಥ್‌ ಅವರು ಮೊದಲು ಪಠ್ಯಪುಸ್ತಕ ಓದಿ ಯಾವುದು ಸರಿಯಲ್ಲ ಎಂಬುದರ ಕುರಿತು ಸಲಹೆ ನೀಡಲಿ, ಅದು ನಿಜವಾಗಿಯೂ ಸರಿಯಿಲ್ಲದೆ ಇದ್ದರೆ ಸರಿ ಮಾಡುವ ಕಾರ್ಯ ಮಾಡೋಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಶನಿವಾರ ಬಿ.ಸಿ. ರೋಡಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು ಪಠ್ಯಪುಸ್ತಕ ಕುರಿತು ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಹೇಳಿಕೆ ಕೊಡುವುದಕ್ಕಿಂತ ಮುಂಚೆ ಪುಸ್ತಕ ಓದಿ ಸಲಹೆ ಕೊಡಲಿ. ಹೇಳಿಕೆ ನೀಡುವವರು ನಮ್ಮ ಪಕ್ಷದವರೇ ಆಗಿದ್ದರೂ, ಪುಸ್ತಕ ಓದಿ ಮಾತನಾಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next