Advertisement

CSR Fund: ಶಾಲಾಭಿವೃದ್ಧಿಯ ಜತೆಯಲ್ಲಿ ನಿರ್ವಹಣೆಯೂ ಬಲುಮುಖ್ಯ

01:40 AM Aug 21, 2024 | Team Udayavani |

ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ನಿಧಿಯಡಿಯಲ್ಲಿ ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಣ ಇಲಾಖೆ ರೂಪಿಸಿರುವ “ಸಮತ್ವ’ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಧಿಕೃತವಾಗಿ ಚಾಲನೆ ನೀಡಿದೆ.

Advertisement

ಶಿಕ್ಷಣ ಇಲಾಖೆಯ ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳ ಸುಧಾರಣೆಯ ನಿಟ್ಟಿನಲ್ಲಿ ಒಂದು ರಚನಾತ್ಮಕ ಹೆಜ್ಜೆಯಾಗಿದೆ. ಹಾಗೆಂದು ಸಿಎಸ್‌ಆರ್‌ ನಿಧಿಯನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದು ಹೊಸ ಉಪಕ್ರಮವೇನಲ್ಲವಾದರೂ ಈ ಬಾರಿ ಸಿಎಸ್‌ಆರ್‌ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಬಳಸಲು ಮುಂದಾಗಿರುವುದು ಸ್ವಾಗತಾರ್ಹ.

ಖಾಸಗಿಯವರ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರಿ ಶಾಲೆಗಳ ದತ್ತು, ಆರ್ಥಿಕ ನೆರವು ಸಹಿತ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಸರಕಾರ ರೂಪಿಸಿ ಅನುಷ್ಠಾನಗೊಳಿಸಿದ್ದು, ಭಾಗಶಃ ಯಶಸ್ಸನ್ನೂ ಕಂಡಿವೆ. ಇದರಿಂದ ಪ್ರೇರಿತವಾಗಿ ಶಿಕ್ಷಣ ಇಲಾಖೆ “ಸಮತ್ವ’ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯಡಿ ಕಂಪೆನಿಗಳು ಅಥವಾ ಉದ್ಯಮಿಗಳು ಅಪೇಕ್ಷಿಸುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ತನ್ಮೂಲಕ ನಿಧಿಯನ್ನು ಒದಗಿಸುವ ಉದ್ಯಮಿಗಳು ಶಾಲಾಭಿವೃದ್ಧಿಯಲ್ಲಿ ಹೆಚ್ಚಿನ ಆಸ್ಥೆ ವಹಿಸಲು ಮತ್ತು ಶಾಲೆಯನ್ನು ಸುವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ಲಭಿಸಲಿದೆ. ಅಲ್ಲದೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕಂಪೆನಿಗಳು ಮತ್ತು ಉದ್ಯಮಿಗಳಿಗೆ ಪ್ರೇರಣೆ ಲಭಿಸಲಿದ್ದು, ಮುಂಬರುವ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸರಕಾರಿ ಶಾಲೆಗಳಿಗೆ ಕಾಯಕಲ್ಪ ಲಭಿಸುವ ನಿರೀಕ್ಷೆಯನ್ನು ಮೂಡಿಸಿದೆ.

ಇತ್ತೀಚಿನ ದಶಕಗಳಲ್ಲಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಸರಕಾರಿ ಶಾಲೆಗಳಿಗೆ ಹೆಚ್ಚಿನ ಮೂಲಸೌಕರ್ಯಗಳು ಲಭಿಸುತ್ತಿದ್ದು, ಶಿಕ್ಷಕರಾದಿಯಾಗಿ ಸಿಬಂದಿಯೂ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಈ ಶಾಲೆಗಳು ಕೂಡ ಉತ್ತಮ ಫ‌ಲಿತಾಂಶ ಪಡೆಯುತ್ತಿವೆ. ಸಹಜವಾಗಿಯೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಈ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಭಾವ ತಲೆದೋರಿದೆ.

Advertisement

ಇದೇ ಕಾರಣಕ್ಕಾಗಿ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದ್ದರೆ, ಭಾರೀ ಸಂಖ್ಯೆಯ ಶಾಲೆಗಳು ಕನಿಷ್ಠ ಮೂಲಸೌಕರ್ಯಗಳನ್ನೂ ಹೊಂದಿರದೆ ಸೊರಗಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಇನ್ನಷ್ಟು ಸರಕಾರಿ ಶಾಲೆಗಳು ಬಾಗಿಲು ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ, ಗ್ರಾಮೀಣ ಭಾಗದ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿದೆ.

ಸರಕಾರದ ಆಶಯ, ಉದ್ದೇಶಗಳೆಲ್ಲವೂ ಸ್ತುತ್ಯಾರ್ಹವಾದರೂ ಇವೆಲ್ಲವನ್ನೂ ಈಡೇರಿಸುವಲ್ಲಿ ಮತ್ತು ಹೀಗೆ ಅಭಿವೃದ್ಧಿ ಪಡಿಸಲಾದ ಶಾಲೆಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ಎಷ್ಟು ಬದ್ಧತೆಯನ್ನು ತೋರಲಿದೆ ಎಂಬುದು ಸದ್ಯದ ಪ್ರಶ್ನೆ. ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿಗೆ ಶಿಕ್ಷಣ ಇಲಾಖೆ ಅಥವಾ ಸರಕಾರದ ಜವಾಬ್ದಾರಿ ಕೊನೆಗೊಳ್ಳದು.

ಸಮತ್ವ ಯೋಜನೆಯಡಿ ಅಭಿವೃದ್ಧಿಗೊಂಡ ಸರಕಾರಿ ಶಾಲೆಗಳ ಸ್ಥಿತಿಗತಿಯ ಬಗೆಗೆ ಶಿಕ್ಷಣ ಇಲಾಖೆ ಸದಾ ನಿಗಾ ಇರಿಸಬೇಕು. ಈ ಶಾಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದರ ಜತೆಯಲ್ಲಿ ಅಗತ್ಯ ಸಂಖ್ಯೆಯ ಶಿಕ್ಷಕರು ಮತ್ತು ಸಿಬಂದಿಯ ನೇಮಕಾತಿ, ವಿದ್ಯಾರ್ಥಿಗಳ ಪ್ರವೇಶಾತಿ, ಹಾಜರಾತಿ, ಫ‌ಲಿತಾಂಶ, ಶಿಕ್ಷಣದ ಗುಣಮಟ್ಟ ಇವೆಲ್ಲದರ ಬಗೆಗೆ ಶಿಕ್ಷಣ ಇಲಾಖೆ ಪದೇ ಪದೆ ಪರಿಶೀಲನೆ ನಡೆಸಿ, ತನ್ನ ನಿರೀಕ್ಷಿತ ಉದ್ದೇಶ, ಗುರಿಯನ್ನು ಸಾಧಿಸಬೇಕು.

ಇದೇ ವೇಳೆ ಸ್ಥಳೀಯರು ಕೂಡ ಈ ಶಾಲೆಗಳ ಸುವ್ಯವಸ್ಥಿತ ನಿರ್ವಹಣೆಗೆ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಬೇಕು. ಸರಕಾರಿ ಶಾಲೆಗಳ ಉಳಿವಿಗೆ ಸಾಮೂಹಿಕ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಇದು ಸಾಧ್ಯವಾದರೆ ಸರಕಾರದ ಉದ್ದೇಶ ಈಡೇರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next