ಬೆಂಗಳೂರು: ಕ್ರೀಸ್‌ನಲ್ಲಿ ಧೋನಿ ಇದ್ದರೇ ಅದು ಎಷ್ಟೇ ಬೃಹತ್ ಮೊತ್ತವಾಗಿದ್ದರೂ ಎದುರಾಳಿಗಳಿಗೆ ಗೆಲುವಿನ ಆಸೆ ಬೇಡ
ಅನ್ನುವುದಕ್ಕೆ ಮತ್ತೂಂದು ಪಂದ್ಯ ಸಾಕ್ಷಿಯಾಯಿತು. ಧೋನಿ ಅಬ್ಬರದಿಂದ ಆರ್‌ಸಿಬಿ ದೊಡ್ಡ ಮೊತ್ತ ದಾಖಲಿಸಿಯೂ 5 ವಿಕೆಟ್‌ನಿಂದ ಸೋಲುವಂತಾಯಿತು.
ಚಿನ್ನಸ್ವಾಮಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಬೆಂಗಳೂರು 20 ಓವರ್‌ಗೆ 8 ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿತು. ಈ ದೊಡ್ಡ ಮೊತ್ತದ ಬೆನ್ನುಹತ್ತಿದ ಚೆನ್ನೈ 19.4 ಓವರ್‌ಗೆ 5 ವಿಕೆಟ್ ಕಳೆದುಕೊಂಡು 207 ರನ್ ಬಾರಿಸಿ ಗೆಲುವು ಸಾಧಿಸಿತು.
ಆರಂಭದಲ್ಲೇ ಚೆನ್ನೈ 4 ಪ್ರಮುಖ ವಿಕೆಟ್‌ಗಳನ್ನು 74 ರನ್‌ಗಳಿಗೆ ಕಳೆದು ಕೊಂಡು ಚಡಪಡಿಸುತ್ತಿತ್ತು. ಆಗ ಒಂದಾದ ಧೋನಿ-ಅಂಬಾಟಿ ರಾಯುಡು ಪರಿಸ್ಥಿತಿಯನ್ನು ಪೂರ್ಣ ಬದಲಿಸಿದರು. ತಮ್ಮ ಬತ್ತ ಳಿಕೆಯಲ್ಲಿನ ಎಲ್ಲ ಹೊಡೆತಗಳನ್ನು ಪ್ರಯೋಗಿಸಿದ ಧೋನಿ (ಹೆಲಿಕಾಪ್ಟರ್ ಶಾಟ್ ಸೇರಿ) ಪಂದ್ಯವನ್ನೂ ಸಿಕ್ಸರ್‌ನೊಂದಿಗೆ ಮುಗಿಸಿದರು. ಅವರ ಗಳಿಕೆ 34 ಎಸೆತಕ್ಕೆ 70 ರನ್.ನಿಜ ಅರ್ಥದಲ್ಲಿ ಪಂದ್ಯವನ್ನು ಆರ್‌ಸಿಬಿಯಿಂದ ದೂರ ಒಯ್ದಿದ್ದೇ ಚೆನ್ನೈ ಬ್ಯಾಟ್ಸ್ ಮನ್ ಅಂಬಾಟಿ ರಾಯುಡು.
ಅವರು ಒಮ್ಮೆ ಜೀವದಾನ ಕೂಡ ಪಡೆದರು. ಇದಂತೂ ಆರ್‌ಸಿಬಿ ಸೋಲಿನಲ್ಲಿ ನಿರ್ಣಾಯಕ ಪಾತ್ರವಹಿಸಿತು. ಅವರ ಗಳಿಕೆ 53 ಎಸೆತಕ್ಕೆ 82. ಧೋನಿ- ರಾಯುಡು 101 ರನ್ ಜೊತೆಯಾಟ ವಾಡಿದರು ಗೆಲುವನ್ನು ಸೆಳೆದುಕೊಂಡರು.
ಎಬಿಡಿ, ಕಾಕ್ ಹವಾ: ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೊಹ್ಲಿಯನ್ನು ಅಗ್ಗಕ್ಕೆ ಕಳೆದುಕೊಂಡಿತು. ಆಗ ಒಂದಾದ ಡಿಕಾಕ್, ಡಿವಿಲಿಯರ್ಸ್ ಸ್ಫೋಟಕ ಆಟವಾಡಿದರು. ಈ ಜೋಡಿ 2ನೇ ವಿಕೆಟ್‌ಗೆ 53 ಎಸೆತದಲ್ಲಿ 103 ರನ್ ಸೇರಿಸಿತು. ಕಾಕ್ ಕೊಡುಗೆ 53, ಡಿವಿಲಿಯರ್ಸ್ 68 ರನ್ ಬಾರಿಸಿದರು. ಡಿವಿಲಿಯರ್ಸ್ ಆಟ ಹೇಗಿತ್ತೆಂದರೆ ಒಮ್ಮೆಯಂತೂ ಅವರ ಹೊಡೆತಕ್ಕೆ ಸಿಕ್ಕಿದ ಚೆಂಡು ಮೈದಾನದಿಂದ ಹೊರ ಹಾರಿತ್ತು.
ಪಂದ್ಯದ ತಿರುವು
ಪಂದ್ಯ ಎರಡು ಹಂತದಲ್ಲಿ ಆರ್‌ಸಿಬಿ ಕೈತಪ್ಪಿತು. ಚೆನ್ನೈ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಚೆನ್ನೈ 3 ಸಿಕ್ಸರ್ ಬಾರಿಸಿತು. ಆಗ ಅದರ ಮೊತ್ತ ದಿಢೀರ್ ಏರಿ ಆತ್ಮವಿಶ್ವಾಸ ಗಳಿಸಿಕೊಂಡಿತು. 15.3ನೇ ಓವರ್‌ನಲ್ಲಿ ಅಂಬಾಟಿ ರಾಯುಡು ನೀಡಿದ ಸುಲಭ ಕ್ಯಾಚನ್ನು ಉಮೇಶ್ ಯಾದವ್ ಕೈಚೆಲ್ಲಿದರು. ಇದು ಆರ್‌ಸಿಬಿ ಸೋಲನ್ನು ಬಹುತೇಕ ಖಚಿತಪಡಿಸಿತು.
– ಮಂಜು ಮಳಗುಳಿ