Advertisement
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿಗಳಾದ ಕಮಲೇಶ್ ನಾಗರಕೋಟಿ, ಶಿವಂ ಮಾವಿ ಮತ್ತು ಆನ್ರಿಚ್ ನೋರ್ಜೆ ಗಾಯಾಳಾಗಿರುವ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್ ನಿಂದಲೂ ಇಂತಹದ್ದೇ ಸುದ್ದಿ ಬಂದಿದೆ. ದಕ್ಷಿಣಾ ಆಫ್ರಿಕಾದ ವೇಗಿ ಲುಂಗಿ ನಿಗಿಡಿ ಗಾಯಗೊಂಡಿದ್ದು, ಇದರಿಂದಾಗಿ ಸಂಪೂರ್ಣ ಐಪಿಎಲ್ ನಲ್ಲಿ ಸಿಎಸ್ ಕೆ ಇವರ ಸೇವೆಯಿಂದ ವಂಚಿತವಾಗಲಿದೆ.ಇತ್ತೀಚೆಗೆ ಮುಗಿದ ಶ್ರೀಲಂಕಾ ಏಕದಿನ ಸರಣಿಯ ಅಂತಿಮ ಪಂದ್ಯದ ವೇಳೆ ಸ್ನಾಯು ಸೆಳೆತದ ನೋವಿಗೆ ಸಿಲುಕಿದ್ದರು. ನಂತರ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. ನಂತರ ಅವರು ಕೆಲವು ಅಭ್ಯಾಸ ನಡೆಸಿ ವಿಶ್ವ ಕಪ್ ಗೆ ತಯಾರಾಗುತ್ತಾರೆ ಎಂದು ದಕ್ಷಿಣ ಆಫ್ರಿಕಾದ ಮ್ಯಾನೇಜರ್ ಮೊಹಮ್ಮದ್ ಮೂಸಾಜೆ ಹೇಳಿಕೆ ನೀಡಿದ್ದಾರೆ.
ಲುಂಗಿ ನಿಗಿಡಿ ಸಿಎಸ್ ಕೆ ಮೊದಲ ಆಯ್ಕೆಯ ವೇಗದ ಬೌಲರ್ ಆಗಿದ್ದರು. ಈಗ ಅವರ ಅನುಪಸ್ಥಿತಿಯಲ್ಲಿ ಧೋನಿಗೆ ವೇಗಿಗಳ ವಿಭಾಗ ದೊಡ್ಡ ತಲೆ ನೋವಾಗಿದೆ. ಇಂಗ್ಲೆಂಡ್ ಆಲ್ ರೌಂಡರ್ ಡೇವಿಡ್ ವಿಲ್ಲೆ ಜೊತೆ ಶಾರ್ದೂಲ್ ಠಾಕೂರ್, ಮೋಹಿತ್ ಶರ್ಮಾ, ದೀಪಕ್ ಚಾಹರ್, ಕೆ.ಎಂ ಆಸಿಫ್ ವೇಗಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ವಿಶ್ವಕಪ್ ಗಾಗಿ ಡೇವಿಡ್ ವಿಲ್ಲೆ ಬೇಗನೆ ತವರು ತಂಡಕ್ಕೆ ವಾಪಾಸ್ ಆದರೆ ಚೆನ್ನೈ ಗೆ ಅನುಭವಿ ವೇಗಿಯ ಕೊರತೆ ಕಾಡದಿರದು.