ಚೆನ್ನೈ: 2023ರ ಐಪಿಎಲ್ ನಲ್ಲಿ ಅತೀ ಹೆಚ್ಚು ಚರ್ಚಿತ ವಿಚಾರವೆಂದರೆ ಅದು ಮಹೇಂದ್ರ ಸಿಂಗ್ ಧೋನಿ ಅವರ ವಿದಾಯದ ಬಗ್ಗೆ. ಫಿಟ್ ಇರದಿದ್ದರೂ ಸಂಪೂರ್ಣ ಕೂಟದ ಆಡಿದ್ದ ಎಂಎಸ್ ಧೋನಿ ಫೈನಲ್ ಗೆದ್ದ ಬಳಿಕ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಫೈನಲ್ ನಲ್ಲಿ ಮಾತನಾಡಿದ ಧೋನಿ, ಇದರ ಬಗ್ಗೆ ನಿರ್ಧಾರ ಮಾಡಲು ಇನ್ನೂ 6-7 ತಿಂಗಳ ಸಮಯವಿದೆ ಎಂದು ಹೇಳಿದ್ದರು. ಇದೀಗ ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಧೋನಿ ತಮ್ಮ ಶಸ್ತ್ರಚಿಕಿತ್ಸೆಯ ಬಗ್ಗೆ ತಂಡಕ್ಕೆ ಫೈನಲ್ ಆದ ತಕ್ಷಣ ಮಾಹಿತಿ ನೀಡಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಒಂದು ಕ್ಷಣವೂ ವೇಸ್ಟ್ ಮಾಡುತ್ತಿಲ್ಲ, ಆದಷ್ಟು ಬೇಗ ಬರುತ್ತೇನೆ: ಹೊಸ ಚಿತ್ರದ ಬಗ್ಗೆ ಯಶ್
“ಫೈನಲ್ ಮುಗಿದ ತಕ್ಷಣ ಅವರು ಮುಂಬೈಗೆ ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ನಮಗೆ ಹೇಳಿದರು. ಮುಂಬೈನಲ್ಲಿ, ರುತುರಾಜ್ ಅವರ ಮದುವೆಯ ನಂತರ (ಜೂನ್ 4 ರಂದು) ನಾನು ಅವರನ್ನು ಭೇಟಿ ಮಾಡಿದೆ. ಅದೊಂದು ಸೌಜನ್ಯದ ಭೇಟಿಯಾಗಿತ್ತು. ಅವರು ಸಾಕಷ್ಟು ಆರಾಮದಲ್ಲಿದ್ದರು. ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ ಮತ್ತು ನಂತರ ಪುನರ್ವಸತಿ ಪ್ರಾರಂಭಿಸುತ್ತೇನೆ ಎಂದು ಹೇಳಿದರು. ಅವರು ಹೇಳಿದಂತೆ, ಜನವರಿ-ಫೆಬ್ರವರಿ ತನಕ ಧೋನಿ ಆಡಲು ಹೋಗುವುದಿಲ್ಲ” ಎಂದು ವಿಶ್ವನಾಥನ್ ಇಎಸ್‌ಪಿಎನ್ ಕ್ರಿಕ್ ಇನ್‌ಫೋ ವೆಬ್‌ಸೈಟ್ ಗೆ ತಿಳಿಸಿದರು.
“ಅವರಿಗೆ ಏನು ಮಾಡಬೇಕೆಂದು ತಿಳಿದಿದೆ, ಆದ್ದರಿಂದ ನಾವು ಧೋನಿ ಬಳಿ ‘ನೀವು ಏನು ಮಾಡಲಿದ್ದೀರಿ, ಹೇಗೆ’ ಇತ್ಯಾದಿಗಳನ್ನು ಕೇಳಲು ಹೋಗುವುದಿಲ್ಲ. ಅವರು ಸ್ವತಃ ನಮಗೆ ತಿಳಿಸುತ್ತಾರೆ. ಅವರು ಏನು ಮಾಡಿದರೂ, ಅವರು ಮೊದಲು ಕರೆ ಮಾಡುತ್ತಾರೆ. ಎನ್ ಶ್ರೀನಿವಾಸನ್ ಅವರಿಗೆ ಮಾತ್ರ ತಿಳಿಸುತ್ತಾರೆ, ಬೇರೆ ಯಾರಿಗೂ ಇಲ್ಲ. ಶ್ರೀನಿವಾಸನ್ ರಿಂದ ಮಾಹಿತಿಯನ್ನು ನಾವು ಪಡೆಯುತ್ತೇವೆ. ಇದು 2008 ರಿಂದ ಹೀಗೆಯೇ ಇದೆ. ಹೀಗೆಯೇ ಮುಂದುವರಿಯುತ್ತದೆ ” ಎಂದು ವಿಶ್ವನಾಥನ್ ಹೇಳಿದರು.
ಜುಲೈ 7ಕ್ಕೆ ಧೋನಿಗೆ 42 ವರ್ಷ ತುಂಬುತ್ತದೆ. ಸದ್ಯ ಧೋನಿ ರಾಂಚಿಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.