Advertisement

ವ್ಯಾಟ್ಸನ್ ಶತಕದಾಟಕ್ಕೆ ಸನ್ ರೈಸರ್ಸ್ ಕಂಗಾಲು : CSKಗೆ IPL ಕಿರೀಟ

10:49 PM May 27, 2018 | Team Udayavani |

ಮುಂಬಯಿ: ವಾಂಖೇಡೆ ಅಂಗಳದಲ್ಲಿ ಆಸೀಸ್ ಆಟಗಾರ ಶೇನ್ ವ್ಯಾಟ್ಸನ್ (117) ಸಿಡಿಲಬ್ಬರದ ಬ್ಯಾಟಿಂಗ್ ಪರಾಕ್ರಮಕ್ಕೆ ಬೆಚ್ಚಿದ ಸನ್ ರೈಸರ್ಸ್ ಹೈದ್ರಾಬಾದ್ ಎರಡನೇ ಬಾರಿಗೆ ಐ.ಪಿ.ಎಲ್. ಟ್ರೋಫಿ ಎತ್ತುವ ಅವಕಾಶದಿಂದ ವಂಚಿತವಾಗಿದೆ. ಆರಂಭಿಕ ವ್ಯಾಟ್ಸನ್ ಅವರ ಅಜೇಯ ಶತಕದಾಟದಿಂದ ಸೂಪರ್ ಕಿಂಗ್ಸ್ ತನ್ನ ಫೈನಲ್ ಎದುರಾಳಿ ಸನ್ ರೈಸರ್ಸ್ ತಂಡವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ 11ನೇ ಐ.ಪಿ.ಎಲ್. ಟ್ರೋಫಿಯ ಒಡೆಯನಾಗಿ ಮೆರೆದಾಡಿತು.

Advertisement

ವ್ಯಾಟ್ಸನ್ ಅವರಿಗೆ ಉತ್ತಮ ಬೆಂಬಲ ನೀಡಿದ ಸುರೇಶ್ ರೈನಾ 32 ರನ್ನು ಗಳಿಸಿದರು ಮತ್ತು ಅಂತಿಮವಾಗಿ ಅಂಬಟಿರಾಯುಡು 16 ರನ್ನುಗಳ ಮೂಲಕ ಶತಕವೀರನಿಗೆ ಉತ್ತಮ ಬೆಂಬಲ ಒದಗಿಸಿದರು. ಸನ್ ರೈಸರ್ಸ್ ಪರ ವಿಶ್ವದರ್ಜೆಯ ಸ್ಪಿನ್ನರ್ ರಶೀದ್ ಖಾನ್ ಸೇರಿದಂತೆ ಭುವನೇಶ್ವರ್ ಕುಮಾರ್, ಶಕೀಬ್ ಹಸನ್, ಸಂದೀಪ್ ಶರ್ಮಾ ಸೇರಿದಂತೆ ಯಾರೊಬ್ಬರಿಗೂ ವ್ಯಾಟ್ಸನ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.


ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾದ ಹೊಡೆಬಡಿಯ ದಾಂಢಿಗ ಶೇನ್ ವ್ಯಾಟ್ಸನ್ ಕೇವಲ 57 ಎಸೆತಗಳಲ್ಲಿ ಅಜೇಯ 117 ರನ್ನುಗಳನ್ನು  ಬಾರಿಸುವ ಮೂಲಕ ತನ್ನ ತಂಡದ ಗೆಲುವನ್ನು ಸುಲಭಗೊಳಿಸಿದರು. ಈ ಮೂಲಕ 2 ವರ್ಷಗಳ IPL ನಿಷೇಧ ಮುಗಿಸಿ ಹೊಸ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿದಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 3ನೇ ಸಲ IPL ಟ್ರೋಫಿಯ ಒಡೆಯನಾಗಿ ಬೀಗಿತು.

ಈ ಬಾರಿಯ ಕೂಟವೂ ಸೇರಿದಂತೆ ಇದುವರೆಗಿನ 11 ಐ.ಪಿ.ಎಲ್. ಕೂಟಗಳಲ್ಲಿ 7ಬಾರಿ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆ ಸೂಪರ್ ಕಿಂಗ್ಸ್ ತಂಡದ್ದಾಗಿದೆ. ಇವುಗಳಲ್ಲಿ ಸೂಪರ್ ಕಿಂಗ್ಸ್ 2 ಕೂಟಗಳಲ್ಲಿ ನಿಷೇಧಕ್ಕೊಳಗಾಗಿತ್ತು, ಅಂದರೆ ತಾನಾಡಿದ 9 ಐ.ಪಿ.ಎಲ್. ಕೂಟಗಳಲ್ಲಿ 7 ಬಾರಿ ಫೈನಲ್ ಪ್ರವೇಶಿಸಿದ್ದು ಧೋನಿ ಬಳಗದ ಸಾಧನೆಯಾಗಿದೆ. ಇತ್ತ ಹೈದ್ರಾಬಾದ್ ಹೊಸ ತಂಡವಾದ ಮೇಲೆ ಒಮ್ಮೆ ಫೈನಲ್ ಪ್ರವೇಶಿಸಿದ್ದು ಅಲ್ಲಿ ಛಾಂಪಿಯನ್ ಆಗಿ ಮೂಡಿಬಂದಿತ್ತು, ಆದರೆ ತನ್ನ ಈ ಹಿಂದಿನ ಸಾಧನೆಯನ್ನು ಪುನರಾವರ್ತಿಸಲು ಇವರಿಗೆ ಸಾಧ್ಯವಾಗಲಿಲ್ಲ.



First Innings News: ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 179 ರನ್ ಗುರಿ
ಇಂಡಿಯನ್ ಪ್ರಿಮಿಯರ್ ಲೀಗ್ ಫೈನಲ್ ಜಿದ್ದಾಜಿದ್ದಿನ ಹೋರಾಟದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 179 ರನ್ನುಗಳ ಗುರಿ ನಿಗದಿಯಾಗಿದೆ. ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಟಾಸ್ ಗೆಲ್ಲುವ ಅದೃಷ್ಟ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಪಾಲಿಗಾಯಿತು. ಟಾಸ್ ಗೆದ್ದ ಧೋನಿ ಸನ್ ರೈಸರ್ಸ್ ಹೈದ್ರಾಬಾದ್ ಗೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಕೇನ್ ವಿಲಿಯಮ್ಸ್ ನೇತೃತ್ವದ ಹೈದ್ರಾಬಾದ್ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟುಗಳ ನಷ್ಟಕ್ಕೆ 178 ರನ್ನುಗಳನ್ನು ಕಲೆ ಹಾಕಿತು.


ಪ್ರಾರಂಭದಲ್ಲಿ ಚೆನ್ನೈ ಬೌಲರ್ ಗಳ ದಾಳಿಯೆದುರು ರನ್ ಗಳಿಸಲು ಹೈದ್ರಾಬಾದ್ ದಾಂಢಿಗರು ಪರದಾಡಿದರು. ಆರಂಭಿಕನಾಗಿ ಆಡುವ ಅವಕಾಶ ಪಡೆದಿದ್ದ ಗೋಸ್ವಾಮಿ (5) ಸಿಡಿಯಲು ವಿಫಲರಾದರು. ಅನುಭವಿ ಧವನ್ (26) ಎಚ್ಚರಿಕೆಯ ಆಟಕ್ಕೆ ಮೊರೆಹೋದರು. ಆದರೆ ಬಳಿಕ ನಾಯಕ ಕೇನ್ ವಿಲಿಯಮ್ಸ್ (47), ಶಕಿಬ್ ಹಸನ್ (23), ಯೂಸುಫ್ ಪಠಾಣ್ (ಅಜೇಯ 45) ಮತ್ತು ಬ್ರಾತ್ ವೈಟ್ (21) ಸೇರಿಕೊಂಡು 20 ಓವರುಗಳಲ್ಲಿ ತಂಡವು 178 ರನ್ನುಗಳ ಸ್ಪರ್ಧಾತ್ಮಕ ಮೊತ್ತವನ್ನು ಕೂಡಿಹಾಕುವಲ್ಲಿ ಸಫಲರಾದರು.

ಹೈದ್ರಾಬಾದ್ ಪರವಾಗಿ ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ ಯೂಸುಫ್ ಪಠಾಣ್ 2 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿ 45 ರನ್ನು ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಕ್ರೆಗ್ ಬ್ರಾತ್ ವೈಟ್ 3 ಸಿಕ್ಸರ್ ಸಹಿತ 11 ಎಸೆತಗಳಲ್ಲಿ 21 ರನ್ನು ಗಳಿಸಿದರು.



Advertisement
Advertisement

Udayavani is now on Telegram. Click here to join our channel and stay updated with the latest news.

Next