Advertisement
ನಾನ್-ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ನಿಯಮಾವಳಿಯಲ್ಲಿ ಕೊಂಚ ಸಡಿಲಿಕೆ ಮಾಡಿ ಈಗ ಮೂರನೇ ಬಾರಿ ಟೆಂಡರ್ ಕರೆದಿರುವ ಕಾರಣ ಹೆಚ್ಚು ಮಂದಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಲ್ಲ ಬ್ಲಾಕ್‌ಗಳಲ್ಲೂ ಮರಳು ತೆಗೆಯುವ ಕಾರ್ಯ ಆರಂಭಗೊಳ್ಳಬಹುದು.
ಸಿಆರ್‌ಝಡ್ ವ್ಯಾಪ್ತಿಯ 12 ಮರಳು ದಿಣ್ಣೆಗಳಿಂದ ಮರಳು ತೆಗೆಯುವುದಕ್ಕೆ ಅನುಮೋದನೆ ನೀಡಿರುವ 76 ಜನರಿಗೆ ಪರವಾನಿಗೆ ವಿತರಣೆ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ವಿತರಣೆಯಾಗಲಿದೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಸುಮಿತ್ರಾ ತಿಳಿಸಿದ್ದಾರೆ.
Related Articles
Advertisement
ನಾನ್‌ಸಿಆರ್‌ಝಡ್‌ನಲ್ಲಿ ಮತ್ತೆ ಟೆಂಡರ್ನಾನ್ ಸಿಆರ್‌ಝಡ್ ವಲಯದಲ್ಲಿ ಒಟ್ಟು 22 ಬ್ಲಾಕ್‌ಗಳನ್ನು ಗುರುತಿಸಿ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ನಿಯಮಾನುಸಾರ ಇಬ್ಬರು ಮಾತ್ರ ಅರ್ಹತೆ ಪಡೆದಿದ್ದರು. ಹೆಚ್ಚಿನ ಗುತ್ತಿಗೆದಾರರು ಭಾಗವಹಿಸುವುದಕ್ಕೆ ಷರತ್ತುಗಳಲ್ಲಿನ ಕೆಲವು ಅಂಶಗಳು ಅಡ್ಡಿಯಾಗಿದ್ದವು. ನಿಯಮಾವಳಿಯಲ್ಲಿ ಸಡಿಲಿಕೆ ಮಾಡಬೇಕೆಂದು ಗುತ್ತಿಗೆದಾರರಿಂದ ಬೇಡಿಕೆ ಕೇಳಿಬಂದಿತ್ತು. ಮನವಿಯ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಲೀಸ್ ಅವಧಿಯನ್ನು 5 ವರ್ಷಕ್ಕೆ ವಿಸ್ತರಿಸಲಾಗಿದೆ. ಅನುಮತಿಗೆ ವಾರ್ಷಿಕ ವಹಿವಾಟು ಮಿತಿಯನ್ನು 5 ಲಕ್ಷ ರೂ.ಗೆ ಇಳಿಸಲಾಗಿದೆ. ಹೀಗಾಗಿ ಪ್ರಸ್ತುತ ಕರೆದಿರುವ ಟೆಂಡರ್‌ನಲ್ಲಿ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಟೆಂಡರ್‌ಗೆ ಸಂಬಂಧಪಟ್ಟ ಪ್ರಕ್ರಿಯೆ ಪೂರ್ಣ ಗೊಂಡು ಡಿ.20ರ ಬಳಿಕ ಮರಳುಗಾರಿಕೆ ಆರಂಭ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಪರವಾನಿಗೆ ಇಳಿಕೆ; ಅತೃಪ್ತಿ
ಈ ಮಧ್ಯೆ ಮರಳು ಪರವಾನಿಗೆ ಸಂಖ್ಯೆಯನ್ನು ಇಳಿಕೆ ಮಾಡಿರುವುದಕ್ಕೆ ಮರಳು ಗುತ್ತಿಗೆದಾರರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದೆ ಇದ್ದ 462 ಪರವಾನಿಗೆಗಳನ್ನು ಬಳಿಕ ಸುಮಾರು 200ಕ್ಕೆ ಇಳಿಸಲಾಗಿತ್ತು. ಮತ್ತೆ ಕಡಿತಗೊಳಿಸಿ ಈ ಬಾರಿ ಒಟ್ಟು 76 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲವು ಮರಳು ಗುತ್ತಿಗೆದಾರರು ಈ ಬಗ್ಗೆ ಕಾನೂನು ಹೋರಾಟ ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದಾದರೆ, ಜಿಲ್ಲೆಯಲ್ಲಿ ಮರಳು ಲಭ್ಯತೆ ಸಮಸ್ಯೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.