ಮಹಾನಗರ: ಕರಾವಳಿ ಜಿಲ್ಲೆಯ ಬಹುಬೇಡಿಕೆಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಧಿಸೂಚನೆ-2019’ರ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆ ಅಂತಿಮ ಹಂತಕ್ಕೆ ಬಂದಿದ್ದರೂ, ಅನುಷ್ಠಾನ ಮಾತ್ರ ನಿಧಾನವಾಗಿದೆ.
ಚೆನ್ನೈನ ನ್ಯಾಶನಲ್ ಸೆಂಟರ್ ಫಾರ್ ಸಸ್ಟೆನೆಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ತಯಾರಿಸಿದ ನಕ್ಷೆ ವಿವಿಧ ಹಂತಗಳಲ್ಲಿ ಅನುಮೋದನೆ ಪಡೆದು ಇದೀಗ ಕೇಂದ್ರದ ಬಹುಮಹತ್ವದ “ನ್ಯಾಶನಲ್ ಕೋಸ್ಟಲ್ ಝೋನ್ ಮ್ಯಾನೆಜ್ ಮೆಂಟ್ ಅಥಾರಿಟಿ’ಗೆ ಸಲ್ಲಿಕೆಯಾಗಿದೆ. ಅಲ್ಲಿ ವಿಶೇಷ ಸಭೆ ನಡೆದು ಪರಿಶೀಲನೆ ಆಗಿ ನಕ್ಷೆಗೆ ಅಧಿಕೃತ ಒಪ್ಪಿಗೆ ದೊರೆಯಲಿದೆ. ಆದರೆ ಆ ಸಭೆ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
“ನಕ್ಷೆ ಸಿದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿಕೆ ನೀಡಿ ಕೆಲವು ದಿನವಾದರೂ ಜಾರಿಗೆ ಬಂದಿಲ್ಲ. ಹೊಸ ನಕ್ಷೆ ರಚನೆ ಬಗ್ಗೆ ಹಲವು ಕಾಲದಿಂದ ಪ್ರಕ್ರಿಯೆಗಳು ಮಂಗಳೂರಿನಲ್ಲಿ ನಡೆಯುತ್ತಿದ್ದರೂ ಅಧಿಕೃತ ನಕ್ಷೆಗೆ ಇನ್ನೆಷ್ಟು ದಿನ ಕಾಯಬೇಕು ಗೊತ್ತಿಲ್ಲ’ ಎಂಬುದು ಸಾರ್ವಜನಿಕರ ಆಕ್ಷೇಪ. “ಕೊರೊನಾ ಕಾರಣ, ನಕ್ಷೆ ರಚನೆ ಕಾನೂನು ಪ್ರಕಾರ, ಬಹುಸೂಕ್ಷ್ಮ ವಿಚಾರವಾದ್ದರಿಂದ ತಡವಾಗಿದೆ. ಎಲ್ಲ ರಾಜ್ಯಗಳ ನಕ್ಷೆಗಳನ್ನು ಒಟ್ಟು ಮಾಡಿ ಪ್ರಕಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತಡವಾಗಿದೆ’ ಎಂಬುದು ಅಧಿಕಾರಿಗಳ ವಾದ.
ಏನಿದು ನಕ್ಷೆ ಬೆಳವಣಿಗೆ?
ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು (ಕೆಎಸ್‌ಸಿಝಡ್ ಎಂಎ), ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಧಿಸೂಚನೆ 2019ರಂತೆ ತಯಾರಿಸಿರುವ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಯೋಜನೆಯ ಕರಡು (ಸಿಝಡ್‌ಎಂಪಿ) ನಕ್ಷೆಯನ್ನು ಎನ್‌ಸಿಎಸ್ ಸಿಎಂ ತಯಾರಿಸಿತ್ತು. ಈ ಕರಡು ನಕ್ಷೆಯನ್ನು ಸಾರ್ವಜನಿಕರು, ಭಾಗಿದಾರರ ಅವಗಾಹನೆಗೆ ಪ್ರಕಟಿಸಿ ಅವರಿಂದ ಆಕ್ಷೇಪಣೆ, ಸಲಹೆ, ಅನಿಸಿಕೆ ಆಹ್ವಾನಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು ಕಳೆದ ವರ್ಷ ಎ. 27ರಂದು ಅಧಿಸೂಚನೆ ಹೊರಡಿಸಿತ್ತು.
ಇದರಂತೆ ಕರಡು ನಕ್ಷೆ ಬಗ್ಗೆ ಜುಲೈ 31ರಂದು ಡಿಸಿ ಕಚೇರಿಯಲ್ಲಿ ಅಹವಾಲು ಸಭೆ ನಡೆದಿತ್ತು. ಬಳಿಕ ನ. 23ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯದ ಉನ್ನತ ಮಟ್ಟದ ಸಭೆಗೆ ಕಳುಹಿಸಲಾಗಿತ್ತು. ಆದರೆ ಸಾರ್ವಜನಿಕ ಆಕ್ಷೇಪಣೆ ಸರಿಪಡಿಸಲು ಇರಬಹುದಾದ ಸಾಧ್ಯತೆಗಳ ವಿವರ ನೀಡುವಂತೆ ಬೆಂಗಳೂರಿನಿಂದ ಮಂಗ ಳೂರು ಅಧಿಕಾರಿಗಳಿಗೆ ಮತ್ತೆ ನಿರ್ದೇಶನ ಬಂದಿತ್ತು. ಅದರಂತೆ ಸೂಕ್ತ ದಾಖಲೆ, ವರದಿ ಯನ್ನು ಸಿದ್ಧಪಡಿಸಿ ಈ ವರ್ಷ ಜ. 4ರಂದು ಡಿಸಿಕಚೇರಿಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ಪಡೆದು ಜ. 5ರಂದು ಬೆಂಗಳೂರಿಗೆ ಕಳುಹಿಸಲಾಗಿದೆ. ಇದು ಮತ್ತೆ ಮುಂದುವರಿಯಲಿಲ್ಲ.