ವಿಶೇಷ ವರದಿ– ಮಂಗಳೂರು: ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಅನುಮತಿ ಪ್ರಕ್ರಿಯೆಗಳಿಗೆ ಕೊರೊನಾ ದಿಂದಾಗಿ ಹಿನ್ನಡೆಯಾಗಿದ್ದು, ಈ ಬಾರಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳನ್ನು ಅಂತಿಮಗೊಳಿಸಿ ಪರವಾನಿಗೆ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹೀಗಾಗಿ 5 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮಳೆಗಾಲ ಮುಂಚಿತವಾಗಿ ಮರು ಆರಂಭವಾಗುವ ಸಾಧ್ಯತೆ ಕ್ಷೀಣಿಸಿದೆ.
ಜೂನ್‌ನಿಂದ ಆಗಸ್ಟ್‌ವರೆಗೆ ಮೂರು ತಿಂಗಳ ಕಾಲ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ನಿಷೇಧವಿದ್ದು, ಮುಂದಿನ ಸೆಪ್ಟಂಬರ್ ಬಳಿಕವೇ ಹೊಸದಾಗಿ ಮರಳುಗಾರಿಕೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಕಳೆದ ವರ್ಷ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಎಲ್ಲ 22 ದಿಬ್ಬಗಳ ಪರವಾನಿಗೆಗಳ ಅವಧಿ ಎರಡು ಹಂತಗಳಲ್ಲಿ ಮುಕ್ತಾಯಗೊಂಡಿತ್ತು. ಪ್ರಥಮ ಹಂತದಲ್ಲಿ ಪರವಾನಿಗೆ ನೀಡಿರುವ 12 ಮರಳು ದಿಬ್ಬಗಳಲ್ಲಿ ಅ. 15ರಂದು ಹಾಗೂ ಎರಡನೇ ಹಂತದಲ್ಲಿ ಪರವಾನಿಗೆ ನೀಡಿರುವ 10 ದಿಬ್ಬಗಳಲ್ಲಿ ಮರಳುಗಾರಿಕೆ ಡಿ. 26ಕ್ಕೆ ಕೊನೆಗೊಂಡಿತ್ತು.
ಈ ಬಾರಿ ನಡೆಸಿದ ಬ್ಯಾಥಮೆಟ್ರಿಕ್ಸ್ ಸರ್ವೆಯಲ್ಲಿ ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ವರದಿಯ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿರುವ ಸಿಆರ್‌ಝಡ್, ಮೀನುಗಾರಿಕೆ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ 7 ಮಂದಿಯ ಸಮಿತಿ ಪರಿಶೀಲನೆ ನಡೆದಿದೆ. ಅನುಮತಿಗಾಗಿ ಬೆಂಗಳೂರಿನಲ್ಲಿರುವ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಇಲಾಖೆಗೆ ವಿಭಾಗಕ್ಕೆ (ಕೆಸಿಝಡ್‌ಎಂ) ಕಳುಹಿಸಿ ಕೊಡುವ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ದಿಢೀರ್ ಆಗಿ ಕೊರೊನಾ ರೋಗ ಕಾಣಿಸಿಕೊಂಡ ಪರಿಣಾಮ ಮುಂದಿನ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಲಾಕ್‌ಡೌನ್ ಮುಗಿದ ಬಳಿಕ ಕೆಸಿಝಡ್‌ಎಂನಿಂದ ಅನುಮೋದನೆ ಪ್ರಕ್ರಿಯೆಗಳು ನಡೆಯುವ ಸಾಧ್ಯತೆಗಳಿವೆ.
ಕೆಸಿಝಡ್‌ಎಂ ಅನುಮೋದನೆ ಬಳಿಕ ಸಮಿತಿ ವಿವಿಧ ಮಾನದಂಡಗಳನ್ನು ಪರಿಶೀಲಿಸಿ ಹೊಸದಾಗಿ ಈ ಪ್ರದೇಶದಲ್ಲಿ ಮರಳುಗಾರಿಕೆಗೆ ಪರವಾನಿಗೆಗಳನ್ನು ನೀಡುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಕನಿಷ್ಠ ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಿವೆ.ಇದೇ ವೇಳೆ ಜೂನ್ ಆರಂಭದಿಂದ ಮೂರು ತಿಂಗಳ ಕಾಲ ಮರಳುಗಾರಿಕೆಗೆ ನಿಷೇಧವಿದ್ದು ಈ ಹಿನ್ನೆಲೆಯಲ್ಲಿ ಈ ಬಾರಿ ಮರಳುಗಾರಿಕೆ ನಿಷೇಧ ಆರಂಭಗೊಳ್ಳುವುದರೊಳಗೆ ಹೊಸದಾಗಿ ಮರಳುಗಾರಿಕೆ ಪರವಾನಿಗೆ ಪ್ರಕ್ರಿಯೆಗಳು ನಡೆಯುವ ಸಾಧ್ಯತೆಗಳಿಲ್ಲ.
ಶೀಘ್ರ ಆರಂಭಗೊಳ್ಳುವ ಸಾಧ್ಯತೆಗಳಿಲ್ಲ
ಬೆಂಗಳೂರಿನಲ್ಲಿರುವ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಇಲಾಖೆ (ಕೆಸಿಝಡ್‌ಎಂ.) ವರದಿಯನ್ನು ಪರಿಶೀಲಿಸಿ ಅನುಮತಿ ನೀಡಿದ ಬಳಿಕವಷ್ಟೆ ಮರಳುಗಾರಿಕೆಗೆ ಪರವಾನಿಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯತ್ತವೆ. ಆದ್ದರಿಂದ ಸದ್ಯಕ್ಕೆ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಆರಂಭಗೊಳ್ಳುವ ಸಾಧ್ಯತೆಗಳಿಲ್ಲ.
-ನಿರಂಜನ್,ಉಪ ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ