Advertisement

ಪಾಣೆ ಮಂಗಳೂರು: ಶತಮಾನದ ಸೇತುವೆ ನವೀಕರಣಕ್ಕೆ ಒತ್ತಾಯ

10:02 AM Feb 14, 2023 | Team Udayavani |

ಬಂಟ್ವಾಳ: ಶತಮಾನದ ಸೇತುವೆ ಎಂಬ ಹೆಗ್ಗಳಿಕೆಗಳಿಸಿಕೊಂಡಿರುವ ನೇತ್ರಾವತಿ ನದಿಗೆ ನಿರ್ಮಾಣಗೊಂಡಿರುವ ಪಾಣೆ ಮಂಗಳೂರು ಹಳೆಯ (ಉಕ್ಕಿನ) ಸೇತುವೆಯನ್ನು ನವೀಕರಣಗೊಳಿಸ ಬೇಕು ಎಂಬ ಒತ್ತಾಯಗಳಿದ್ದು, ಇಂದೊಂದು ಸೇತುವೆ ಎನ್ನುವುದಕ್ಕಿಂತಲೂ ಸ್ಮಾರಕವಾಗಿ ಉಳಿಸಬೇಕು ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ.

Advertisement

ತಜ್ಞರ ಮಾಹಿತಿ ಪ್ರಕಾರ 1914ರಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯು ಒಂದು ಕಾಲದಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕದ ಕೊಂಡಿಯಾಗಿದ್ದು, ಈಗಲೂ ಸುಸ್ಥಿತಿಯಲ್ಲಿದೆ. ಇಂತಹ ಸೇತುವೆಯನ್ನು ಮತ್ತೆ ನಿರ್ಮಿಸುವುದು ಸಾಧ್ಯವೇ ಎಂಬುದರ ಕುರಿತು ಆಲೋಚಿಸಿ ಹಳೆಯ ಶೈಲಿಯ ಸೇತುವೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.

ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣಗೊಂಡು ಇದೀಗ ಮತ್ತೂಂದು ಸೇತುವೆ ಕೂಡ ನಿರ್ಮಾಣಗೊಳ್ಳುತ್ತಿದ್ದು, ಆದರೂ ಉಕ್ಕಿನ ಸೇತುವೆಯ ಸೇವೆ ಇನ್ನೂ ಮುಂದುವರಿಯಲಿದೆ. ಗೂಡಿನಬಳಿ, ಪಾಣೆಮಂಗಳೂರು ಪೇಟೆ, ನಂದಾವರ ದೇವಸ್ಥಾನ ಸಂಪರ್ಕ ಹೀಗೆ ಈ ಭಾಗದ ಮಂದಿಗೆ ಇದು ಅನಿವಾರ್ಯವಾಗಿದೆ.

ಜತೆಗೆ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾದ ಸಂದರ್ಭದಲ್ಲಿ ಪರ್ಯಾಯ ರಸ್ತೆಯಾಗಿ ಇದೇ ಸೇತುವೆಯ ಮೂಲಕ ವಾಹನಗಳು ಓಡಾಟ ನಡೆಸುತ್ತವೆ. ಸ್ಮಾರಕವಾಗಿ ಉಳಿಸುವ ಸಲಹೆ ಕಳೆದ ತಿಂಗಳು ಬಂಟ್ವಾಳ ಪುರಸಭೆಯ ಬಜೆಟ್‌ ಸಾರ್ವಜನಿಕ ಸಮಾಲೋಚನ ಸಭೆಯ ಸಂದರ್ಭದಲ್ಲಿ ಹಿರಿಯರಾದ ಡಾ| ವಸಂತ ಬಾಳಿಗಾ ಅವರು ನವೀಕರಣದ ವಿಚಾರವನ್ನು ಪ್ರಸ್ತಾಪಿಸಿದ್ದು, ಈ ವೇಳೆ ಇತಿಹಾಸ ತಜ್ಞ ಪ್ರೊ| ತುಕಾರಾಮ್‌ ಪೂಜಾರಿಯವರು ಪೂರಕವಾಗಿ ಮಾತನಾಡಿ ಅದನ್ನು ಸೇತುವೆ ಎನ್ನುವುದಕ್ಕಿಂತಲೂ ಸ್ಮಾರಕವಾಗಿ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂಬ ಸಲಹೆ ನೀಡಿದ್ದರು.

ಸೇತುವೆಯ ಬಲಿಷ್ಠವಾಗಿರುವ ಉಕ್ಕು ತುಕ್ಕು ಹಿಡಿದ ರೀತಿಯಲ್ಲಿ ಕಂಡು ಬರುತ್ತಿದ್ದು, ಅದನ್ನು ಶುಚಿಗೊಳಿಸಿ ಬಣ್ಣ ಬಳಿಯುವ ಕಾರ್ಯ, ಕೆಲವೊಂದು ಸಣ್ಣಪುಟ್ಟ ಕಬ್ಬಿಣ್ಣಗಳು ತುಂಡಾಗಿದ್ದು, ಅದನ್ನು ದುರಸ್ತಿಪಡಿಸುವ ಕಾರ್ಯ ನಡೆಯಬೇಕಿದೆ. ಬಳಿಕ ಸೇತುವೆಯ ರಸ್ತೆ ಭಾಗಕ್ಕೆ ಡಾಮರು ಹಾಕಿ ನವೀಕರಣಗೊಳಿಸುವ ಕಾರ್ಯ ಮಾಡಬೇಕಿದೆ.

Advertisement

ಪ್ರಥಮ ಸೇತುವೆ ಎಂಬ ಹೆಗ್ಗಳಿಕೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ನದಿಯೊಂದಕ್ಕೆ ನಿರ್ಮಾಣಗೊಂಡಿರುವ ಆಧುನಿಕ ಶೈಲಿಯ ಮೊದಲ ಸೇತುವೆ ಎಂಬ ಹೆಗ್ಗಳಿಕೆ ಪಾಣೆಮಂಗಳೂರು ಸೇತುವೆಗಿದೆ. ಇದೇ ಶೈಲಿಯ ಸೇತುವೆಗಳು ಉಪ್ಪಿನಂಗಡಿ ಹಾಗೂ ಗುರುಪುರದಲ್ಲಿದ್ದರೂ, ಅದು ಇದರ ಬಳಿಕವೇ ನಿರ್ಮಾಣಗೊಂಡಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಿಸುತ್ತಾರೆ.

ಸದಸ್ಯರು, ಅಧಿಕಾರಿಗಳ ಜತೆ ಚರ್ಚೆ

ಹಳೆ ಸೇತುವೆ ನವೀಕರಣ ಪ್ರಸ್ತಾಪ ಉತ್ತಮವಾಗಿದ್ದು, ಪುರಸಭೆಯಿಂದ ಅದಕ್ಕೆ ಅವಕಾಶ ಇದೆಯೇ ಎಂಬುದರ ಕುರಿತು ಸದಸ್ಯರು ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ನಮ್ಮಲ್ಲಿ ಅವಕಾಶ ಇಲ್ಲದೇ ಇದ್ದರೆ ಸಂಬಂಧಪಟ್ಟ ಇಲಾಖೆಯವರ ಬಳಿ ಸಾರ್ವಜನಿಕರಿಂದ ಬಂದ ಅಭಿಪ್ರಾಯ ಕುರಿತು ಪ್ರಸ್ತಾಪ ಮಾಡಲಾಗುವುದು.

-ಮಹಮ್ಮದ್‌ ಶರೀಫ್‌,ಅಧ್ಯಕ್ಷರು, ಬಂಟ್ವಾಳ ಪುರಸಭೆ

ಈ ಸೇತುವೆಯ ಕುರಿತು ಬಂಟ್ವಾಳ ಇತಿಹಾಸ ದರ್ಶನ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದ್ದು, ಬ್ರಿಟಿಷ್‌ ಸರಕಾರದ ಎತ್ತಿನ ಗಾಡಿ ಓಡಾಟದ ಕಾಲದಲ್ಲಿ ನಿರ್ಮಿಸಿದರೂ ಸೇತುವೆ ಬಳಿಕ ದೈತ್ಯಗಾತ್ರದ ವಾಹನಗಳು ನಿರಂತರವಾಗಿ ಓಡಾಟ ನಡೆಸಿದರ ಯಾವುದೇ ತೊಂದರೆ ಉಂಟಾಗಿರಲಿಲ್ಲ. ಆದರೆ 2002ರಲ್ಲಿ ಲಾರಿಯೊಂದು ಸಾಗುವ ವೇಳೆ ಸೇತುವೆಯಲ್ಲಿ ಸಣ್ಣ ಮಟ್ಟಿನ ಕುಸಿತ ಕಂಡುಬಂದು, ಘನ ವಾಹನ ಸಂಚಾರ ನಿಷೇಧಗೊಂಡಿತ್ತು.

_ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next