ನೆಲಮಂಗಲ: ಕ್ರಷರ್‌ಗಳಿಂದ ಕಲ್ಲು, ಜಲ್ಲಿ, ಡಸ್ಟ್ ತುಂಬಿದ ಲಾರಿಗಳು ಬೈಕ್ ಸೇರಿದಂತೆ ಇತರೆ ವಾಹನ ಚಾಲಕರಿಗೆ ಅಪಾಯ ಎದುರು ಮಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ತಾಲೂಕಿನ ನಗರಸಭೆ ವ್ಯಾಪ್ತಿ ಸೇರಿದಂತೆ ಸೋಂಪುರ, ತ್ಯಾಮಗೊಂಡ್ಲುಗಳಲ್ಲಿ ಕ್ರಷರ್‌ಗಳಿಂದ ಬರುವ ಲಾರಿಗಳು ಕಲ್ಲುಗಳನ್ನು ಸಾಗಿಸುವಾಗ ಯಾವುದೇ ಮುಂಜಾಗ್ರತೆ ವಹಿಸದೇ ರಸ್ತೆಗಳಲ್ಲಿ ಸಾಗಾಟ ಮಾಡುತ್ತಿದ್ದು ,ಬೈಕ್ ಸವಾರರು ಹೆಚ್ಚು ಭಯದಿಂದಲೇ ಸಂಚರಿಸುವಂತಾಗಿದೆ.
ಕಲ್ಲು, ಡಸ್ಟ್ ಗಳನ್ನು ತುಂಬಿಕೊಂಡು ರಸ್ತೆಗೆ ಬರುವ ವಾಹನ ಅತಿ ವೇಗವಾಗಿ ಸಂಚಾರ ಮಾಡುವುದರಿಂದ ರಸ್ತೆಯಲ್ಲಿ ಗುಂಡಿ ಹಾಗೂ ಉಬ್ಬುಗಳು ಸಿಕ್ಕಾಗ ಲಾರಿಯಿಂದ ಕಲ್ಲುಗಳು ಕೆಳಗೆ ಬೀಳುತ್ತಿದ್ದು, ದೂಳು ಗಾಳಿಗೆ ತೂರಿ ವಾಹನ ಚಾಲಕರಿಗೆ ಹಾಗೂ ಸವಾರರಿಗೆ ತೊಂದರೆ ಎದುರಾಗುತ್ತಿದೆ.
ಓವರ್‌ಲೋಡ್: ಕಲ್ಲುಗಳ ಸಾಗಾಟ ಮಾಡುವಾಗ ಟಿಪ್ಪರ್ ಲಾರಿಗಳಿಗೆ ಬಾಗಿಲು ಹಾಕದೇ ಸಾಗಾಟ ಮಾಡುತ್ತಿದ್ದರೆ, ಡಸ್ಟ್ ಸಾಗಿ ಸುವ ಲಾರಿಗಳಲ್ಲಿ ಲೋಡ್ ಮಾಡಿ ಟಾರ್ಪಾಲ್ ಹಾಕದೇ ಸಂಚಾರ ಮಾಡುತ್ತಿದ್ದಾರೆ. ಕಲ್ಲು, ಜಲ್ಲಿ, ಡಸ್ಟ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಲಾರಿಗಳಲ್ಲಿ ಓವರ್‌ಲೋಡ್ ತುಂಬಿಕೊಂಡು ನಗರ ಪ್ರದೇಶದಲ್ಲಿ ಓಡಾಡಿದರೂ ಅಧಿಕಾರಿಗಳು ಮಾತ್ರ ವಿಚಾರ ಣೆಗೆ ಮುಂದಾಗಿಲ್ಲ.ಇದೇ ರೀತಿ ವಾಹನ ಓಡಾಟಕ್ಕೆ ಪೊಲೀಸರ ಕೃಪಾಕಟಾಕ್ಷ ಇದ್ದರೆ ಕಾನೂನನ್ನು ಮಾರಿಕೊಂಡಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲು,ರಾತ್ರಿ ಓಡಾಟ: ಈ ಹಿಂದೆ ರಾತ್ರಿ ವೇಳೆ ಕಲ್ಲು ಹಾಗೂ ಡಸ್ಟ್ ತುಂಬಿದ ಲಾರಿಗಳು ಹೆಚ್ಚು ಓಡಾಟ ಮಾಡುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿಯೇ ಕಾನೂನು ಉಲ್ಲಂಘಿಸಿ ಲಾರಿಗಳು ಓಡಾಡುತ್ತಿವೆ. ಈ ಮೂಲಕ ವಾಹನ ಸವಾರರ ಜೀವಕ್ಕೆ ಕುತ್ತು ತರುತ್ತಿವೆ. ಕೂಡಲೇ ಅಕ್ರಮಕ್ಕೆ ಅಧಿಕಾರಿಗಳು ಕಡಿವಾಣ ಹಾಕುವ ಮೂಲಕ ಕಾನೂನು ಪಾಲನೆ ಮಾಡಬೇಕಾಗಿದೆ.
ಇದನ್ನೂ ಓದಿ: ಬಜೆಟ್‌ನಲ್ಲಿ ಉಪನಗರ ರೈಲಿಗಿಲ್ಲ ಅನುದಾನ
ಪೊಲೀಸರಿಗೆ ಕಾಣಲ್ಲ : ಪೊಲೀಸ್ ಠಾಣೆಗಳಿರುವ ಮಾರ್ಗವಾಗಿಯೇ ಕ್ರಷರ್ ಲಾರಿಗಳು ಸಂಚಾರ ಮಾಡುತ್ತಿದ್ದರೂ ಪೊಲೀಸರಿಗೆ ಮಾತ್ರ ಕಾಣುತ್ತಿಲ್ಲ. ಕೆಲವು ಬಾರಿ ಟ್ರಾಫಿಕ್ ಪೊಲೀಸರ ಎದುರೇ ಹೋದರೂ ನಮಗೆ ಕಾಣಲಿಲ್ಲ ಎಂಬಂತೆ ಸುಮ್ಮನಿರುತ್ತಾರೆ. ಅಮಾಯಕ ಜನರ ಮೇಲೆ ಕಠಿಣ ಕ್ರಮದ ಮಾತನಾಡುವ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಲಾರಿ ಮಾಲೀಕರ ಮೇಲೆ ಕ್ರಮಕೈಗೊಳ್ಳುವುದಿಲ್ಲ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ.¨