Advertisement

Ullal: ಉಳ್ಳಾಲ ಬಳಿ ಕ್ರೂಸ್‌ ಬಂದರು- ಪ್ರವಾಸೋದ್ಯಮ ಉತ್ತೇಜನಕ್ಕೆ ಸರಕಾರದ ಪ್ರಸ್ತಾವನೆ

11:52 PM Nov 09, 2023 | Team Udayavani |

ಬೆಂಗಳೂರು: ಮುಂಬಯಿಯಲ್ಲಿ ದೇಶದ ಮೊದಲ ಅಂತಾರಾಷ್ಟ್ರೀಯ ಕ್ರೂಸ್‌ ಮಾರ್ಗಕ್ಕೆ ಚಾಲನೆ ಲಭಿಸಿದ ಬೆನ್ನಲ್ಲೇ ಉಳ್ಳಾಲದ ಬಳಿ ಕ್ರೂಸ್‌ ಬಂದರು ನಿರ್ಮಿಸುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ರಾಜ್ಯ ಸರಕಾರ ಚಿಂತಿಸಿದೆ.

Advertisement

ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿ ಇಲಾಖಾ ಪ್ರಗತಿ ಕುರಿತು ಗುರುವಾರ ನಡೆದ ಸಭೆ ಬಳಿಕ ಸಚಿವ ಮಂಕಾಳ ವೈದ್ಯ ಈ ಬಗ್ಗೆ ಮಾಹಿತಿ ನೀಡಿದರು.

ಪ್ರತ್ಯೇಕ ಬಂದರು
ರಾಷ್ಟ್ರೀಯ ಹೆದ್ದಾರಿ 66ರ ಬಳಿ ತಲಪಾಡಿ ಹಾಗೂ ಬಟ್ಟಪ್ಪಾಡಿ ಬೀಚ್‌ ನಡುವೆ ಒಟ್ಟು 1,325 ಮೀ. ಅಗಲ ಹಾಗೂ ಸರಾಸರಿ 625 ಮೀ. ಉದ್ದದ ಕ್ರೂಸ್‌ ಬಂದರು ನಿರ್ಮಾಣದ ನೀಲ ನಕ್ಷೆ ತಯಾರಿಸಲಾಗಿದೆ. ಇಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಟರ್ಮಿನಲ್‌ ಕಟ್ಟಡ, ಆಡಳಿತ ಕಚೇರಿ ಮತ್ತಿತರ ಸೌಲಭ್ಯ ಒದಗಿ ಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ನೀಲನಕ್ಷೆಯನ್ನು ಬಿಡಿಸಿಟ್ಟರು.

ಮೂರೂ ಜಿಲ್ಲೆಗಳಲ್ಲಿ ಸುಮಾರು 13 ದ್ವೀಪ ಪ್ರದೇಶಗಳನ್ನು ಗುರುತಿಸಿದ್ದು, ಈ ಪ್ರದೇಶಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿವೆ. ಇವುಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬ ಚಿಂತನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಸರಕಾರದಿಂದ ಸಾಗರಮಾಲಾ ಯೋಜನೆಯಡಿ 2017-18ರಿಂದ 1 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬಿಡುಗಡೆಯಾಗಿದ್ದು, 13 ಯೋಜನೆಗಳನ್ನು ಕೈಗೊಂಡು 693 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಕೆಲವು ಯೋಜನೆಗಳು ಟೆಂಡರ್‌ ಹಂತದಲ್ಲಿದ್ದು, ಕೆಲವು ಪ್ರಕರಣಗಳಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಡ್ಡಿ ಇರುವುದರಿಂದ ಅನುಮತಿ ಪಡೆಯುವುದಕ್ಕೆ ಪ್ರಯತ್ನಗಳು ನಡೆದಿವೆ ಎಂದು ಮಾಹಿತಿ ನೀಡಿದರು.

Advertisement

10 ಮೀ. ಆಳದ ಕ್ರೂಸರ್‌ ನಿಲುಗಡೆ
ದೇಶದ ಪಶ್ಚಿಮ ಭಾಗದಲ್ಲಿ ಜಲಸಾರಿಗೆ, ಕ್ರೂಸ್‌ ಪ್ರವಾಸಕ್ಕೆ ಅಪಾರ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ದಕ್ಷಿಣ ಭಾಗದಲ್ಲಿ ಉಳ್ಳಾಲ ಸಮೀಪ ಪ್ರಕೃತಿಸಹಜ ಆಳ ಕಡಲತಡಿಯನ್ನು ಬಳಸಿಕೊಂಡು ಮಾನವ ಜಲಸಾರಿಗೆ ಬಂದರು (ಕ್ರೂಸ್‌) ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಏಕಕಾಲಕ್ಕೆ ಕನಿಷ್ಠ ಎರಡು 10 ಮೀ. ಆಳದ ಕ್ರೂಸ್‌ ಹಡಗುಗಳನ್ನು ನಿಲ್ಲಿಸುವ ಸಾಮರ್ಥ್ಯದ ಬಂದರು ನಿರ್ಮಿಸಲು ಸರಕಾರ ಚಿಂತಿಸಿದೆ.

ಸೀಮೆ ಎಣ್ಣೆಗೆ 35 ರೂ. ಸಹಾಯಧನ
ಮೀನುಗಾರಿಕೆ ದೋಣಿಗಳಿಗೆ 1.50 ಲಕ್ಷ ಕಿ.ಲೀ. ಡೀಸೆಲ್‌ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ 2 ಲಕ್ಷ ಕಿ.ಲೀ.ಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರಕಾರದಿಂದ ಸೀಮೆ ಎಣ್ಣೆ ಹಂಚಿಕೆ ಆಗದೆ ಇರುವುದರಿಂದ ರಾಜ್ಯ ಸರಕಾರವೇ ಸೀಮೆ ಎಣ್ಣೆ ಖರೀದಿದಾರರಿಗೆ ಸಹಾಯಧನ ನೀಡಲು ನಿರ್ಧರಿಸಿದೆ. ಪ್ರತೀ ಲೀಟರ್‌ ಸೀಮೆಎಣ್ಣೆಗೆ 35 ರೂ. ಸಹಾಯಧನ ನೀಡಲಾಗುತ್ತದೆ. ಮೀನುಗಾರಿಕೆ ಚಟುವಟಿಕೆಗಳು ಇಲ್ಲದಿರುವ ಜೂನ್‌ ಹಾಗೂ ಜುಲೈ ತಿಂಗಳು ಹೊರತುಪಡಿಸಿ ಉಳಿದ 10 ತಿಂಗಳು ಸೀಮೆಎಣ್ಣೆ ಖರೀದಿಸುವ ಮೀನುಗಾರರಿಗೆ ಸಹಾಯಧನ ನೀಡಲಾಗುತ್ತದೆ. 300 ಲೀಟರ್‌ವರೆಗೆ ಖರೀದಿಸಬಹುದಾಗಿದ್ದು, ಪ್ರಸ್ತುತ 200 ಲೀ.ವರೆಗಿನ ಖರೀದಿಗೆ ಸಹಾಯಧನ ನೀಡಲಾಗುತ್ತದೆ ಎಂದು ಸಚಿವ ವೈದ್ಯ ವಿವರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next