ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬ್ಯಾಂಡೂ ಜೂ ಪ್ರದೇಶದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಸಿಬ್ಬಂದಿಯೋರ್ವರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಇಬ್ಬರು ಭಯೋತ್ಪಾದಕರನ್ನು ಎನ್ ಕೌಂಟರ್ ಮೂಲಕ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಪುಲ್ವಾಮಾ ಜಿಲ್ಲೆಯ ಬ್ಯಾಂಡೂ ಜೂ ಪ್ರದೇಶದಲ್ಲಿ, ಜಮ್ಮು ಕಾಶ್ಮೀರದ ಪೋಲಿಸ್, ಭಾರತೀಯ ಸೇನೆ, ಸಿಆರ್ ಪಿ ಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಂದು ಮುಂಜಾನೆ (23-06-2020) ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು., ಗ್ರಾಮದಲ್ಲಿ ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಪಡೆದು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.
ಇದೇ ವೇಳೆ ಉಗ್ರರು ಹಾರಿಸಿದ ಗುಂಡು ಸಿಆರ್ ಪಿಎಫ್ ಯೋಧರೊಬ್ಬರಿಗೆ ತಗುಲಿ ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ. ಸ್ಥಳದಲ್ಲಿ ಇನ್ನು 2-3 ಉಗ್ರರು ಅಡಗಿರುವ ಸಾಧ್ಯತೆ ಇದ್ದು ಕಾರ್ಯಾಚರಣೆ ಮುಂದುವರೆದಿದೆ. ಮೃತ ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ತಿಳಿದುಬಂದಿಲ್ಲ.
ಎನ್ ಕೌಂಟರ್ ಸ್ಥಳದಿಂದ ಎರಡು ಎಕೆ -47 ರೈಫಲ್‌ಗಳನ್ನು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಶೊಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.