Advertisement

Udupi: ಧಾರ್ಮಿಕ ಕ್ಷೇತ್ರಗಳಲ್ಲಿ ಜನಸಂದಣಿ; ಪ್ರವಾಸಿತಾಣ ಹೌಸ್‌ಫುಲ್‌, ಲಾಡ್ಜ್‌ ಗಳು ಭರ್ತಿ

03:02 PM Dec 30, 2023 | Team Udayavani |

ಉಡುಪಿ: ಕ್ರಿಸ್ಮಸ್‌, ಹೊಸ ವರ್ಷ ವಾರಾಂತ್ಯದ ರಜೆ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಸಿಕ್ಕ ಸಾಲು ಸಾಲು ರಜೆಗಳನ್ನು ಬಳಸಿಕೊಂಡು ಜಿಲ್ಲೆಯ ಪ್ರವಾಸಿ ತಾಣಗಳಿಗೆ ತಾಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಲ್ಲಿ ಶ್ರೀಕೃಷ್ಣಮಠ ಮತ್ತು ಮಲ್ಪೆ ಬೀಚ್‌ ಅಗ್ರಸ್ಥಾನದಲ್ಲಿದೆ.

Advertisement

ಜಿಲ್ಲೆಯ ಕರಾವಳಿ ತೀರಗಳಿಗೆ ಪ್ರವಾಸಿಗರ ದಂಡು ಭೇಟಿ ನೀಡಿ ಕಡಲ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ. ಮಲ್ಪೆ, ಪಡುಕರೆ, ಕಾಪು, ಪಡುಬಿದ್ರಿ, ಕುಂದಾಪುರ, ಮರವಂತೆ, ಒತ್ತಿನೆಣೆ ಬೀಚ್‌ ನಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡಿ ಸಂಭ್ರಮಿಸಿದ್ದಾರೆ. ಜತೆಗೆ ಶ್ರೀಕೃಷ್ಣಮಠ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಕ್ರಿಸ್ಮಸ್‌ ರಜೆ ಇರುವ ಹಿನ್ನೆಲೆಯಲ್ಲಿ ಕೆಲವರು ಕುಟುಂಬ ಪ್ರವಾಸ ಹಮ್ಮಿಕೊಂಡರೆ, ಕೆಲವರು ವರ್ಷಾಂತ್ಯದ ಸಂಭ್ರಮಕ್ಕಾಗಿ ಉಡುಪಿಯ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೊರ ಜಿಲ್ಲೆ ಸಹಿತ ಹೊರ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿಗೆ ಆಗಮಿಸಿದ್ದಾರೆ. ಕೃಷ್ಣಮಠ ಪಾರ್ಕಿಂಗ್‌ ಪ್ರದೇಶ ಪ್ರವಾಸಿಗರಿಂದ ತುಂಬಿಕೊಂಡಿದ್ದು, ಕೆಲವು ಪ್ರವಾಸಿಗರು ಅಲ್ಲಿಯೇ ಅಡುಗೆ ಮಾಡಿ ಊಟ, ತಿಂಡಿ ಮಾಡಿಕೊಳ್ಳುತ್ತಿದ್ದಾರೆ. ಕೃಷ್ಣಮಠದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ
ಲಕ್ಷಾಂತರ ಮಂದಿ ಭಕ್ತರು ಸರದಿಯಲ್ಲಿ ನಿಂತು ಕೃಷ್ಣ ದರ್ಶನ ಮಾಡುತ್ತಿದ್ದಾರೆ.

ಉಡುಪಿಯಲ್ಲಿ ಶಾಲಾ ಮಕ್ಕಳ ರಂಗು
ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳು ಶೈಕ್ಷಣಿಕ ಪ್ರವಾಸಕ್ಕೆ ಉಡುಪಿಯನ್ನೆ ಮೊದಲ ಆಯ್ಕೆ ಮಾಡಿಕೊಂಡಂತಿದೆ. ಮಲ್ಪೆ ಬೀಚ್‌, ಶ್ರೀಕೃಷ್ಣಮಠದ ಪರಿಸರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಾರೆ. ಜತೆಗೆ ಮಣಿಪಾಲದ ಮಾಹೆ “ಅನಾಟಮಿ’ ವಿಜ್ಞಾನ ಸಂಗ್ರಹಾಲಯ, ಮಣಿಪಾಲ್‌ ಪ್ರಸ್‌ ಅನ್ನು ನೋಡಲು ಕಳೆದ ಒಂದು ವಾರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಲಾಡ್ಜ್ , ಹೊಂ ಸ್ಟೇ ಬುಕ್ಕಿಂಗ್‌
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಲಾಡ್ಜ್, ವಸತಿಗೃಹ, ಮಠದ ಛತ್ರ, ಹೋಂ ಸ್ಟೇಗಳು ಭರ್ತಿಯಾಗಿವೆ. ಕ್ರಿಸ್ಮಸ್‌ ರಜೆ, ವರ್ಷಾಂತ್ಯ ಸಂಭ್ರಮ ಆಚರಿಸಲು ಎರಡು ತಿಂಗಳ ಹಿಂದೆಯೇ ಬುಕ್ಕಿಂಗ್‌ ಪ್ರಕ್ರಿಯೆ ಆರಂಭಗೊಂಡಿತ್ತು. ಬಹುತೇಕ ಮಂದಿ ತಿಂಗಳ ಹಿಂದೆಯೇ ಕೊಠಡಿಗಳನ್ನು ಕಾದಿರಿಸಿದ್ದರು. ಕೆಲವು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲದೆ ಸಾಕಷ್ಟು ಹುಡುಕಾಡುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next