Advertisement

ಕೃಷಿಮೇಳಕ್ಕೆ ಹರಿದು ಬಂದ ಜನಸಾಗರ

01:04 AM Oct 27, 2019 | Lakshmi GovindaRaju |

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕೃಷಿಮೇಳ ಎಂದಿಗಿಂತ ಶನಿವಾರ ಜನಜಂಗುಳಿಯಿಂದ ಕೂಡಿದ್ದು, ರೈತರು, ಕೃಷಿ ಆಸಕ್ತರು ಮತ್ತು ವಿದ್ಯಾರ್ಥಿಗಳ ದಂಡೇ ಹರಿದು ಬಂದಿತ್ತು. ಮೊದಲೆರಡು ದಿನಗಳಿಗಿಂತಲೂ ಮೂರನೇ ದಿನ ಕೃಷಿ ಮೇಳ ಜನರಿಂದ ತುಂಬಿ, ತುಳುಕುತ್ತಿತ್ತು.

Advertisement

ಕೃಷಿ ಉತ್ಪನ್ನ ಮತ್ತು ಯಂತ್ರೋಪಕರಣಗಳ ಮಾರಾಟವೂ ಭರದಿಂದ ನಡೆಯುತ್ತಿದ್ದು, ಬೆಂಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು, ರೈತ ಮಹಿಳೆಯರು ಕೃಷಿಮೇಳಕ್ಕೆ ಬಂದಿದ್ದರು. ಶಾಲಾ, ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೂವಿನ ತೋಟ, ತರಕಾರಿ, ಹನಿ ನೀರಾವರಿ, ಮಳಿಗೆಗಳ ಬಳಿ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಶಾಲಾ- ಕಾಲೇಜು ವಿದ್ಯಾರ್ಥಿಗಳದ್ದೇ ದರ್ಬಾರ್‌: ಮಹಾದೇವ ಪಿಯು ಕಾಲೇಜು, ನಾಗಾರ್ಜುನ ಕಾಲೇಜು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಈಸ್ಟ್‌ ವೆಸ್ಟ್‌ ಅಕಾಡೆಮಿ ಸೇರಿದಂತೆ 20ಕ್ಕೂ ಅಧಿಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸಿದ್ದರು. ಸರತಿ ಮೂಲಕವೇ ಪ್ರತಿ ಮಳಿಗೆಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳನ್ನು ತಿಳಿದುಕೊಂಡರು. ಶಾಲಾ ಸಮವಸ್ತ್ರದಲ್ಲಿಯೇ ಭಾಗವಹಿಸಿದ್ದು ವಿಶೇಷವಾಗಿತ್ತು.

ಹೋಳಿಗೆ ಊಟ ಸವಿದರು: ಕೃಷಿಮೇಳ ಆರಂಭವಾಗಿ ಮೂರುದಿನವಾಗಿದ್ದು, ಶನಿವಾರ ಹೋಳಿಗೆ ಊಟ ನೀಡಲಾಯಿತು. ಒಂದು ಊಟಕ್ಕೆ 50 ರೂ. ಇದ್ದು, ಹೋಳಿಗೆ, ತುಪ್ಪ, ಮುದ್ದೆ, ಅನ್ನ, ಸಾರು, ಮೊಸರನ್ನವನ್ನು ಜನರು ಸವಿದರು. ಎಂದಿನಂತೆಯೇ ಊಟದ ಸರತಿ ದೊಡ್ಡದಾಗಿದ್ದು, ಆಹಾರ ವೇಸ್ಟ್‌ ಮಾಡದಂತೆ ಸೂಚನಾ ಫ‌ಲಕಗಳನ್ನು ಹಾಕಲಾಗಿತ್ತು. ಭಾನುವಾರ ಕೊನೆ ದಿನವಾಗಿದ್ದು, ಮುದ್ದೆ ಊಟ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮೂರು ದಿನ ಹನ್ನೊಂದು ಲಕ್ಷ ಜನ: ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಶನಿವಾರ ಒಂದೇ ದಿನ ಆರು ಲಕ್ಷ ಜನರು ಲಗ್ಗೆ ಇಟ್ಟಿದ್ದು, ಒಟ್ಟಾರೆ ಈವರೆಗೆ ಹನ್ನೊಂದು ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಜಿಕೆವಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ ಒಂದೂವರೆ ಲಕ್ಷ ಹಾಗೂ ಎರಡನೇ ದಿನ ಮೂರೂವರೆ ಲಕ್ಷ ಜನರು ಮೇಳವನ್ನು ಕಣ್ತುಂಬಿಕೊಂಡಿದ್ದಾರೆ. ಇದರಲ್ಲಿ ಬಹುತೇಕ ರೈತರಾಗಿದ್ದು, ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಭಾನುವಾರ ಏಂಟು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೃಷಿಮೇಳ ಬೆಂಗಳೂರಿನ ಜತೆಗೆ ಪ್ರತಿ ತಾಲೂಕು ಮಟ್ಟದಲ್ಲಿಯೂ ನಡೆಯಬೇಕು. ರೈತರು ಬೆಳೆದ ವಸ್ತುಗಳನ್ನು ಮೇಳದಲ್ಲಿಡುವಂತಾಗಬೇಕು. ಇದರಿಂದ ರೈತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇವತ್ತಿನ ಮೇಳ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾದಂತಾಗಿದೆ. ರೈತರಿಗೆ ಮಾಹಿತಿ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಗಮನಹರಿಸಬೇಕು.
-ಕೆಂಚೇಗೌಡ, ಹೊಸಕೋಟೆ

ಕೀಟನಾಶಕ, ಗೊಬ್ಬರದಿಂದ ಬೆಳೆದ ಬೆಳೆ ಆರೋಗ್ಯಕ್ಕೆ ಯೋಗ್ಯವಲ್ಲ. ಇಂತಹ ಕೃಷಿ ಮೇಳದಲ್ಲಿ ಸಾವಯವ ಗೊಬ್ಬರದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಮೇಳದ ಮೂಲಕ ಸರ್ಕಾರ ಸಾವಯವ ಕೃಷಿಕಡೆ ಗಮನ ಹರಿಸಲು ಜನರಿಗೆ ಪ್ರೋತ್ಸಾಹಿಸಬೇಕು.
-ಹೈದರ್‌ ಬೇಗ್‌, ಮುಗಬಾಳ

ಇದೇ ಮೊದಲ ಬಾರಿಗೆ ಮೇಳಕ್ಕೆ ಬಂದಿದ್ದೇನೆ. ಇಲ್ಲಿಗೆ ಬಂದಿರುವುದು ಖುಷಿ ತಂದಿದೆ. ಹೊಸ- ಹೊಸ ತಂತ್ರಜ್ಞಾನದಿಂದ ಬೆಳೆ ಹೇಗೆ ಬೆಳೆಯಬೇಕು ಎಂಬ ಮಾಹಿತಿ ಪಡೆದಿದ್ದೇನೆ. ಊರಿನಲ್ಲಿ ನಮ್ಮದು ಜಮೀನಿದ್ದು ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗುತ್ತೇನೆ.
-ನಂದ ಕಿಶೋರ್‌, ಮಹದೇವ ಪಿಯು ಕಾಲೇಜು ವಿದ್ಯಾರ್ಥಿ

ಕೃಷಿಮೇಳದಲ್ಲಿ ಕೋಳಿ, ಹಸು, ಕುರಿ, ಮೀನು ಸಾಕಣೆ ಹಾಗೂ ಮಿತ ನೀರಿನಿಂದ ಬೆಳೆ ಹೇಗೆ ಬೆಳೆಯಬಹುದು ಎಂಬುದನ್ನು ತಿಳಿಯಿತು. ಸಾವಯವ ಗೊಬ್ಬರದ ಮಹತ್ವ, ಯಂತ್ರೋಪಕರಣಗಳ ಉಪಯೋಗ ಬಗ್ಗೆ ಮಾಹಿತಿ ಪಡೆದುಕೊಂಡೆ. ಪ್ರಸ್ತುತ ಪಿಯುಸಿ ಓದುತ್ತಿದ್ದು, ಅಗ್ರಿಕಲ್ಚರ್‌ ಪದವಿ ಮಾಡುತ್ತೇನೆ.
-ಎನ್‌.ಮಂಜುನಾಥ, ವಿದ್ಯಾರ್ಥಿ

ಅರಕಲಗೂಡಿನಲ್ಲಿ ನಮ್ಮದು ಐದು ಎಕರೆ ಜಮೀನು ಇದ್ದು, ರೇಷ್ಮೆ, ಆಲೂಗಡ್ಡೆ ಬೆಳೆಯುತ್ತೇವೆ. ಇದೇ ಮೊದಲ ಬಾರಿಗೆ ಕೃಷಿಮೇಳಕ್ಕೆ ಬಂದಿದ್ದು, ನಮ್ಮ ಬೆಳೆಗೆ ಉಪಯುಕ್ತವಾದ ವಸ್ತುಗಳನ್ನು ಕೊಂಡೊಯ್ಯುತ್ತೇನೆ. ಉತ್ತಮವಾಗಿ ಮೇಳ ಆಯೋಜಿಸಿದ್ದಾರೆ.
-ಸರೋಜಮ್ಮ, ರೈತ ಮಹಿಳೆ

ಮೇಳಕ್ಕೆ ಎರಡನೇ ಬಾರಿಗೆ ಬರುತ್ತಿದ್ದೇನೆ. ಪ್ರತಿವರ್ಷವೂ ರೈತರಿಗೆ ಅನುಕೂಲಕರವಾದ ಯಂತ್ರಗಳು ಬರುತ್ತಿ¤ವೆ. ಹಾಗೆಯೇ ಮನೆಗೆ ಬೇಕಾದ ವಸ್ತುಗಳು, ಮನೆಯಲ್ಲಿ ಗಾರ್ಡನ್‌ ನಿರ್ಮಾಣಕ್ಕೆ ಬೇಕಾದ ಪರಿಕರಗಳನ್ನು ಕೊಂಡುಕೊಂಡಿದ್ದೇನೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದು, ಹೋಳಿಗೆ ಊಟ ಚೆನ್ನಾಗಿತ್ತು.
-ಕಾವ್ಯ, ಬೆಂಗಳೂರು ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next