Advertisement

ಮೂಡುಬಿದಿರೆ ಜಾಂಬೂರಿಗೆ ಹರಿದು ಬಂದ ಜನಸ್ತೋಮ; ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ ನಿರ್ಮಾಣವಾಗಬೇಕಿದೆ: ಡಾ.ಆಳ್ವ

06:46 PM Dec 26, 2022 | Team Udayavani |

ಮೂಡುಬಿದಿರೆ: ಕಳೆದ ಆರು ದಿನಗಳ ಕಾಲ ಮೂಡುಬಿದಿರೆಯ ಆಳ್ವಾಸ್ ನ ವಿದ್ಯಾಗಿರಿ ಆವರಣದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಅಭೂತಪೂರ್ವ ಜನಬೆಂಬಲ ದೊರಕುವ ಮೂಲಕ ಯಶಸ್ವಿಯಾಗಿದೆ. ಪ್ರತಿದಿನ ಲಕ್ಷಾಂತರ ಮಂದಿ ಜಾಂಬೂರಿಯನ್ನು ವೀಕ್ಷಿಸುವ ಮೂಲಕ ವಿದ್ಯಾಗಿರಿಯಲ್ಲಿ ವಿಸ್ಮಯ ಲೋಕವೇ ಸೃಷ್ಟಿಯಾಗಿತ್ತು ಎಂದು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.

Advertisement

ಸೋಮವಾರ (ಡಿಸೆಂಬರ್ 26) ಆಳ್ವಾಸ್ ನ ವಿದ್ಯಾಗಿರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಜಾಂಬೂರಿ ಮೂಡಬಿದಿರೆಯಲ್ಲಿ ಯಶಸ್ವಿಯಾಗಿ ನಡೆಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ, ಅದೇ ರೀತಿ ಅದರ ಮುಂದುವರಿದ ಭಾಗವಾಗಿ ಯುವಶಕ್ತಿ ಕೇಂದ್ರವನ್ನು ನಿರ್ಮಿಸುವುದು ಕೂಡಾ ನಮ್ಮೆಲ್ಲರ ಆದ್ಯತೆಯಾಗಿದೆ.

ಜಾಂಬೂರಿಯಲ್ಲಿ ನಾವು ಆಹಾರಮೇಳ, ವಿಜ್ಞಾನ ಮೇಳ, ಪುಸ್ತಕ ಮೇಳ, ಕೃಷಿ ಮೇಳ, ಸಾಂಸ್ಕೃತಿಕ ಮೇಳವನ್ನು ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಪ್ರೀತಿಯಿಂದ ಆಹ್ವಾದಿಸಿದ್ದಾರೆ. ಇಂತಹ ಅಂತಾರಾಷ್ಟ್ರೀಯ ಜಾಂಬೂರಿ ಮೇಳ ನಡೆಸಲು 35ರಿಂದ 40 ಕೋಟಿ ರೂಪಾಯಿ ಅಗತ್ಯವಿದೆ. ಈಗಾಗಲೇ ರಾಜ್ಯ ಸರ್ಕಾರ ಹತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ನಮ್ಮ ಶಾಸಕರು, ಸಂಸದರು ದೊಡ್ಡ ಮನಸ್ಸು ಮಾಡಿ ಸರ್ಕಾರದಿಂದ ಸಿಗಬೇಕಾದ ಇನ್ನಷ್ಟು ಆರ್ಥಿಕ ಸೌಲಭ್ಯವನ್ನು ಕೊಡಿಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಡಾ.ಮೋಹನ್ ಆಳ್ವ ಹೇಳಿದರು.

ಶನಿವಾರ-ಭಾನುವಾರ ಜನಸ್ತೋಮ:

ಡಿಸೆಂಬರ್ 21ರಂದು ಆರಂಭಗೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಸೆಂಬರ್ 24 ಮತ್ತು 25ರಂದು ಆಳ್ವಾಸ್ ನ ವಿದ್ಯಾಗಿರಿ ಕ್ಯಾಂಪಸ್ ಜನಸ್ತೋಮದಿಂದ ತುಂಬಿ ಹೋಗಿತ್ತು. ಶನಿವಾರ, ಭಾನುವಾರ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಭೇಟಿ ನೀಡಿದ್ದು, ಒಟ್ಟು ಎರಡು ಲಕ್ಷಕ್ಕೂ ಅಧಿಕ ಮಂದಿಗೆ ಊಟ ಬಡಿಸಲಾಗಿತ್ತು.

Advertisement

ಹರಿದುಬಂದ ಹೊರೆಕಾಣಿಕೆ:

ಮೂಡುಬಿದಿರೆಯ ಜಾಂಬೂರಿಗೆ ಅಪಾರ ಪ್ರಮಾಣದಲ್ಲಿ ಹೊರೆಕಾಣಿಕೆ ಬಂದಿರುವುದಕ್ಕೆ ಎಲ್ಲರನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ಡಾ.ಮೋಹನ್ ಆಳ್ವ ತಿಳಿಸಿದ್ದಾರೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಇಂತಹ ದೊಡ್ಡ ಜಾಂಬೂರಿ ಕಾರ್ಯಕ್ರಮ ಮಾಡುವ ಸವಾಲು ನಮ್ಮ ಮುಂದೆ ಇತ್ತು. ಆದರೂ ಹೊರೆಕಾಣಿಕೆಯಲ್ಲಿ ಸುಮಾರು ಮೂರು ಸಾವಿರ ಕ್ವಿಂಟಾಲ್ ಅಕ್ಕಿ, ಮೂರು ಲಕ್ಷ ತೆಂಗಿನ ಕಾಯಿ, ಸಕ್ಕರೆ, ಬೆಲ್ಲ, ಅವಲಕ್ಕಿ, ಗೋಧಿ, ಮೈದಾ, ತರಕಾರಿ ಸೇರಿದಂತೆ ಹಲವು ವಸ್ತುಗಳ ರೂಪದಲ್ಲಿ ಹೊರೆಕಾಣಿಕೆ ಬಂದಿದೆ. ಬಂಟ್ವಾಳದಿಂದ ರಮಾನಾಥ ರೈ ಮತ್ತು ಶಾಸಕರಾದ ರಾಜೇಶ್ ನಾಯ್ಕ್ ಅವರು ಎಲ್ಲರನ್ನೂ ಒಟ್ಟುಗೂಡಿಸಿ ಸೇರಿ 1,400 ಕ್ವಿಂಟಾಲ್ ಅಕ್ಕಿ ಕಳುಹಿಸಿದ್ದರು. ಬೆಳ್ತಂಗಡಿಯಿಂದ ಶಾಸಕ ಹರೀಶ್ ಪೂಂಜಾ ಅವರು 50 ಸಾವಿರ ತೆಂಗಿನ ಕಾಯಿ ಹೊರೆಕಾಣಿಕೆ ನೀಡಿದ್ದರು. ಧರ್ಮಸ್ಥಳದ ಖಾವಂದರರಾದ ಶ್ರೀವೀರೇಂದ್ರ ಹೆಗ್ಗಡೆಯವರು 500ಕ್ವಿಂಟಾಲ್ ಅಕ್ಕಿ ನೀಡಿದ್ದರು. ಪ್ರತಿಯೊಬ್ಬರ ಸಹಕಾರ ನನ್ನ ಜೀವನದಲ್ಲಿ ಮರೆಯುವಂತಿಲ್ಲ ಎಂದು ಡಾ.ಆಳ್ವ ಹೇಳಿದರು.

ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ ನಿರ್ಮಾಣವಾಗಬೇಕಿದೆ:

ನಮ್ಮ ಜಿಲ್ಲೆಯಲ್ಲಿ ಬೇಕಾದಷ್ಟು ಸಂಪನ್ಮೂಲಗಳಿವೆ, ಹಲವಾರು ಸಂಸ್ಥೆಗಳಿವೆ. ನಮ್ಮಲ್ಲಿ ಸ್ಥಳಗಳಿಗೂ ಕೊರತೆಗಳಿಲ್ಲ. ಒಂದು ವೇಳೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಆರ್ಮಿ, ಎನ್ ಸಿಸಿ, ನೌಕಾಪಡೆಗೆ ಬೇಕಾದ ಕ್ಯಾಂಪಸ್ ಮಾಡಬೇಕಾದ ಅನಿರ್ವಾಯತೆ ಇದ್ದಾಗ ಅದನ್ನು ಎಲ್ಲಿ ಮಾಡಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅದಕ್ಕಾಗಿ ನಮ್ಮದೇ ಆದ ಒಂದು ಯುವಶಕ್ತಿ ಕೇಂದ್ರ ಇದ್ದರೆ, ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಅದಕ್ಕಾಗಿ ಮಂಗಳೂರಿನ ಪಿಲಿಕುಳದಲ್ಲಿ ಒಂದು ಸಾವಿರ ಮಂದಿ ಕ್ಯಾಂಪಸ್ ನಲ್ಲಿ ಉಳಿಯುವಂತಹ ಯುವಶಕ್ತಿ ಕೇಂದ್ರದ ನಿರ್ಮಾಣವಾಗಬೇಕಾಗದ ಅಗತ್ಯವಿದೆ. ತರಬೇತಿ ಸೇರಿದಂತೆ ಕ್ಯಾಂಪಸ್ ಗೆ ಅನುಕೂಲವಾಗುವ ಸುಮಾರು 20ಕೋಟಿಗೂ ಅಧಿಕ ಮೊತ್ತದ ಯುವಶಕ್ತಿ ಕೇಂದ್ರ ನಿರ್ಮಿಸುವ ಆಲೋಚನೆ ಇದೆ. ಆ ನಿಟ್ಟಿನಲ್ಲಿ ದೊಡ್ಡ, ದೊಡ್ಡ ಕಂಪನಿಗಳು, ಬ್ಯಾಂಕ್ ಗಳು ಉದಾರ ದೇಣಿಗೆಯನ್ನು ನೀಡಿ ಸಹಕರಿಸಬೇಕು ಎಂದು ಡಾ.ಎಂ.ಮೋಹನ್ ಆಳ್ವ ವಿನಂತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next