Advertisement

ಆತಂಕ:ಅಯ್ಯಪ್ಪ ಭಕ್ತರ ಸಂಖ್ಯೆ ಇಳಿಕೆ  

11:53 AM Nov 29, 2018 | Team Udayavani |

ಪಂಪಾ: ಶಸ್ತ್ರಧಾರಿ ಕಮಾಂಡೋ ಪಡೆಯ ಭದ್ರತೆಯಲ್ಲಿ ಮಾಲಾಧಾರಿಗಳಿಂದ ಅಯ್ಯಪ್ಪನ ದರ್ಶನ, ಆತಂಕದ ಛಾಯೆಯಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶ ವಿವಾದದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಈಗ ಶಸ್ತ್ರಧಾರಿ ಕಮಾಂಡೋ ಪಡೆಗಳದ್ದೇ “ಹವಾ’. ಅಯ್ಯಪ್ಪ ದರ್ಶನಕ್ಕೆ ಬರುವ
ಭಕ್ತರ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ.

Advertisement

ಹೀಗಾಗಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆಯೂ ತೀವ್ರ ಕಡಿಮೆಯಾಗಿದ್ದು, ಮಂಡಲಪೂಜೆ ಸಂದರ್ಭದಲ್ಲೂ  ಲಕ್ಷಾಂತರ ಭಕ್ತರಿಂದ ತುಂಬಿ ತುಳುಕುತ್ತಿದ್ದ ಶಬರಿಮಲೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ “ಖಾಲಿ ಖಾಲಿ’ ಎನಿಸುತ್ತಿದೆ. ವಾರಕ್ಕೆ ಕನಿಷ್ಠ 5 ಲಕ್ಷ ಭಕ್ತರ ದರ್ಶನವಾಗುತ್ತಿದ್ದ ಶಬರಿಮಲೆಯಲ್ಲಿ ಈ ವಾರ ಆ ಸಂಖ್ಯೆ ಎರಡು ಲಕ್ಷಕ್ಕೆ ಇಳಿದಿದೆ.

ಈ ಹಿಂದೆಯೂ ಶಬರಿಮಲೆಯಲ್ಲಿ ಶಸ್ತ್ರಧಾರಿ ಕಮಾಂಡೋ ಪಡೆ ಭದ್ರತೆ ಇತ್ತಾದರೂ ಈಗಿನಷ್ಟು ಇರಲಿಲ್ಲ. ಮಹಿಳೆಯರ ಪ್ರವೇಶ ವಿವಾದದ ನಂತರ ಒಮ್ಮೆ ರಾತ್ರಿ ದೇವಾಲಯ ಆವರಣದಲ್ಲಿ ಭಕ್ತರು ಉಳಿಯಲು ಬಿಡದೆ ಭದ್ರತಾ ಪಡೆ ಜತೆ ಮಾತಿನ ಚಕಮಕಿ ಉಂಟಾಗಿ ಲಾಠಿ ಚಾರ್ಜ್‌ ನಡೆದ ಘಟನೆ ಭಕ್ತರನ್ನು ಘಾಸಿಗೊಳಿಸಿದ್ದು, ಅಲ್ಲಿಗೆ ಹೋದ ನಂತರ ಪರಿಸ್ಥಿತಿ ಏನೋ.. ಹೇಗೋ… ಎಂಬ ಆತಂಕ ಇರುವುದರಿಂದ ಈ ವರ್ಷ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಯ್ಯಪ್ಪ ಮಾಲೆ ಹಾಕಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.

ರೈಲು, ಬಸ್ಸುಗಳಲ್ಲಿ ಯಾತ್ರೆಗೆ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆಯೂ ಕಡಿಮೆಯಾಗಿದ್ದು, ಖಾಸಗಿ ವಾಹನಗಳ ಬುಕಿಂಗ್‌ ಸಹ ಹೆಚ್ಚಾಗಿಲ್ಲ. ಮಂಡಲಪೂಜೆಗೆ ಶಬರಿಮಲೆಗೆ ಹೋಗುವ ಭಕ್ತರು ಹಿಂದಿನಷ್ಟು ಕಂಡುಬರುತ್ತಿಲ್ಲ. 

ಮಕರ ಜ್ಯೋತಿ ವೇಳೆಗೆ ಆತಂಕ
ನಿವಾರಣೆಯಾಗಿ ಭಕ್ತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಯ್ಯಪ್ಪ ದೇವಾಲಯದ ಗುರು ಸ್ವಾಮಿಗಳು ಅಭಿಪ್ರಾಯಪಡುತ್ತಾರೆ.
ವ್ಯವಸ್ಥೆ: ಈ ಮಧ್ಯೆ, ಆತಂಕದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿರುವುದು ಟ್ರಾವೆಂಕೂರ್‌ ದೇವಸ್ವಂ ಮಂಡಳಿಯನ್ನೂ ಚಿಂತೆಗೀಡು ಮಾಡಿದೆ. ಹೀಗಾಗಿ, ಶಬರಿಮಲೆಗೆ ಬರುವ ಭಕ್ತರು ರಾತ್ರಿ ಉಳಿಯುವಂತಿಲ್ಲ ಎಂಬ ಭಯ ನಿವಾರಿಸಲು ಅಲ್ಲೇ ಉಳಿಯುವ ಪರ್ಯಾಯ ವ್ಯವಸ್ಥೆ ಮಾಡಿದೆ. ಮಾಳಿಗೆಪುರತ್ತಮ್ಮ ದೇವಾಲಯ ಸಮೀಪದ ಅನ್ನದಾನ ಮಂಟಪ, ನಂಬಿಯಾರ್‌ ಬೀದಿಯಲ್ಲಿ ಭಕ್ತರು ರಾತ್ರಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟು ಅಗತ್ಯ ಇದ್ದವರಿಗೆ ಚಾಪೆ ಸಹ ವ್ಯವಸ್ಥೆ ಮಾಡಲಾಗುತ್ತಿದೆ. ಅಯ್ಯಪ್ಪನಿಗೆ ತುಪ್ಪದ ಅಭಿಷೇಕ ಈ ಹಿಂದೆ ಬೆಳಗ್ಗೆ 9 ಗಂಟೆಗೆ ಮುಗಿಯುತ್ತಿದಾರೂ ಇದೀಗ 12 ಗಂಟೆವರೆಗೂ
ಸಮಯ ವಿಸ್ತರಿಸಲಾಗಿದೆ. 

Advertisement

ಕೌಂಟರ್ ಮಾಯ
ಕೇರಳದಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಪಂಪಾ ನದಿ ಎರಡೂ ಕಡೆಯ ತಡೆಗೋಡೆ, ಸ್ನಾನ ಘಟ್ಟದ ಕಾಂಕ್ರೀಟ್‌ ಬೆಡ್‌ ಕಿತ್ತುಹೋಗಿದೆ. ಪಂಪಾನದಿ ಸಮೀಪ ಇ ಟಿಕೆಟ್‌ ಕೌಂಟರ್‌ ಮಂಟಪ ಸಂಪೂರ್ಣ ಕುಸಿದು, ಕುರುಹೂ
ಇಲ್ಲದಂತಾಗಿದೆ. ಖಾಸಗಿ ವಾಹನಗಳ ನಿಲುಗಡೆಗೆ ಸಂಪೂರ್ಣ ನಿಷೇಧಿಸಲಾಗಿದ್ದು ನೀಲಕ್ಕಲ್‌ ಬೇಸ್‌ ಕ್ಯಾಂಪ್‌ನಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. 
 

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next