Advertisement
ಗೋಡೆಯನ್ನೇ ಅದೆಷ್ಟು ಹೊತ್ತಿನಿಂದ ದಿಟ್ಟಿಸುತ್ತಿದ್ದಳ್ಳೋ. ಅವಳು ಸೊನ್ನೆಯೊಳಗೆ ಹೋಗಿ ಸೊನ್ನೆಯಾಗಿ ಅವಿತಿದ್ದಳು. ಬೆಳಗೆದ್ದರೆ ಬಾಕ್ಸ್‌ನಲ್ಲಿ ಒಂದಷ್ಟು ಊಟ ತುರುಕಿಕೊಂಡು ಹೊರಬಿದ್ದರೆ ಮನೆ ಅಂತ ಕಾಣುವುದೇ ನಿದ್ದೆ ಸಮಯಕ್ಕೆ ಸ್ವಲ್ಪ ಮುಂಚೆ ಸಿಗುವ ಒಂದು ತಾಸಿನಲ್ಲಿ. ಇಲ್ಲಿ ಯಾರ ಗೋಳನ್ನೂ ಯಾರೂ ಕೇಳುವುದಿಲ್ಲವೆಂಬ ಅಳಲು. ಕೇಳಿಸುವುದು ಧಾವಂತದ ಹೆಜ್ಜೆಯ ಸಪ್ಪಳವಷ್ಟೇ; ಕಾಣುವುದು ಆತುರದ ಓಟಗಳು ಮಾತ್ರವೇ. ಬಿಡುವು ಮಾಡಿಕೊಂಡು ಇವಳನ್ನೇ ನೋಡಲೆಂದು ಟ್ರಾಫಿಕ್ ಮಹಾಸಾಗರವನ್ನು ಈಜಿ ಬಂದಿದ್ದೆ. ಇವಳ್ಳೋ ಗೋಡೆಗೆ ಕಣ್ಣು ಹಚ್ಚಿ ಕೂತಿದ್ದಾ ಳೆ.
Related Articles
Advertisement
ನಾನು ಅದರಲ್ಲಿ ಬರೆದದ್ದು ಇಷ್ಟಿತ್ತು…ದೇವರು ಮನುಷ್ಯನನ್ನು ಸೃಷ್ಟಿಸಿದ ಹೊಸತರಲ್ಲಿ ಮನುಷ್ಯನಿಗೂ ದೇವರಷ್ಟೇ ಶಕ್ತಿಯಿತ್ತು. ಎಷ್ಟಾದರೂ ಮನುಷ್ಯ ನೋಡಿ… ತನ್ನ ಶಕ್ತಿಯನ್ನು ದುರುಪಯೋಗ ಮಾಡಲು ಆರಂಭಿಸಿದ. ಯೋಚಿಸಿದ ದೇವರು ಸ್ವಲ್ಪ ಶಕ್ತಿ ಹಿಂಪಡೆದು ಅಡಗಿಸಿಡಲು ನಿರ್ಧರಿಸಿದ. ಪರ್ವತದ ಒಡಲು, ಭೂಗರ್ಭ, ಸಾಗರದ ಒಡಲಾಳ… ಹೀಗೆ ಅದರಲ್ಲಿ ಅಡಗಿಸಿದರೂ ಮನುಷ್ಯ ಅದನ್ನು ತಲುಪಿಯೇ ತೀರುತ್ತಾನೆ. ಹಾಗಾಗಿ, ಆ ಶಕ್ತಿಯನ್ನು ಮನುಷ್ಯನ ಮನಸಿನಲ್ಲಿ ಅಡಗಿಸಿದ. ಈ ಶಕ್ತಿಯ ಹರಿವಿಗೆ ಎರಡೇ ರಹದಾರಿಗಳು. ಒಂದು ಒಬ್ಬರಿಗಾಗಿ ಅಥವಾ ಯಾವುದೊ ಒಂದು ಗಹನವಾದ ಉದ್ದೇಶಕ್ಕಾಗಿ ಆಳವಾಗಿ ಮಿಡಿಯುವ ಮನಸ್ಸು ಮತ್ತು ಇನ್ನೊಂದು ಒಡೆದ ಮನಸ್ಸು. ಯಾವುದೋ ಒಂದು ಗಹನವಾದ ಉದ್ದೇಶಕ್ಕಾಗಿ ಅಥವಾ ಒಬ್ಬರಿಗಾಗಿ ಸಂಪೂರ್ಣವಾಗಿ ಅರ್ಪಿತವಾದಾಗ ನಮ್ಮೊಳಗೆ ಅಪಾರ ಶಕ್ತಿ ಬಿಡುಗಡೆಯಾಗುತ್ತದೆ. ಅವರಿಗಾಗಿ ಅಥವಾ ಆ ಉದ್ದೇಶಕ್ಕಾಗಿ ಚಂದ್ರನನ್ನು ಭೂಮಿಗಿಳಿಸುವ ಪ್ರಯಾಸವೂ, ಅಸಾಧ್ಯಗಳೂ ಸುಲಭಸಾಧ್ಯವೆನಿಸುವುದು… ಇದು ಶಕ್ತಿಯ ಬಿಡುಗಡೆಯ ಸ್ವರೂಪ. ಸಂಬಂಧದಲ್ಲಿರುವವರಿಗೆ ಮಾತ್ರ ಸೀಮಿತವಾಗದೆ, ಇತರರಿಗೂ ಹರಡುವುದು ಇನ್ನೂ ಅದ್ಭುತ… ಇದು ಸಾಧ್ಯವಾ ಎಂದು ಶಂಕಿಸುವವರಿಗೆ ಸಂಶೋಧನೆಗಳು ಶಕ್ತಿಯ ಪ್ರಸಾರವನ್ನು ಸಾಬೀತುಪಡಿಸಿವೆ ಎಂದು ಹೇಳಬಹುದು. ಎರಡನೆಯದು ಒಡೆದ ಮನಸ್ಸು. ಮುರಿದ ಪ್ರೇಮದಿಂದಲೇ ಮನಸ್ಸು ಛಿದ್ರವಾಗಬೇಕಂದೇನೂ ಇಲ್ಲ. ಆಳವಾದ ಸ್ನೇಹ, ನಂಬಿಕೆಯೇ ಜೀವಾಳವಾದ ಬಂಧಗಳು ಮುರಿದಾಗ ಮನಸ್ಸು ಛಿದ್ರವಾಗುತ್ತವೆ. ನಂಬಿದವರ ಮೇಲೆ ಗೌರವ ಕಳೆದುಹೋಗುತ್ತದೆ. ಆ ಹೊತ್ತಿನಲ್ಲಿ ಮನಸ್ಸು, ಕಡಿದಾದ ತುತ್ತ ತುದಿಯಲ್ಲಿ ನಿಂತಿರುತ್ತದೆ. ಅಲ್ಲಿಂದ ಬೀಳಲೂಬಹುದು; ಹಾರಲೂಬಹುದು! ಏಕೆಂದರೆ, ಕಳೆದುಕೊಳ್ಳಲು ಇನ್ನೇನೂ ಉಳಿದಿರುವುದಿಲ್ಲ. ನಮ್ಮ ಮುಂದೆ ಏನೂ ಉಳಿದಿರುವುದಿಲ್ಲ, ಸಂಪೂರ್ಣ ಖಾಲಿ. ಹುಟ್ಟಿದಾಗಿನಿಂದ ಲೋಕರೂಢಿಗಳಲ್ಲಿ ಹೂತುಹೋದ ಆತ್ಮವನ್ನು ಕಂಡುಕೊಳ್ಳುವ ಮತ್ತು ತೊಳೆದು ಹೊಳೆಸಬಹುದಾದ ಪ್ರಯತ್ನಗಳು ಸಾಗುತ್ತಿರಬೇಕಷ್ಟೇ. ಏಕೆ ಹೀಗಾಯಿತು? ನಿಜವಾಗಿ ನನಗೇನು ಬೇಕು? ಎಂದು ಆತ್ಮಾವಲೋಕನ ಮಾಡಿಕೊಳ್ಳುವ, ಅಪರಿಮಿತ ಭಾವನಾತ್ಮಕ ಶಕ್ತಿಯೊಂದು ಬೇಕು. ವಿಶ್ವಾದ್ಯಂತ ಕಲಾವಿದರೆಲ್ಲರೂ ಆ್ಯಮಿ ವೈನ್ ಹೌಸ್, ಅಲೆಕ್ಸಾಂಡರ್, ಷೇಕ್ಸ್‌ಪಿಯರ್, ಅಡೀಲ್ ಮುಂತಾದವರು ತಮ್ಮ ನೋವಿನ ಕಲೆಗಳನ್ನು ತೋರಿಸಿದ್ದಾರೆ. ನೋವನ್ನು ಅಪ್ಪಿಕೊಂಡು, ಆ ಭಾವನಾತ್ಮಕ ಶಕ್ತಿಯಿಂದಾಗಿಯೇ ತಮ್ಮ ಕಲೆ ಅರಳಿರುವ ಬಗ್ಗೆ ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಜಗತ್ತಿಗೆ ಹೇಳಿದ್ದಾರೆ. ಅಷ್ಟೇ ಏಕೆ, ದ.ರಾ. ಬೇಂದ್ರೆ, ಕೆಎಸ್‌ನ ಅವರಂಥ ನಮ್ಮ ನೆಲದ ಕವಿಗಳೂ ಅಂಥ ನೋವನ್ನು ನುಂಗಿಕೊಂಡೇ, ಕಾವ್ಯದ ಬೆಳಕನ್ನು ನಾಡಿಗೆ ಕೊಟ್ಟವರು. ಸೂರ್ಯ ಪುನಃ ಮೂಡುತ್ತಾನೆ, ಸಂಜೆ ಮುಳುಗುತ್ತಾನೆ. ಜಗತ್ತೇನೋ ಹಾಗೆಯೇ ಇದೆ. ಬದಲಾಗಿರುವುದು ನಿನ್ನ ಜಗ ಮಾತ್ರವೇ. ಹೌದು, ಮುಂದೆ ನಿನ್ನ ಬದುಕು ಏನಾಗಬಹುದು ಹೇಳು? ಮುಂದಿರುವುದು, ಎರಡೇ ಆಯ್ಕೆಗಳು ಮಾತ್ರವೇ: ಹೀಗೆ ನೋವಿನಲ್ಲೇ ಬದುಕು ಸವೆಸುವುದು, ಎರಡನೆಯದು ನೋವನ್ನು ಅಪ್ಪಿಕೊಂಡು ಕಣ್ಮುಂದೆ ಛಿದ್ರಗೊಂಡು ಬಿದ್ದಿರುವ ಬದುಕನ್ನು ಮತ್ತೆ ಕಟ್ಟಿ ಮುನ್ನಡೆಯುವುದು. ನೀನು ಇಚ್ಛಿಸಿದ ಫ್ಯಾಷನ್ ಡಿಸೈನಿಂಗ್ ನಿನಗಾಗಿ ಕಣ್ತೆರೆದು ಕಾದಿದೆ. ಮಡುಗಟ್ಟಿರುವ ಭಾವನಾತ್ಮಕ ಶಕ್ತಿಯ ಹರಿವಿಗೆ ಅವಕಾಶ, ಅರ್ಥ ಕಲ್ಪಿಸುವ ಸದಾವಕಾಶ ನಿನ್ನ ಮುಂದಿದೆ. ಅದೊಂದು ಕಡಿಮೆ, ನಿನ್ನನ್ನು ಪದೇಪದೆ ಏಳಿಸುತ್ತಲೇ ಇರಲಿ ಬಿಡು… ನಿನ್ನೊಂದಿಗೆ ಟೀ ಕುಡಿದು ಹೊರಡಲು ಹಾಲಿನಲ್ಲಿ ಕಾಯುತ್ತಿರುತ್ತೇನೆ… ಎರಡು ತಾಸಾಯಿತು…
ರೂಮಿನ ಬಾಗಿಲು ತೆರೆದ ಸಪ್ಪಳವಾಯಿತು. ಇಬ್ಬರೂ ಆ ಕಡೆ ದಿಟ್ಟಿಸಿದೆವು. ನನ್ನ ನಿರೀಕ್ಷೆಯಂತೆ ಆಕೆ ಒಟ್ಟಿಗೆ ಟೀ ಕುಡಿಯಲು ಬಂದಿದ್ದಳು. ಚಿಕ್ಕಮ್ಮ ಟೀ ತರಲು ಅಡುಗೆ ಕೋಣೆಗೆ ಓಡಿದಳು. ಸೆರಗು ಕಣ್ಣಿಗೆ ಒತ್ತಿದ್ದು ಮಾತ್ರ ಸ್ಪಷ್ಟವಾಗಿತ್ತು. – ಮಂಜುಳಾ ಡಿ.