ಕಲಬುರಗಿ: ನಗರದ ಜೇವರ್ಗಿ ರಸ್ತೆಯ ರೈಲ್ವೆ ಮೇಲ್ಸೆತುವೆ ಕೆಳಗಿನ ಅಂದರೆ ಪಿಡಬ್ಲ್ಯುಡಿ ಕ್ವಾರ್ಟ್‌ಸ್ ದಿಂದ ಹಳೇ ಜೇವರ್ಗಿ ರಸ್ತೆಯ ಜೀವನ ಪ್ರಕಾಶ ಶಾಲೆ ಎದುರಿನ ರಸ್ತೆಯಿಂದ ಬಿದ್ದಾಪುರಕ್ಕೆ ಹೋಗುವ ರೈಲ್ವೆ ಕೆಳಸೇತುವೆ ರಸ್ತೆಯ ಫುಟ್‌ಪಾತ್ ಕಾಮಗಾರಿಯನ್ನು ಟೆಂಡರ್ ಇಲ್ಲದೇ ಮಾಡಲಾಗಿದೆ.
ಮೊದಲ ಹಂತದಲ್ಲಿ ಪಿಡಬ್ಲ್ಯುಡಿ ಕ್ವಾರ್ಟ್‌ಸ್ ಬಡಾವಣೆ ರಸ್ತೆಯಿಂದ ಸಂಸದ ಡಾ|ಉಮೇಶ ಜಾಧವ ಮನೆವರೆಗೂ ಒಂದು ಕೋಟಿ ರೂ. ಮೊತ್ತದ ಫುಟಪಾತ್‌ನ್ನು ಸುಂದರವಾಗಿ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಇನ್ನೂವರೆಗೂ ಟೆಂಡರ್ ಆಗಿಲ್ಲ. ಕೆಲಸ ಆಗಿ ಆರೇಳು ತಿಂಗಳು ಕಳೆದಿದೆ. ಬಿದ್ದಾಪುರ ಕಾಲೋನಿಯಿಂದ ಪಿಡಬ್ಲ್ಯುಡಿ ಕ್ವಾರ್ಟ್‌ಸ್ ವರೆಗೆ 2.10 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣವಾಗಿದೆ.
ಈ ರಸ್ತೆ ಎರಡೂ ಮಗ್ಗಲು ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಈ ಕಾಮಗಾರಿ ಟೆಂಡರ್ ಆಗದೇ ನಡೆದಿದ್ದು, ನಿಯಮ ಉಲ್ಲಂಘನೆಯಾಗಿದೆ. ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ಎಸ್‌ಡಿಪಿ (ವಿಶೇಷ ಅಭಿವೃದ್ಧಿ ಕಾರ್ಯಕ್ರಮ)ದಡಿ 2.10 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸ ಲಾಗಿದೆ. ಈ ಕಾಮಗಾರಿ ಟೆಂಡರ್ ಆಗದೇ ಆರಂಭವಾಗಿತ್ತಾದರೂ ನಂತರ ಟೆಂಡರ್ ಆದ ಮೇಲೆಯೇ ಪೂರ್ಣಗೊಳಿಸಿದ್ದು ವಿಶೇಷ. ಈ ರಸ್ತೆಯ ಎರಡೂ ಕಡೆ ಫುಟ್‌ಪಾತನ್ನು ಟೆಂಡರ್ ಇಲ್ಲದೇ ಪೂರ್ಣಗೊಳಿಸಿರುವುದು ಆರೋಪಕ್ಕೆ ಕನ್ನಡಿ ಹಿಡಿ ದಂತಾಗಿದೆ.
ಇನ್ನೊಂದೆಡೆ ಪಾಲಿಕೆ ಸದಸ್ಯರೊಬ್ಬರು ಫುಟ್‌ಪಾತ್ ಕಾಮಗಾರಿ ಸರಿಯಾಗಿ ನಡೆದಿಲ್ಲ. ರಸ್ತೆ ಯನ್ನೂ ಇಕ್ಕಟ್ಟಾಗುವಂತೆ ನಿರ್ಮಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಕ್ರಿಯಾಯೋಜನೆಗೆ ಪ್ರಸ್ತಾವನೆ: ಇನ್ನು ನಿರ್ಮಾಣ ವಾಗಿರುವ ಫುಟ್‌ಪಾತ್ ಕಾಮಗಾರಿಗೆ ಲೋಕೋಪ ಯೋಗಿ ಇಲಾಖೆ ಕಾಮಗಾರಿಯ ಕ್ರಿಯಾಯೋಜನೆ ರೂಪಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಕೆಕೆಆರ್ ಡಿಸಿಗೆ ಪ್ರಸ್ತಾವನೆ ಸಲ್ಲಿಸಿದೆ. ಆಡಳಿತಾತ್ಮಕ ಅನು ಮೋದನೆ ದೊರೆತ ನಂತರ ಕಾಮಗಾರಿಗೆ ಟೆಂಡರ್ ಆಗಲಿದೆ. ಆದರೆ ಸಿಸಿ ರಸ್ತೆ ನಿರ್ಮಿಸಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ.
ಫುಟ್‌ಪಾತ್ ನಿರ್ಮಾಣ ಕಾಮಗಾರಿ ಕುರಿತು ತಮಗೇನೂ ಗೊತ್ತಿಲ್ಲ ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೆಕೆಆರ್‌ಡಿಬಿ ಹಲವು ಕಾಮಗಾರಿಗಳಿಗೆ ಟೆಂಡರ್ ಆಗಿ ಆರೇಳು ತಿಂಗಳಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಟೆಂಡರ್ ಓಪನ್ ಮಾಡುತ್ತಿಲ್ಲ. ರಾಜಕೀಯ ಒತ್ತಡದಿಂದ ದಿನ ದೂಡಲಾಗುತ್ತಿದೆ ಎಂಬುದು ಗೊತ್ತಾಗಿದೆ. ಒಂದೆಡೆ ಟೆಂಡರ್ ಆದ ಕಾಮ ಗಾರಿಗಳು ಶುರುವಾಗದೇ ಇರುವಾಗ, ಮತ್ತೂಂದೆಡೆ ಟೆಂಡರ್ ಆಗದೇ ಕಾಮಗಾರಿ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.