ಹಟ್ಟಿ ಚಿನ್ನದ ಗಣಿ: ವಂದಲಿ ಹೊಸೂರು ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಲಾಗಿದ್ದು, ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ವಂದಲಿ ಹೊಸೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮ ವಿಕಾಸ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು. ರಸ್ತೆ, ಚರಂಡಿ, ರಂಗಮಂದಿರ, ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿ ಕಾಮಗಾರಿಗಳಿಗಾಗಿ
ಈ ಯೋಜನೆಯಲ್ಲಿ 1 ಕೋಟಿ ರೂ. ಅನುದಾನ ಲಭ್ಯವಿದೆ ಎಂದರು. ಇಷ್ಟೊಂದು ಮೊತ್ತದ ಅನುದಾನ ಈ ಗ್ರಾಮಕ್ಕೆ ಮೊದಲ ಸಲ ಬಂದಿದೆ.
ಈ ಹಿಂದೆ ಅನೇಕರು ಶಾಸಕರಾದವರು ಗ್ರಾಮದ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಬಳಿ ಹೇಳಿದ್ದಾರೆ. ಕಳೆದ ಬಾರಿ ಗ್ರಾಮದ ಜನತೆ ಅಭಿವೃದ್ಧಿ ವಿಷಯಗಳನ್ನು ಬಿಟ್ಟು ಹನುಮಾನ ದೇವಸ್ಥಾನ ಅಭಿವೃದ್ಧಿಗೆ ಕೋರಿದ್ದರು. ಹನುಮಾನ ದೇವಸ್ಥಾನದ ಜತೆಗೆ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿಗಳ ನಿರ್ಮಾಣಕ್ಕಾಗಿ ಅನುದಾನ ತರಲಾಗಿದೆ. ಇದಕ್ಕೂ ಮೊದಲು ಗ್ರಾಮಕ್ಕೆ 50 ಲಕ್ಷ ರೂ. ಅನುದಾನ ಒದಗಿಸಿದ್ದೇನೆ. ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟನ ಆರಂಭಗೊಳ್ಳಲಿದೆ ಎಂದ ಅವರು, ಗ್ರಾಮ ವಿಕಾಸ ಯೋಜನೆಯಡಿ ತಿಪ್ಪೆಗುಂಡೆಗಳನ್ನು ಊರ ಹೊರಗೆ ಸಾಗಿಸಲು ಅವಕಾಶವಿದೆ. ಅದನ್ನು ಬಳಸಿಕೊಳ್ಳಿ. ಜತೆಗೆ ಸಾಮೂಹಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶವಿದೆ ಎಂದರು.
ತಾಪಂ ಇಒ ಪುಷ್ಪಾ ಕಮ್ಮಾರ ಮಾತನಾಡಿ, ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಗೊಂಡ ವಂದಲಿ ಹೊಸೂರು ಗ್ರಾಮಕ್ಕೆ 1 ಕೋಟಿ ರೂ. ಅನುದಾನ ಬಂದಿದೆ. ಇದರಲ್ಲಿ ಶೇ.50 ರಷ್ಟು ಮೊತ್ತವನ್ನು ರಸ್ತೆ, ಚರಂಡಿಗಳಿಗಾಗಿ ಬಳಸಿಕೊಳ್ಳಬಹುದಾಗಿದೆ.
ಉಳಿದ ಶೇ. 50ರಷ್ಟು ಅನುದಾನದಲ್ಲಿ ರಂಗ ಮಂದಿರ, ಸಮುದಾಯ ಭವನ, ಸೌರದೀಪ ಅಳವಡಿಕೆ, ತ್ಯಾಜ್ಯ ವಿಲೇವಾರಿ, ದೇವಾಲಯ, ಮಸೀದಿಗಳಿಗಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಗೌಡನಬಾವಿಯ ನಾಗಪ್ಪ ತಾತಾ, ತಾಪಂ ಮಾಜಿ ಸದಸ್ಯೆ ಶಿವಶರಣಪ್ಪಗೌಡ ಆನ್ವರಿ, ಆನ್ವರಿ
ಗ್ರಾಪಂ ಉಪಾಧ್ಯಕ್ಷ ವೀರನಗೌಡ ಆನ್ವರಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪಿಡಿಒ ಗೀತಾ
ಮಾತನಾಡಿದರು.
ಮಾಳಿಂಗರಾಯ ತಾತಾ, ಆನ್ವರಿ ಗ್ರಾಪಂ ಅಧ್ಯಕ್ಷೆ ಅಗ್ನೇಶಿಯಮ್ಮ, ತಾಪಂ ಸದಸ್ಯೆ ತಿಮ್ಮನಗೌಡ ಚುಕ್ಕನಟ್ಟಿ,
ಜಿಪಂ ಉಪ ವಿಭಾಗದ ಎಇಇ ಅಭಿದಲಿ, ಮಲ್ಲಯ್ಯ ತಾತಾ, ಜೆಡಿಎಸ್ ಮುಖಂಡರಾದ ಗಿರಿಮಲ್ಲನಗೌಡ, ಅಮರೇಶ ಚಿಕ್ಕಹೆಸರೂರು, ಗುಂಡಪ್ಪಗೌಡ ಕಾಚಾಪುರ, ವೆಂಕನಗೌಡ ಐದನಾಳ, ಪರಮೇಶ ಯಾದವ, ಮುದುಕಪ್ಪ ನಾಯಕ,
ನಿಂಗಣ್ಣ ದೇವಿಕೇರಿ ಸೇರಿದಂತೆ ಗ್ರಾಮಸ್ಥರು ಇದ್ದರು.