ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಆರು ಕಡೆಗಳಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನಲ್‌ಗಳಿಂದ ವಿವಿಗೆ ವಾರ್ಷಿಕ 1 ಕೋಟಿ ರೂ. ಉಳಿತಾಯವಾಗುವ ಜತೆಗೆ ಹೆಚ್ಚುವರಿ ವಿದ್ಯುತ್ ವೆಚ್ಚವೂ ಕಡಿಮೆಯಾಗಲಿದೆ.
ಜ್ಞಾನಭಾರತಿ ಆವರಣದ ಗ್ರಂಥಾಲಯ ಸಮೀಪ, ನಿರ್ವಹಣಾಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನಲ್ ತಲಾ 118.4 ಕೆಡಬ್ಲೂಪಿ ಸಾಮರ್ಥ್ಯ ಹೊಂದಿವೆ. ಭೂ ವಿಜ್ಞಾನ ವಿಭಾಗದಲ್ಲಿ 49.92, ಆಡಳಿತ ಕಟ್ಟಡ ಸಮೀಪ 47.36, ಸ್ನೇಹಭವನ ಸಮೀಪ 121.6 ಹಾಗೂ ಆರ್ಕಿಟೆಕ್ ಕಟ್ಟಡ ಸಮೀಪ 47.6 ಕೆಡಬ್ಲೂಪಿ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಆರು ಕಡೆಗಳಿಂದ ಒಟ್ಟಾರೆಯಾಗಿ 499 ಕೆಡಬ್ಲೂéಪಿ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗಲಿದೆ.
ರಾಜ್ಯದ ಯಾವುದೇ ವಿಶ್ವವಿದ್ಯಾಲಯವೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಂಡಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ವಿದ್ಯುತ್ ಉಳಿತಾಯ ಹಾಗೂ ಹಸಿರು ಇಂಧನ ಸದ್ಭಳಕೆಯ ಉದ್ದೇಶದಿಂದ ಸೋಲಾರ್ ಪ್ಯಾನಲ್‌ಗಳನ್ನು ಅಳಡಿಸಿದೆ.
ಬೆಂವಿವಿಗೆ ಬಳಕೆಯಾಗಿ ಉಳಿದ ಸೋಲಾರ್ ವಿದ್ಯುಶ್ಚಕ್ತಿಯನ್ನು ಸೋಲಾರ ಪ್ಯಾನಲ್ ಅನುಷ್ಠಾನ ಮಾಡಿ ಸಂಸ್ಥೆಗೆ ಒಂದು ಯೂನಿಟ್‌ಗೆ 3.89 ರೂ.ಗಳಂತೆ ನೀಡಲಾಗುತ್ತದೆ. ಹಾಗೆಯೇ ವಿಶ್ವವಿದ್ಯಾಲಯ ತಾನು ಉತ್ಪಾದಿಸಿ ಸೋಲಾರ್ ವಿದ್ಯುತ್ ಬಳಕೆ ಮಾಡಿ ಉಳಿದ ವಿದ್ಯುತ್ ಅನ್ನು ಗ್ರೀಡ್ ಮೂಲಕ ಬೆಸ್ಕಾಂಗೆ ನೀಡಲಿದೆ. ಇದಕ್ಕೆ ಪ್ರತಿಯಾಗಿ ಬೆಸ್ಕಾಂ ಪ್ರತಿ ಯೂನಿಟ್‌ಗೆ 2.67ರೂ.ಗಳನ್ನು ಪಾತಿಸಲಿದೆ.
ಸೋಲಾರ್ ಪ್ಯಾನಲ್ ಅಳವಡಿಸಿರುವ ಸಂಸ್ಥೆಯೇ ಮುಂದಿನ 25 ವರ್ಷದವರೆಗೂ ನಿರ್ವಹಣೆ ಮಾಡಲಿದೆ. ಬೆಂವಿವಿಗೆ ಬೇಕಾದಷ್ಟು ವಿದ್ಯುತ್ ಉಪಯೋಗದ ನಂತರ ಉಳಿದ ವಿದ್ಯುತ್ ಗ್ರೀಡ್ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಬೇಕಾದ ಒಪ್ಪಂದವನ್ನು ಬೆಂವಿವಿ ಈಗಾಗಲೇ ಮಾಡಿಕೊಂಡಿದೆ.
ಹಸಿರು ಪರಿಸರ ಕಾಪಾಡಿಕೊಂಡು, ವಿದ್ಯುತ್ ಅಪವ್ಯಯ ತಪ್ಪಿಸುವ ಉದ್ದೇಶದಿಂದ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿದ್ದೇವೆ. ಇದರಿಂದ ಬೆಂವಿವಿಗೆ ಪ್ರತಿ ವರ್ಷ 1 ಕೋಟಿ ರೂ. ಉಳಿತಾಯವಾಗಲಿದೆ. ಮಾತ್ರವಲ್ಲದೇ ವಿದ್ಯುತ್ ಮಾರಾಟದಿಂದಲೂ ಹೆಚ್ಚುವರಿ ಹಣ ಬರಲಿದೆ. ಈ ಹಣವನ್ನು ಬೆಂವಿವಿ ಅಭಿವೃದ್ಧಿ ಕಾರ್ಯಕ್ಕೆ ಉಪಯೋಗಿಸುವ ಬಗ್ಗೆಯೂ ಚರ್ಚಿಸುತ್ತಿದ್ದೇವೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ