Advertisement

ಸಮರ್ಥ ಭಾರತದಿಂದ ಕೋಟಿ ಗಿಡ ನೆಡುವ ಅಭಿಯಾನ

12:27 PM Jun 02, 2017 | |

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಸಮರ್ಥ ಭಾರತ ಸಂಸ್ಥೆಯು ಜೂ. 5ರಿಂದ ಆಗಸ್ಟ್‌ 15ರವರೆಗೆ ರಾಜ್ಯಾದ್ಯಂತ ಒಂದು ಕೋಟಿ ಗಿಡ ನೆಡುವ ಅಭಿಯಾನ ಹಮ್ಮಿಕೊಂಡಿದೆ.

Advertisement

ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸೇವಾ ವಿಭಾಗದ ಪ್ರಮುಖ್‌ ಗಣಪತಿ ಹೆಗಡೆ, ಅಭಿಯಾನಕ್ಕೆ ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆ, ಹಾಲು ಉತ್ಪಾದಕರ ಸಂಘ, ಮೈಸೂರಿನ ಅಪ್ನಾದೇಶ್‌, ತುಮಕೂರಿನ ಸ್ನೇಹವಾಹಿನಿ, ಧಾರವಾಡದ ತಪೋವನ,

-ರಾಯಚೂರಿನ ಹಸಿರು ರಾಯಚೂರು, ಬೀದರ್‌, ಗುಲ್ಬರ್ಗ, ಬಿಜಾಪುರದಲ್ಲಿ ಯಶೋಮಾರ್ಗ ಸಂಸ್ಥೆ, ವಿವಿಧ ವಿದ್ಯಾ ಸಂಸ್ಥೆಗಳು, ಕಾರ್ಪೊರೇಟ್‌ ಸಂಸ್ಥೆಗಳು ಸೇರಿದಂತೆ 400ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಕೈಜೋಡಿಸಲಿವೆ. ಅರಣ್ಯ ಇಲಾಖೆ ಗಿಡಗಳನ್ನು ಒದಗಿಸುವ ಮೂಲಕ ಸಹಕಾರ ನೀಡಲಿದೆ. ಅಭಿಯಾನ ಯಶಸ್ವಿಗೊಳಿಸಲು ಪ್ರತಿ ತಾಲೂಕಿನಲ್ಲಿ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಅಭಿಯಾನದಲ್ಲಿ ಮೂರು ರೀತಿಯಲ್ಲಿ ಗಿಡ ಬೆಳೆಸಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಅರಣ್ಯ ಇಲಾಖೆ, ಖಾಸಗಿ ನರ್ಸರಿಯಿಂದ ಗಿಡ ಪಡೆದು ಅಥವಾ ತಾವೇ ಬೆಳೆಸಿದ ಗಿಡಗಳನ್ನು ನೆಡಬಹುದು. ಇಲ್ಲವೇ ಬೀಜವನ್ನೇ ಬಿತ್ತ ಮಾಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ವಿವರಿಸಿದರು.

ಆರ್‌ವಿ ಕಾಲೇಜಿನಲ್ಲಿ ಚಾಲನೆ: ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌, ಸಮರ್ಥ ಭಾರತದ ವತಿಯಿಂದ ಜೂ.5ರಂದು ಜಯನಗರದ ಆರ್‌ವಿ ಟೀಚರ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಇದೇ ವೇಳೆ ಜೈವಿಕ ವೈವಿಧ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ತಜ್ಞ ಡಾ.ಶಿವಕುಮಾರ್‌. ಆರ್‌.ವಿ. ಸಮೂಹ ಸಂಸ್ಥೆಗಳ ಟ್ರಸ್ಟಿ ಎಸ್‌.ಎಂ. ಬಾಲಕೃಷ್ಣ ಭಾಗವಹಿಸಲಿದ್ದಾರೆ. ಅಭಿಯಾನಕ್ಕಾಗಿ ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ಪ್ರದೇಶ ಗುರುತಿಸಿದ್ದು, ಗಿಡ ನೆಡುವ ಜತೆಗೆ ಅವುಗಳನ್ನು ಉಳಿಸಿ, ಬೆಳೆಸುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದರು. 

Advertisement

ನವೋದಯ ಶಾಲೆಗಳ ಸಹಯೋಗ: ಉತ್ತಿಷ್ಠ ಭಾರತ ಕಾರ್ಯಕರ್ತ ಕಾರ್ತಿಕ್‌ ಮಾತನಾಡಿ, ಅಭಿಯಾನದ ಅಂಗವಾಗಿ ರಾಜ್ಯದ ವಿವಿಧೆಡೆ ಸೀಡ್‌ಬಾಲ್‌ (ಬೀಜದುಂಡೆ)ಗಳನ್ನು ತಯಾರಿಸಲಾಗುತ್ತಿದೆ. ಜೂ.25ರಿಂದ 28ರವರೆಗೆ 28 ಜಿಲ್ಲೆಗಳ 28 ನವೋದಯ ಶಾಲೆಗಳು 28 ಲಕ್ಷ ಸೀಡ್‌ಬಾಲ್‌ಗ‌ಳನ್ನು ತಯಾರಿಸಲಿವೆ. 12 ಸಾವಿರ ವಿದ್ಯಾರ್ಥಿಗಳು, 1,500 ಹಳೆ ವಿದ್ಯಾರ್ಥಿಗಳು, 30 ಸಾವಿರ ಪ್ರಾಂಶುಪಾಲರು, ಪೋಷಕರು ಕೈಜೋಡಿಸಲಿದ್ದಾರೆ. ಶಿಡ್ಲಘಟ್ಟದ ನವೋದಯ ಶಾಲೆಯಲ್ಲಿ ಇತ್ತೀಚೆಗೆ 2.15 ಬೀಜದುಂಡೆ ತಯಾರಿಸಲಾಗಿದೆ. ಬೆಂಗಳೂರಿನಲ್ಲಿಯೇ ಈಗಾಗಲೇ 100ಕ್ಕೂ ಹೆಚ್ಚು ಕಾರ್ಯಾಗಾರ ಹಮ್ಮಿಕೊಂಡು 40 ಲಕ್ಷದಷ್ಟು ಬೀಜದುಂಡೆ ತಯಾರಿಸಲಾಗಿದೆ ಎಂದರು.

ಡಾ. ಸುಂದರ್‌ ರಾಜನ್‌ ರಚಿತ ಪವಿತ್ರ ಗಿಡ ಮರಗಳು ಪುಸ್ತಕ ಮತ್ತು ಟೀಶರ್ಟ್‌ಅನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು. ಸಮರ್ಥ ಭಾರತದ ಕಾರ್ಯಕರ್ತ ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.

ಗಿಡ ನೆಡುವ ಅಭಿಯಾನಕ್ಕೆ ಸಾಮಾಜಿಕ ಜಾಲ ತಾಣವನ್ನು ಪರಿಣಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಗಿಡಗಳನ್ನು ಬೆಳೆಸುವ ಸ್ವಯಂಸೇವಕರು ಅವುಗಳ ಜತೆ ಸೆಲ್ಫಿ ತೆಗೆದು ಸಮರ್ಥಭಾರತ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ಟಿಟರ್‌ ಅಥವಾ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬಹುದು. ಪರಿಸರ ಸಂರಕ್ಷಣೆ ಕುರಿತ ವಿಚಾರಗಳು, ವಿಡಿಯೋ ಹಾಗೂ ಇನ್ಫೋಗ್ರಾಫಿಕ್‌ಗಳನ್ನು ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು.
-ಗಣಪತಿ ಹೆಗಡೆ, ಆರ್‌ಎಸ್‌ಎಸ್‌ ಸೇವಾ ವಿಭಾಗದ ಪ್ರಮುಖ್‌

Advertisement

Udayavani is now on Telegram. Click here to join our channel and stay updated with the latest news.

Next