ಬೆಂಗಳೂರು: ಸದಸ್ಯತ್ವ ಅಭಿಯಾನವನ್ನು ಅ.15ರ ಬದಲಾಗಿ 31ರ ವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ರಾಜ್ಯಾಧ್ಯಕ್ಷರು ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಬಿಜೆಪಿಯು ಸದಸ್ಯತ್ವ ಅಭಿಯಾನದಡಿ 50 ಲಕ್ಷ ಸದಸ್ಯತ್ವ ನೋಂದಣಿಯನ್ನು ಪೂರ್ಣಗೊಳಿಸಿದ್ದು ಈ ಪ್ರಯತ್ನಕ್ಕೆ ವರಿಷ್ಠರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹಿಂದೆ ಸದಸ್ಯತ್ವ ಮಾಡಿದಾಗ ಕೇವಲ ಮಿಸ್ಡ್ ಕಾಲ್ ಕೊಡುವ ಪದ್ಧತಿ ಇತ್ತು. ಈ ಬಾರಿ ಮಿಸ್ಡ್ ಕಾಲ್ ಬಳಿಕ ಲಭಿಸುವ ಲಿಂಕ್ ಮೂಲಕ ಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ವಿಳಾಸ, ಕುಟುಂಬದ ಮಾಹಿತಿ, ವಿಧಾನಸಭಾ ಕ್ಷೇತ್ರ, ಬೂತ್ ವಿವರ, ಇಮೇಲ್ ಐ.ಡಿ.ಯನ್ನೂ ಪಡೆಯಲಾಗಿದೆ ಎಂದು ತಿಳಿಸಿದರು.
ಸಿಎಂ ವಿಕೆಟ್ ಪತನ ಖಚಿತ
ಮೈಸೂರು ಚಲೋ ಪಾದಯಾತ್ರೆ ಜಿಲ್ಲೆಗಳಲ್ಲಿ ಮನೆಮಾತಾಗಿದೆ. ಅದು ಅತ್ಯಂತ ಯಶಸ್ವಿಯಾಗಿದೆ. ಮುಖ್ಯಮಂತ್ರಿಯವರ ಕುಟುಂಬದ ಮೇಲಿನ ಆರೋಪವನ್ನು ಸುಳ್ಳು ಎಂದಿದ್ದರು. ಬಳಿಕ ನಿವೇಶನಗಳನ್ನು ವಾಪಸ್ ಕೊಡುವುದಾಗಿ ತಿಳಿಸಿದರು.
ಈಗ ಮುಡಾ ಅಧ್ಯಕ್ಷರು ರಾಜೀನಾಮೆ ಕೊಡುತ್ತಿರುವುದು- ಒಂದಾದ ಮೇಲೆ ಒಂದರಂತೆ ನಡೆದಿದೆ. ಮುಖ್ಯಮಂತ್ರಿಯವರ ಫೈನಲ್ ವಿಕೆಟ್ ಪತನದ ವಿಶ್ವಾಸ ಇದೆ ಎಂದರು.