Advertisement

ಶೂನ್ಯ ಕೃಷಿಯಲ್ಲಿ ಫ‌ಸಲು ಕೊಯ್ಯೋದೊಂದೇ ಕೆಲಸ

06:00 AM Nov 26, 2018 | |

ಭೂಮಿಗೆ ಪದೇ ಪದೆ ಗೊಬ್ಬರ ದೂಡುವುದಿಲ್ಲ. ತಿಂಗಳಿಗೆ ಹತ್ತು ಬಾರಿ ನೀರು ಹಾಯಿಸುವುದಿಲ್ಲ. ರಾಸಾಯನಿಕ ಗೊಬ್ಬರದ ಮಾತು ದೂರವೇ ಉಳಿಯಿತು. ಒಂದೇ ಮಾತಲ್ಲಿ ಹೇಳುವುದಾದರೆ, ತೋಟವನ್ನು ಅದರ ಪಾಡಿಗೆ ಬಿಟ್ಟು ಬಿಟ್ಟಿದ್ದೇವೆ. ಅಲ್ಲಿರುವ ಗಿಡಮರಗಳು ಏನನ್ನು ಕೊಡುತ್ತವೆಯೋ, ಅದನ್ನಷ್ಟೆ ಸ್ವೀಕರಿಸುತ್ತೇವೆ ಅನ್ನುತ್ತಾರೆ ರಾಘವ್‌

Advertisement

ಆವತ್ತು ನಮ್ಮನ್ನು ಎದುರುಗೊಂಡ ರಾಘವ ಅವರಿಗೆ, ನಿಮ್ಮ ತೋಟ ನೋಡಲು ಬಂದಿದ್ದೀವೆ ಎನ್ನುತ್ತಿದ್ದಂತೆ, ಅವರ ತಕ್ಷಣದ ಪ್ರತಿಕ್ರಿಯೆ ಈಗಲೂ ಚೆನ್ನಾಗಿ ನೆನಪಿದೆ: ನಮ್‌ ತೋಟದಲ್ಲಿ ನಾವೇನೂ ಮಾಡೋದಿಲ್ಲ. ಗಿಡಗಳು ಏನ್‌ ಕೊಡ್ತವೆ, ಅದನ್ನ ಕೊಯೊಳ್ಳೋದಷ್ಟೇ ನಮ್‌ ಕೆಲಸ’ ಅಂದರು. 

ಅನಂತರ, ಅವರ ಜೊತೆ ದಾವಣಗೆರೆ ಜಿಲ್ಲೆಯ ಮಲ್ಲನಾಯಕನ ಹಳ್ಳಿಯ ಅವರ ತೋಟಕ್ಕೊಂದು ಸುತ್ತು ಹಾಕಿದಾಗ ಆ ಮಾತನ್ನು ನಂಬಬೇಕಾಯಿತು. ಅದು ಹತ್ತು ಎಕರೆಯ ತೆಂಗಿನ ತೋಟ. (ಅವರ ಕೃಷಿ ಜಮೀನು ಒಟ್ಟು 20 ಎಕರೆ.) ಅಲ್ಲಿ ಎತ್ತರಕ್ಕೆ ಬೆಳೆದು ನಿಂತ ತೆಂಗಿನ ಮರಗಳ ನಡುವೆ ಎತ್ತಕಂಡರತ್ತ ಹಸಿರು ಗಿಡಮರಗಳು. ಮಳೆಮರಗಳು, ಪಪ್ಪಾಯಿ, ಬಾಳೆ, ಮಾವು, ಹಲಸು, ಪೇರಲೆ, ಕಿತ್ತಳೆ, ಸೀತಾಫ‌ಲ, ಚಿಕ್ಕು, ಸ್ಟಾರ್‌ ಆಪಲ್‌ ಇತ್ಯಾದಿ ಹಣ್ಣಿನ ಮರಗಳು. ಒಂದಿಂಚೂ ನೆಲ ಕಾಣದಂತೆ ಹಬ್ಬಿರುವ ಬಳ್ಳಿಗಳು.

ಅಲ್ಲಿ ಎಲ್ಲ ಗಿಡಮರಬಳ್ಳಿಗಳು ತಮ್ಮೊಳಗೆ ಹೊಂದಾಣಿಕೆ ಮಾಡಿಕೊಂಡು ಬೆಳೆಯುತ್ತಿವೆ. ಸಮೃದ್ಧ ಫ‌ಸಲು ನೀಡುತ್ತಿವೆ. ಕಿತ್ತಳೆ ಮರವೊಂದಕ್ಕೆ ಕಂಬದ ಆಧಾರ ನೀಡಿದ್ದನ್ನು ತೋರಿಸುತ್ತಾ ರಾಘವ ಹೇಳಿದರು; ಈ ವರ್ಷ ಈ ಮರದಲ್ಲಿ ಎಷ್ಟು ಹಣ್ಣು ಅಂತೀರಾ! ಆ ಹಣ್ಣುಗಳ ಭಾರಕ್ಕೆ ಮರವೇ ವಾಲಿತು. ಮರ ಬಿದ್ದು ಹೋಗಬಾರದೂಂತ ಮರಕ್ಕೆ ಆಧಾರ ಕೊಡಬೇಕಾಯ್ತು ನೋಡ್ರೀ.

ರಾಘವ ಈ ತೋಟದಲ್ಲಿ ಶೂನ್ಯ ಕೆಲಸದ ಕೃಷಿ ಶುರು ಮಾಡಿದ್ದು 1996ರಲ್ಲಿ  ಅವರ ಅಜ್ಜ ತೀರಿಕೊಂಡ ನಂತರ. ಆಗ ಅವರು ಪದವಿ ಶಿಕ್ಷಣದ ವಿದ್ಯಾರ್ಥಿ. ಈ ತೋಟದಿಂದ ಆಗ ಸಿಗ್ತಾ ಇದ್ದದ್ದು ವರ್ಷಕ್ಕೆ 30,000ದಿಂದ 40,000 ತೆಂಗಿನ ಕಾಯಿಗಳು ಎಂದು ನೆನಪು ಮಾಡಿಕೊಂಡರು. ಹೆಚ್ಚುವರಿ ಆದಾಯಕ್ಕಾಗಿ, ತೆಂಗಿನ ಮರಗಳ ನಡುವಣ ಜಾಗವನ್ನು ಅವರ ಕುಟುಂಬದವರು ಇತರ ರೈತರಿಗೆ ಲೀಸ್‌ಗೆ ಕೊಡುತ್ತಿದ್ದರು. ಲೀಸಿಗೆ ಪಡೆದವರು ಅಲ್ಲಿ ಜೋಳ ಮತ್ತು ಅರಿಶಿನ ಬೆಳೆಯಲಿಕ್ಕಾಗಿ ಜಮೀನನ್ನು ಉಳುಮೆ ಮಾಡುತ್ತಿದ್ದರು ಮತ್ತು ಭಾರೀ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿದ್ದರು. ಅದಾಗಲೇ ಶೂನ್ಯ ಕೆಲಸದ ಕೃಷಿ ಬಗ್ಗೆ ಕೇಳಿ ತಿಳಿದಿದ್ದ ರಾಘವ, ತನ್ನ ತೆಂಗಿನ ತೋಟದಲ್ಲಿ ಅಂತರ ಬೆಳೆ ಬೆಳೆಯೋದನ್ನು ನಿಲ್ಲಿಸಿದರು.

Advertisement

ಆದರೆ, ಸಮಸ್ಯೆಗಳು ಶುರುವಾದವು. ಅವರ ತೋಟದಲ್ಲೆಲ್ಲ ಕಳೆಗಿಡಗಳು ತುಂಬಿಕೊಂಡವು. ಸುತ್ತಮುತ್ತಲಿನ ಭತ್ತದ ಗದ್ದೆಗಳಿಂದ ನುಸುಳಿ ಬರುವ ನೀರಿನಿಂದಾಗಿ ತೋಟದ ಬಹಳಷ್ಟು ಜಾಗದಲ್ಲಿ ನೀರು ನಿಲ್ಲತೊಡಗಿತು. ಬಹುಪಾಲು ತೆಂಗಿನ ಮರಗಳು ಫ‌ಸಲು ನೀಡಲಿಲ್ಲ. ಎರಡನೇ ವರುಷ ತೆಂಗಿನ ಫ‌ಸಲು ಸಿಗಲೇ ಇಲ್ಲ!

ಅದಾಗಿ ಎರಡು ವರ್ಷ ರಾಘವ ಎಂ.ಬಿ.ಎ. ಕಲಿಯಲಿಕ್ಕಾಗಿ ಹೋಗಿದ್ದರು. ಅವರು ಅತ್ತ ಹೋದಾಗ, ಕುಟುಂಬದವರು ಆ ತೋಟವನ್ನು ಪುನಃ ಹಳೆಯ ಪದ್ಧತಿಯಂತೆ ಲೀಸಿಗೆ ಕೊಟ್ಟರು.

ಸ್ನಾತಕೋತ್ತರ ಶಿಕ್ಷಣ ಪೂರೈಸಿ ಹಳ್ಳಿಗೆ ಹಿಂತಿರುಗಿದ ರಾಘವ ಶೂನ್ಯ ಕೆಲಸದ ಕೃಷಿಯನ್ನು ಮತ್ತೆ ಕೈಗೆತ್ತಿಕೊಂಡರು. ಮೊದಲಾಗಿ, ಹೆಚ್ಚುವರಿ ನೀರು ತೋಟದಿಂದ ಬಸಿದು ಹೋಗಲಿಕ್ಕಾಗಿ ಬಸಿಗಾಲುವೆಗಳನ್ನು ನಿರ್ಮಿಸಿದರು. ಕಳೆಗಳು ಪುನಃ ಹಬ್ಬದಂತೆ ತಡೆಯಲಿಕ್ಕಾಗಿ ವೆಲ್ವೆಟ್‌ ಬೀನ್ಸ್‌ ಮತ್ತು ಪ್ಯುರೇರಿಯಾ ದ್ವಿದಳಧಾನ್ಯದ ಬಳ್ಳಿಗಳನ್ನು ತೆಂಗಿನ ಗಿಡಗಳ ನಡುವೆ ಬೆಳೆಸಿದರು. ಅದಾದ ನಂತರ, ಎಲ್ಲ ಕೆಲಸಗಾರರನ್ನೂ ಮನೆಗೆ ಕಳಿಸಿದರು. ತಮ್ಮ ತೆಂಗಿನ ತೋಟವನ್ನು ಅದರ ಪಾಡಿಗೆ ಬಿಟ್ಟರು.  2000ರ ದಿಂದೀಚೆಗ ಅವರು ಆ ತೋಟದಲ್ಲಿ ಯಾವುದೇ ಕೃಷಿ ಕೆಲಸ ಮಾಡಿಲ್ಲ!

ರಾಘವರ ಈ ಪ್ರಯೋಗಗಳಿಗೆ ಅವರ ಜಮೀನು ಸ್ಪಂದಿಸಿತು. ಒಂದೇ ವರ್ಷದಲ್ಲಿ ವೆಲ್ವೆಟ್‌ ಬೀನ್ಸ್‌, ಪ್ಯುರೇರಿಯಾ ಇತ್ಯಾದಿ ಚೆನ್ನಾಗಿ ಬೆಳೆದು, ಕಳೆಗಿಡಗಳ ಉಸಿರು ಕಟ್ಟಿಸಿದವು. ಸೊರಗಿದ್ದ ತೆಂಗಿನ ಮರಗಳು ಚೇತರಿಸಿಕೊಂಡವು. ಕಳೆಗಳ ದಟ್ಟಣೆ ಕಡಿಮೆಯಾಗುತ್ತಿದ್ದಂತೆ, ಮಳೆಮರ, ಪೇರಲೆ, ಮಾವು, ಸೀತಾಫ‌ಲ, ಪಪ್ಪಾಯಿ ಮತ್ತು ಹಲವು ಔಷಧೀಯ ಸಸ್ಯಗಳು  ಇವುಗಳ ಸಸಿಗಳು ಅಲ್ಲಿ ತಾವಾಗಿಯೇ ಹುಟ್ಟಿ ಬೆಳೆದವು.

ಎಂಟು ವರುಷಗಳಿದೀಚೆಗೆ ನನ್ನ ತೋಟದ ನೀರಾವರಿಗಾಗಿ ನೀರಿನ ಬಳಕೆ ಬಹಳ ಕಡಿಮೆಯಾಗಿದೆ ಎನ್ನುತ್ತಾರೆ ರಾಘವ. ಇದು ದೊಡ್ಡ ಸಾಧನೆ. ಏಕೆಂದರೆ, ದಾವಣಗೆರೆಯಂಥ ಒಣಜಿಲ್ಲೆಯಲಿ ಇತರ ರೈತರು ತಮ್ಮ ತೆಂಗಿನ ಮರಗಳಿಗೆ ಹತ್ತು ದಿನಕ್ಕೊಮ್ಮೆ ನೀರೆರೆಯುತ್ತಾರೆ. ಭತ್ತದ ಹೊಲಗಳಿಗೆ ಇತರ ರೈತರು ಹಾಯಿಸುವ ನೀರು ಜಾಸ್ತಿಯಾದ ಕಾರಣ, ಮಣ್ಣು ಗಡುಸಾಗಿದ್ದು, ಆ ಪ್ರದೇಶದಲ್ಲಿ ನೆಲದಾಳಕ್ಕೆ ನೀರು ತಲುಪುವುದೇ ಕಡಿಮೆಯಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ರಾಘವ ವಿವರಿಸಿದರು.

ಕಳೆದ ಎಂಟು ವರ್ಷಗಳಲ್ಲಿ ಅವರು ಪಡೆಯುತ್ತಿರುವ ಇಳುವರಿ ವರುಷಕ್ಕೆ 70,000ದಿಂದ 80,000 ತೆಂಗಿನಕಾಯಿಗಳು. ಅಂದರೆ, ಅವರ ತೋಟದ ಇಳುವರಿ ಇಮ್ಮಡಿಯಾಗಿದೆ (ಯಾವುದೇ ರಾಸಾಯನಿಕ ಗೊಬ್ಬರ ಹಾಕದಿದ್ದರೂ). ತೆಂಗಿನ ಮರಗಳ ರಾಷ್ಟ್ರೀಯ ಸರಾಸರಿ ಇಳುವರಿ 50 ತೆಂಗಿನಕಾಯಿಗಳಾಗಿದ್ದರೆ, ನನ್ನ ತೋಟದಲ್ಲಿ ಸರಾಸರಿ ಇಳುವರಿ 70 -75 ತೆಂಗಿನಕಾಯಿಗಳು ಎನ್ನುತ್ತಾರೆ ರಾಘವ. ಇದಲ್ಲದೆ ಮಳೆಮರದ ಸೌದೆ ಹಾಗೂ ಹಣ್ಣುಹಂಪಲುಗಳ ಮಾರಾಟದಿಂದ ಅವರು ಗಳಿಸುವ ಹೆಚ್ಚುವರಿ ಆದಾಯ ವರುಷಕ್ಕೆ ಕನಿಷ್ಠ ರೂ.50,000.

ಶೂನ್ಯ ಕೆಲಸದ ಕೃಷಿ ಶುರು ಮಾಡಿದ ಕೆಲವೇ ವರ್ಷಗಳಲ್ಲಿ ನಾನು ಮನೆ ಕಟ್ಟಿದೆ, ಓಡಾಟಕ್ಕಾಗಿ ಕಾರು ಖರೀದಿಸಿದೆ. ನನ್ನ ಇಳುವರಿ ಎಷ್ಟೆಂದು ಯಾರು ಬೇಕಾದರೂ ಬಂದು ಕಣ್ಣಾರೆ ಕಾಣಬಹುದು ಎಂಬುದು ರಾಘವರ ಆತ್ಮವಿಶ್ವಾಸದ ಮಾತು.

ವರ್ಷವಿಡೀ ರಾಘವರ ತೋಟ ನೋಡಲು ಆಸಕ್ತರು ಎಲ್ಲೆಲ್ಲಿಂದಲೋ ಬರುತ್ತಾರೆ. ಹಾಗಂತ, ಅವರ ತೋಟ ನೋಡಲು ಯಾರಿಗೂ ಗೂಗಲ್‌ ನಕ್ಷೆ ಕಳಿಸಿಕೊಡಲು ರಾಘವರು ತಯಾರಿಲ್ಲ. ಏಕೆಂದರೆ, ಆಸಕ್ತಿಯಿದ್ದವರು ಇಲ್ಲಿಗೆ ಹುಡುಕಿಕೊಂಡು ಬರುತ್ತಾರೆ ಎಂದರು ರಾಘವ. ಇತ್ತೀಚೆಗೆ ನಾವು ಅವರನ್ನು ಭೇಟಿಯಾಗಲು ಹೊರಟು, ದಾವಣಗೆರೆ  ಮಲೆಬೆನ್ನೂರು ರಸ್ತೆಯಲ್ಲಿ ಶ್ಯಾಮನೂರಿನಲ್ಲಿ ಎಡಕ್ಕೆ ತಿರುಗಿ, 10 ಕಿ.ಮೀ ಕ್ರಮಿಸಿದಾಗ ದೇವರ ಬೆಳಕೆರೆಯ ದೊಡ್ಡ ಜಲಾಶಯ ಕಂಡಿತು. ಅಲ್ಲಿಂದ ಐದು ಕಿ.ಮೀ ಮುಂದಕ್ಕೆ ಸಾಗಿ ಮಲ್ಲನಾಯಕನ ಹಳ್ಳಿಯ ಅವರ ತೋಟ ತಲುಪಿದ್ದೆವು. ಹಾಗೇ ಹುಡುಕಿಕೊಂಡು ಹೋದಾಗಲೇ ರಾಘವರ ಮಾತಿನ ಧ್ವನಿ ಅರ್ಥವಾದದ್ದು. 

– ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next