ಚನ್ನಗಿರಿ: ರಾಜ್ಯ ಸರ್ಕಾರ ರೈತರ ಬೆನ್ನೆಲುಬಾಗಿ ನಿಂತಿದ್ದು, ಯಾವೊಬ್ಬ ರೈತರೂ ಭಯಪಡುವ ಅವಶ್ಯಕತೆ ಇಲ್ಲ. ಬೆಳೆ ಸಮೀಕ್ಷೆ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ ನೀಡಿದರು.
ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಮಂಗಳವಾರ ಬೆಳೆ ಸಮೀಕ್ಷೆಗೆ ಚಾಲನೆ ನೀಡಿ, ಆ್ಯಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಜ್ಯದಲ್ಲಿಯೇ ನಮ್ಮ ಸರ್ಕಾರದ ಆಡಳಿತದಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಯೋಜನೆಗಳನ್ನು ನೀಡುವ ಮೂಲಕ ರೈತರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಸಮೃದ್ಧ ಮಳೆ ಆಗುತ್ತಿರುವುದು ಸಂತಸದ ವಿಷಯ. ಅದರೆ ಕೆಲ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಜಲಾವೃತವಾಗಿವೆ. ಅಂತಹ ಸ್ಥಳಗಳನ್ನು ಗುರುತಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ರೈತರು ಯಾವುದೇ ಸಂದರ್ಭದಲ್ಲೂ ಭಯಭೀತರಾಗದೆ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಆತ್ಮಸ್ಥೈರ್ಯ ಮೂಡಿಸಿದರು.
ಕೃಷಿಗೆ ಸಂಬಂಧಿಸಿದ ಯೋಜನೆಗಳು ದುರ್ಬಳಕೆಯಾಗದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಬೆಳೆ ಸಮೀಕ್ಷೆ ವರದಿಯನ್ನು ರೈತರೇ ತಮ್ಮ ಜಮೀನಿನಲ್ಲಿಮಾಡಿಕೊಳ್ಳುವ ಮೂಲಕ ಆಧುನಿಕ ಕೃಷಿ ಪದ್ಧತಿಗೆ ಮುನ್ನುಡಿ ಬರೆಯಲಾಗಿದೆ. ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಿ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ ರಸಗೊಬ್ಬರಕ್ಕೆ ಬೇಡಿಕೆಯಿದ್ದು ಸದ್ಯ ರೈತರಿಗೆ ತೊಂದರೆ ಆಗದಂತೆ ಗೊಬ್ಬರವನ್ನು ಪೂರೈಸಲಾಗಿದೆ ಎಂದರು.
ಸಮಾಜದ್ರೋಹಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳನ್ನು ನಿಷೇಧಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳದಂತಹ ಪರಿಸ್ಥಿತಿ ಇದ್ದು, ಇನ್ನು ಜನರ ರಕ್ಷಣೆ ಮಾಡಲು ಸಾಧ್ಯವೇ ಎಂದು ಲೇವಡಿ ಮಾಡಿದರು. ಸಮಾಜವನ್ನು ಒಡೆಯಲು ದುಷ್ಟಶಕ್ತಿಗಳು ತಾಂಡವವಾಡುತ್ತಿವೆ. ಯಾವುದೇ ಕಾರಣಕ್ಕೆ ಅಂತಹ ಪ್ರಯತ್ನ ಫಲಪ್ರದವಾಗದು ಎಂದು ತಿಳಿಸಿದರು.
ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಸಾಕಮ್ಮ, ತೇಜಸ್ವಿ ಪಟೇಲ್ ಮತ್ತಿತರರು ಇದ್ದರು.