Advertisement

ಬೆಳೆ ಸಮೀಕ್ಷೆ ಯೋಜನೆಗೆ ಅನ್ನದಾತರ ಜೈ

04:52 PM Aug 30, 2020 | Suhan S |

ದಾವಣಗೆರೆ: ಮೊಬೈಲ್‌ ಮೂಲಕ ರೈತರೇ ತಮ್ಮ ಹೊಲದಲ್ಲಿ ನಿಂತು ಬೆಳೆ ಸಮೀಕ್ಷೆಯ ಮಾಹಿತಿ ನಮೂದಿಸುವ ಸರಕಾರದ ಮಹತ್ವಾಕಾಂಕ್ಷಿ ವಿನೂತನ ಬೆಳೆ ಸಮೀಕ್ಷೆ ಯೋಜನೆಗೆ ಜಿಲ್ಲೆಯ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಕೇವಲ 15ದಿನಗಳಲ್ಲಿ ಶೇ. 33ರಷ್ಟು ರೈತರು ತಮ್ಮ ಬೆಳೆ ಮಾಹಿತಿ ನಮೂದಿಸಿ, “ನನ್ನ ಬೆಳೆ ನನ್ನ ಹಕ್ಕು’ ಪ್ರದರ್ಶಿಸಿದ್ದಾರೆ. ಆಂಡ್ರಾಯ್ಡ ಮೊಬೈಲ್‌ ಬಳಸುತ್ತಿರುವ ರೈತರು ಸುಲಭವಾಗಿ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ತಮ್ಮ ಬೆಳೆ ಮಾಹಿತಿ ನಮೂದಿಸಿದ್ದಾರೆ. ಇನ್ನು ಹಲವು ರೈತರು ತಮ್ಮ ಮನೆಯಲ್ಲಿರುವ ಇಲ್ಲವೇ ತಮ್ಮ ಹಳ್ಳಿಯಲ್ಲಿರುವ ಯುವಕರ ಸಹಾಯದಿಂದ ಮೊಬೈಲ್‌ ಮೂಲಕ ಬೆಳೆ ಸಮೀಕ್ಷೆಯ ಮಾಹಿತಿ ನಮೂದಿಸಿದ್ದಾರೆ. ಪ್ರಥಮವಾಗಿ ಜಾರಿಗೆ ತಂದ ಹಾಗೂ ಪ್ರಾಯೋಗಿಕ ಹಂತದಲ್ಲಿರುವ ಈ ಯೋಜನೆಗೆ ರೈತರಿಂದ ಇಷ್ಟೊಂದು ಸ್ಪಂದನೆ ದೊರಕಿರುವುದು ತಂತ್ರಜ್ಞಾನ ಬಳಕೆಯಲ್ಲಿಯೂ ರೈತರು ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ.

ಜಿಲ್ಲೆಯಲ್ಲಿ ಒಟ್ಟು 4,78,208 ಕೃಷಿ ಭೂಮಿ (ಸರ್ವೆ ಕ್ರಮಾಂಕ) ಇದ್ದು ಈವರೆಗೆ 1,58,607ಕೃಷಿ ಭೂಮಿಯ ಬೆಳೆ ಮಾಹಿತಿ ಅಂದರೆ ಶೇ. 33.17ರಷ್ಟು ಬೆಳೆ ಸಮೀಕ್ಷೆ ಮಾಹಿತಿ ನಮೂದಾಗಿದೆ. ಬೆಳೆ ಸಮೀಕ್ಷೆಆ್ಯಪ್‌ ಬಳಸಿ ಮಾಹಿತಿ ನಮೂದಿಸುವಲ್ಲಿ ಜಿಲ್ಲೆಯಲ್ಲಿ  ದಾವಣಗೆರೆ ತಾಲೂಕಿನ ರೈತರು ಮುಂದಿದ್ದು ಶೇ. 43ರಷ್ಟು ಬೆಳೆ ಸಮೀಕ್ಷೆ ಮಾಹಿತಿ ಅಪ್‌ಲೋಡ್‌ ಆಗಿದೆ. ಇನ್ನುಳಿದಂತೆ ಹೊನ್ನಾಳಿ ತಾಲೂಕಿನಲ್ಲಿ ಶೇ. 27.38, ಚನ್ನಗಿರಿ ತಾಲೂಕಿನಲ್ಲಿ ಶೇ. 33.78, ನ್ಯಾಮತಿ ತಾಲೂಕಿನಲ್ಲಿ ಶೇ. 28.77, ಜಗಳೂರು ತಾಲೂಕಿನಲ್ಲಿ 31.54, ಹರಿಹರ ತಾಲೂಕಿನಲ್ಲಿ ಶೇ. 23.42ರಷ್ಟು ಕೃಷಿ ಪ್ರದೇಶದ ಬೆಳೆ ಸಮೀಕ್ಷೆ ಮಾಹಿತಿಯನ್ನು ರೈತರು ಆನ್‌ಲೈನ್‌ನಲ್ಲಿ ತುಂಬಿದ್ದಾರೆ.

1.58 ಲಕ್ಷ ಮಾಹಿತಿ ನಮೂದು: ದಾವಣಗೆರೆ ತಾಲೂಕಿನ 1,17,240 ಕೃಷಿಭೂಮಿಯಲ್ಲಿ 50701 ಕೃಷಿಭೂಮಿಯ ಬೆಳೆ ಸಮೀಕ್ಷೆ ಮಾಹಿತಿ ನಮೂದಾಗಿದೆ. ಅದರಂತೆ ಹೊನ್ನಾಳಿ ತಾಲೂಕಿನ 59259 ಕೃಷಿ ಭೂಮಿಯಲ್ಲಿ 16227, ಚನ್ನಗಿರಿ ತಾಲೂಕಿನ 1,25,544 ಕೃಷಿ ಭೂಮಿಯಲ್ಲಿ 42410, ನ್ಯಾಮತಿ ತಾಲೂಕಿನ 41737 ಕೃಷಿ ಭೂಮಿಯಲ್ಲಿ 12008, ಜಗಳೂರು ತಾಲೂಕಿನ 71126 ಕೃಷಿ ಭೂಮಿಯಲ್ಲಿ 22436, ಹರಿಹರ ತಾಲೂಕಿನ 63302 ಕೃಷಿ ಭೂಮಿಯಲ್ಲಿ 14825 ಕೃಷಿ ಪ್ರದೇಶದ ಬೆಳೆ ಸಮೀಕ್ಷೆ ಮಾಹಿತಿಯನ್ನು ರೈತರು ಮೊಬೈಲ್‌ ಮೂಲಕ ತಾವೇ ಆಪ್‌ಲೋಡ್‌ ಮಾಡಿದ್ದಾರೆ. ಸಿಗ್ನಲ್‌ ಸಿಗದೆ ಇರುವ ಪ್ರಕರಣಗಳು ಜಿಲ್ಲೆಯಲ್ಲಿ ಅತಿ ವಿರಳವಾಗಿವೆ. ಜತೆಗೆ ಕಾರಣಾಂತರಗಳಿಂದ ಮೊಬೈಲ್‌ ಮೂಲಕ ಬೆಳೆ ಮಾಹಿತಿ ತುಂಬದೇ ಇರುವ ರೈತರ ಪ್ರದೇಶಗಳಿಗೆ ನಿರುದ್ಯೋಗಿ ಯುವಕರನ್ನು ಕಳುಹಿಸಿ ಬೆಳೆ ಮಾಹಿತಿ ನಮೂದಿಸುವ ಯೋಜನೆಯನ್ನೂ ಕೃಷಿ ಇಲಾಖೆ ಹಾಕಿಕೊಂಡಿದೆ. ತನ್ಮೂಲಕ ಬೆಳೆ ಸಮೀಕ್ಷೆಯಿಂದ ಜಿಲ್ಲೆಯ ಯಾವ ರೈತರೂ ಬಿಟ್ಟು ಹೋಗದಂತೆ ಕೃಷಿ ಇಲಾಖೆ ನಿಗಾ ವಹಿಸಿದೆ.

ಮಾಹಿತಿ ಪರಿಶೀಲನೆ: ರೈತರು ಆ್ಯಪ್‌ ಮೂಲಕ ನಮೂದಿಸಿದ ಬೆಳೆ ಸಮೀಕ್ಷೆ ಮಾಹಿತಿಯೇ ಅಂತಿಮವಲ್ಲ. ರೈತರು ಸಲ್ಲಿಸಿದ ಎಲ್ಲ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಮಾಹಿತಿ ತಪ್ಪಾಗಿದ್ದರೆ, ಅಪೂರ್ಣವಾಗಿದ್ದರೆ, ಸಂಶಯಗಳಿದ್ದರೆ ರೈತರನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳುತ್ತಾರೆ. ತಿದ್ದುಪಡಿಗೂ ಅವಕಾಶ ಇರುತ್ತದೆ. ಜತೆಗೆ ನಮೂದಿಸಿರುವ ಮಾಹಿತಿ ಎಲ್ಲವೂ ಸರಿಯಾಗಿರುವ ಬಗ್ಗೆ ರೈತರಿಂದ ಇನ್ನೊಮ್ಮೆ ಖಚಿತ ಪಡಿಸಿಕೊಂಡೇ ಅದನ್ನು ಅಂತಿಮ ಅಂಕಿ-ಅಂಶಗಳ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ. ಆದ್ದರಿಂದ ರೈತರು ಮಾಹಿತಿ ತಪ್ಪಾಗಿ ಹೋದರೆ ತೊಂದರೆಯಾದೀತೆ ಎಂಬ ಆತಂಕ ಬೇಡ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ಒಟ್ಟಾರೆ ಮೊಬೈಲ್‌ ಮೂಲಕ ರೈತರು ತಮ್ಮ ಬೆಳೆಯನ್ನು ತಾವೇ ನಮೂದಿಸುವ ನೂತನ ಬೆಳೆ ಹಕ್ಕು ಚಲಾಯಿಸುವಲ್ಲಿ ಉತ್ಸಾಹ ತೋರುತ್ತಿದ್ದಾರೆ. ಇನ್ನಷ್ಟು ರೈತರಿಗೆ ಪ್ರೇರಣೆಯಾಗಿದೆ.

Advertisement

ರಾಜ್ಯಕ್ಕೆ ಐದನೇ ಸ್ಥಾನ : ರೈತರೇ ಮೊಬೈಲ್‌ ಮೂಲಕ ತಮ್ಮ ಬೆಳೆ ಮಾಹಿತಿ ನಮೂದಿಸುವ ಸರಕಾರದ ನೂತನ ಬೆಳೆ ಸಮೀಕ್ಷೆ ಯೋಜನೆಗೆ ಜಿಲ್ಲೆಯ ರೈತರಿಂದ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ದೊರಕಿದೆ. ಕೇವಲ 15ದಿನಗಳಲ್ಲಿ ಶೇ. 33ರಷ್ಟು ಪ್ರದೇಶದ ಬೆಳೆ ಸಮೀಕ್ಷೆ ಮಾಹಿತಿಯನ್ನು ರೈತರು ಆಪ್‌ಲೋಡ್‌ ಮಾಡಿದ್ದಾರೆ. ಬೆಳೆ ಸಮೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಐದನೇ ಸ್ಥಾನದಲ್ಲಿದೆ. ಮಾಹಿತಿ ನಮೂದಿಸಲು ಸೆ. 23ವರೆಗೂ ಅವಧಿ ವಿಸ್ತರಿಸಲಾಗಿದೆ. ರೈತರು ನಮೂದಿಸಿದ ಮಾಹಿತಿ ಪರಿಶೀಲಿಸಿ ಇನ್ನೊಮ್ಮೆ ಖಚಿತ ಪಡಿಸಿಕೊಂಡ ಬಳಿಕವೇ ಅದನ್ನು ಅಂತಿಮ ದಾಖಲೆಯಾಗಿ ಪರಿಗಣಿಸುವುದರಿಂದ ರೈತರು ಯಾವುದೇ ಆತಂಕವಿಲ್ಲದೇ ಮಾಹಿತಿ ಆಪ್‌ಲೋಡ್‌ ಮಾಡಬಹುದಾಗಿದೆ. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ತಿಳಿಸಿದ್ದಾರೆ.

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next