Advertisement
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಎನಿಸಿದ ದ್ರಾಕ್ಷಿ, ಲಿಂಬೆಬೆಳೆಗಳು ರೋಗಬಾಧೆ, ಹಾನಿಗೆ ಸಿಲುಕಿವೆ. ಪರಿಣಾಮ ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರದ ಕಡೆ ನೆರವಿಗೆ ಆಸೆಗಣ್ಣು ನೆಟ್ಟು ಕುಳಿತಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಎನಿಸಿದ ದ್ರಾಕ್ಷಿ, ಲಿಂಬೆ ಬೆಳೆಗಳಿಗೆ ರೋಗಬಾಧೆ ಆವರಿಸಿದ್ದು, ಇಳುವರಿ ಕುಸಿತ ಹಾಗೂ ಹಾನಿಗೆ ಸಿಲುಕಿವೆ. ರಾಜ್ಯದಲ್ಲಿ 31,600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಇದರಲ್ಲಿ ದ್ರಾಕ್ಷಿ ಬೆಳೆಯುವ ಅರ್ಧದಷ್ಟು ಪ್ರದೇಶ ವಿಜಯಪುರ ಜಿಲ್ಲೆಯಲ್ಲೇ ಇದೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್, ಬಾಗಲಕೋಟೆ ಜಿಲ್ಲೆಯಲ್ಲಿ 3,500 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 2700 ಹೆಕ್ಟೇರ್ ಮಾತ್ರವಲ್ಲದೇ ಕೊಪ್ಪಳ, ಗದಗ, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರೆಡೆಯೂ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.
Related Articles
Advertisement
ಲಾಕ್‌ಡೌನ್ ಸಂದರ್ಭದಲ್ಲಿ ಮಾರುಕಟ್ಟೆ ಕೊರತೆ, ಬೆಲೆ ಕುಸಿತದ ಕಾರಣ ಭವಿಷ್ಯದಲ್ಲಿ ಉತ್ತಮ ದರದ ನಿರೀಕ್ಷೆಯಿಂದಾಗಿ ರೈತರು ಈರುಳ್ಳಿ ದಾಸ್ತಾನು ಮಾಡಿದ್ದರು. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಉಗ್ರಾಣಗಳಲ್ಲಿ ದಾಸ್ತಾನು ಮಾಡಲಾಗಿದ್ದ ಬಹುತೇಕ ಈರುಳ್ಳಿ ಕೊಳಯುತ್ತಿದೆ. ಇದರಿಂದ ಗುಣಮಟ್ಟ ಕುಸಿತವಾಗಿ, ಮಾರುಕಟ್ಟೆಯಲ್ಲಿ ಸಾಗಾಣಿಕೆ ವೆಚ್ಚವೂ ಬಾರದ ದುಸ್ಥಿತಿ ಎದುರಾಗಿದ್ದು, ರೈತರಕಣ್ಣಲ್ಲಿ ನೀರು ತರಿಸಿರುವ ಈರುಳ್ಳಿ ತಿಪ್ಪೆಗೆ ಸೇರುವ ಸ್ಥಿತಿ ತಲುಪಿದೆ.
ಹೀಗೆ ಜಿಲ್ಲೆಯಲ್ಲಿ ಸುಮಾರು ಒಂದೂವರೆ ತಿಂಗಳಿಂದ ಕಾಡುತ್ತಿರುವ ಮೋಡ ಕವಿದ ಹಾಗೂ ತುಂತುರು ಮಳೆಯ ವಾತಾವರಣ ತೋಟಗಾರಿಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಸರ್ಕಾರ ತಕ್ಷಣ ನೆರವಿಗೆ ಬರುವಂತೆ ಆಗ್ರಹಿಸುತ್ತಿದ್ದರೂ ಸಮೀಕ್ಷೆ ಮಾಡಿ ಪರಿಹಾರ ನಿಡುವ ಭರವಸೆ ಹೊರತಾಗಿ ತಕ್ಷಣ ಸರ್ಕಾರ ತಮ್ಮ ನೆರವಿಗೆ ಬಂದಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ರಾಜ್ಯದಲ್ಲಿ ದ್ರಾಕ್ಷಿ ಬೆಳಗಾರ ಅದರಲ್ಲೂ ವಿಜಯಪುರ ಜಿಲ್ಲೆಯ ರೈತರು ಪ್ರಕೃತಿ ವಿಕೋಪದಿಂದ ಕಳೆದ ಒಂದು ದಶಕದಿಂದ ನಿರಂತರ ನಷ್ಟದಲ್ಲಿದ್ದು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾನೆ. ಕೂಡಲೇ ಇತರೆ ತೋಟಗಾರಿಕೆ ಬೆಳೆಗಳಿಗೆ ಇರುವಂತೆ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸರ್ಕಾರ ತಕ್ಷಣ ನಮ್ಮ ನೆರವಿಗೆ ಬರಬೇಕು. -ಅಭಯಕುಮಾರ ನಾಂದ್ರೇಕರ, ಅಧ್ಯಕ್ಷಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ
ಹವಾಮಾನ ವೈಪರಿತ್ಯದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ವಿವಿಧ ರೋಗ ಬಾಧಿತವಾಗಿವೆ. ದ್ರಾಕ್ಷಿ ಬೆಳೆ ಸಂಭವನೀಯ ಹಾನಿ ತಪ್ಪಿಸಲು ತೋಟಗಾರಿಕೆ ವಿವಿಯ ವಿಜ್ಞಾನಿಗಳನ್ನು ಕರೆಸಿ ಸ್ಥಾನಿಕ ಅಧ್ಯಯನ ಮಾಡಿಸಲಾಗಿದೆ. ಈ ವಾರಾಂತ್ಯದಲ್ಲಿ ವರದಿ ಬರುವ ನಿರೀಕ್ಷೆ ಇದ್ದು, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. -ಸಂತೋಷ ಇನಾಮದಾರ, ಉಪ ನಿರ್ದೇಶಕತೋಟಗಾರಿಕೆ ಇಲಾಖೆ, ವಿಜಯಪುರ
ಕೋಯ್ಲು ಮಾಡಿ ದಾಸ್ತಾನು ಮಾಡಿದ್ದ ಗುಣಮಟ್ಟದ ಈರುಳ್ಳಿ ಮಳೆಯಿಂದಾಗಿ ಕೊಳೆತು ಹಾನಿಗೀಡಾಗಿದೆ. ನನ್ನೊಬ್ಬನಿಗೆ ಸುಮಾರು 10-15 ಲಕ್ಷ ರೂ. ನಷ್ಟವಾಗಿದ್ದು, ಸರ್ಕಾರ ನಾನು ಸೇರಿದಂತೆ ಎಲ್ಲ ಈರುಳ್ಳಿ ಬೆಳೆಗಾರರಿಗೆ ಹಾನಿಗೆ ತಕ್ಕಂತೆ ತಕ್ಷಣ ಪರಿಹಾರ ನೀಡಬೇಕು. -ಭೀಮನಗೌಡ ಪಾಟೀಲ ಚಂದ್ರಶೇಖರ ನಾಟೀಕರ,ಕರಭಂಟನಾಳ ರೈತರು
-ಜಿ.ಎಸ್. ಕಮತರ