Advertisement
ಕೆಲ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ಗಳು ಉತ್ತರ ಕರ್ನಾಟಕದ ಸಾವಿರಾರು ರೈತರಿಗೆ ಬೆಳೆ ಸಾಲದ ಬಡ್ಡಿ ಪಾವತಿಸಿ ಸಾಲ ನವೀಕರಣಕ್ಕೆ ನೋಟಿಸ್ ನೀಡಿದ್ದು, ನೋಟಿಸ್ ನೀಡಿದ 90 ದಿನದೊಳಗೆ ಸಾಲದ ನವೀಕರಣ ಆಗದಿದ್ದರೆ ಬ್ಯಾಂಕ್ ಖಾತೆ ಲಾಕ್ ಮಾಡುವುದಾಗಿ ಎಚ್ಚರಿಸಿವೆ. ಕೆಲ ಬ್ಯಾಂಕ್‌ಗಳು ಬೆಳೆ ವಿಮೆ, ರೈತ ಸಮ್ಮಾನ್ ಹಣವನ್ನು ಸಹ ರೈತರಿಗೆ ನೀಡದೆ ಸತಾಯಿಸುತ್ತಿವೆ.
Related Articles
Advertisement
ರೈತರ ಅಳಲೇನು?: ಕೆಲ ಬ್ಯಾಂಕ್‌ಗಳು ಸರ್ಕಾರದ ಸಾಲ ಮನ್ನಾ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ಕನಿಷ್ಟ ಹಣ ಪಾವತಿಸಿದರೆ, ನಿಮ್ಮ ಸಾಲ ಚುಕ್ತಾ ಮಾಡುವುದಾಗಿ ರೈತರನ್ನು ನಂಬಿಸಿದ್ದು, ಇದನ್ನು ನಂಬಿದ ಕೆಲ ರೈತರು ಬ್ಯಾಂಕ್ ಹೇಳಿದಷ್ಟು ಹಣ ಪಾವತಿಸಿದ್ದಾರೆ. ಅದೇ ರೈತರ ಖಾತೆಗೆ ಬೆಳೆ ವಿಮೆ ಇನ್ನಿತರ ಹಣ ಜಮಾ ಆಗಿದೆ. ಹಣ ಕೇಳಲು ಹೋದ ರೈತರಿಗೆ ನಿಮ್ಮದು ಸಾಲದ ಹಣ ಬಾಕಿ ಇದ್ದು, ಅದನ್ನು ಜಮಾ ಮಾಡಿ ಕೊಂಡಿದ್ದಾಗಿ ಹೇಳಿದ್ದಾರೆ. ಬ್ಯಾಂಕ್‌ನವರೇ ಹೇಳಿದ ರೀತಿ ಹಣ ನೀಡಿ ಸಾಲ ಚುಕ್ತಾ ಮಾಡಿದ್ದರೂ, ಪರಿಹಾರ ಹಣ ನೀಡದೆ ಸಾಲದ ಖಾತೆಗೆ ಜಮಾ ಆಗಿದೆ ಎಂದಿದ್ದರು. ಕೊನೆಗೆ ಜಗಳ ಮಾಡಿ ಹಣ ಪಡೆದುಕೊಳ್ಳಬೇಕಾಯಿತು ಎಂಬುದು ರೈತರೊಬ್ಬರ ಅನಿಸಿಕೆ.
ಬೆಳೆ ವಿಮೆ, ರೈತ ಸಮ್ಮಾನ ಹಣ ಕೇಳಲು ಹೋದರೆ ಬ್ಯಾಂಕ್‌ಗಳವರು ರೈತರನ್ನು ಕಡೆಗಣಿಸುವುದಲ್ಲದೆ, ಕೀಳಾಗಿ ವರ್ತಿಸುತ್ತಾರೆ ಎಂಬುದು ಕೆಲ ರೈತರ ಆರೋಪ. ಬ್ಯಾಂಕ್‌ಗಳು ಬಡ್ಡಿ ಮನ್ನಾ ಮಾಡಿ ಒಂದಾವರ್ತಿ ಇತ್ಯರ್ಥಕ್ಕೆ ಮುಂದಾದರೆ ಎಲ್ಲಿಯಾದರೂ ಖಾಸಗಿ ಯಾಗಿ ಹಣ ತಂದಾದರೂ, ಸಾಲ ಪಾವತಿ ಸಬಹುದಾಗಿದೆ. ಮತ್ತೆ ವಾರದೊಳಗೆ ಹೊಸ ಸಾಲ ದೊರೆಯುವ ವಿಶ್ವಾಸವಿದೆ. ಅದನ್ನೂ ಮಾಡದೆ ಬ್ಯಾಂಕ್‌ನವರು ನೋಟಿಸ್‌ಗಳ ಮೂಲಕ ಖಾತೆ ಲಾಕ್ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಹಲವು ರೈತರ ಪ್ರಶ್ನೆ.
ಹೇಗಿದೆ ನೋಡಿ ಲೆಕ್ಕಾಚಾರ?: ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 2017ರ ಮೇನಲ್ಲಿ ರೈತ 3,49,000 ರೂ. ಸಾಲ ಪಡೆದಿದ್ದರೆ, ಇದೀಗ 4,56,235 ರೂ.ಗಳನ್ನು ಮರುಪಾವತಿಸಬೇಕಾಗಿದೆ. 4,80,000 ಸಾಲ ಪಡೆದವರು, 6,30,062 ರೂ., 4ಲಕ್ಷ ರೂ. ಸಾಲ ಪಡೆದವರು, 5,28,888 ರೂ., 4,99,000 ರೂ. ಸಾಲ ಪಡೆದವರು 6,00,468 ರೂ. ಸಾಲ ಮರುಪಾವತಿ ಮಾಡಬೇಕಾಗಿದ್ದು, ಸಾಲದ ನವೀಕರಣಗೊಳಿಸದಿದ್ದರೆ ನಿಮ್ಮ ಖಾತೆಯನ್ನು ಲಾಕ್ ಮಾಡುವುದಾಗಿ ಬ್ಯಾಂಕ್‌ಗಳು ನೋಟಿಸ್ ನೀಡತೊಡಗಿವೆ.
ಬೆಳೆ ಸಾಲದ ನವೀಕರಣಕ್ಕೆ ಬಡ್ಡಿ ಪಾವತಿಸಬೇಕಾಗಿದೆ. ಸುಮಾರು 1 ಲಕ್ಷ ರೂ.ನಿಂದ 1.50 ಲಕ್ಷ ರೂ.ವರೆಗೂ ಬಡ್ಡಿ ಪಾವತಿಸಬೇಕಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬರ, ಈ ವರ್ಷದ ಮುಂಗಾರು ಹಂಗಾಮು ವೇಳೆಗೆ ನೆರೆಯಿಂದಾಗಿ ಬೆಳೆ ನಷ್ಟಕ್ಕೆ ಸಿಲುಕಿರುವ ರೈತರು, ಜೀವನ ಸಾಗಿದರೆ ಸಾಕು ಎನ್ನುವ ಸ್ಥಿತಿಯಲ್ಲಿ ಇಷ್ಟೊಂದು ಬಡ್ಡಿ ಹಣ ತರುವುದಾದರೂ ಎಲ್ಲಿಂದ ಎಂಬ ಚಿಂತೆಯಲ್ಲಿದ್ದಾರೆ.
ಬೆಳೆ ಸಾಲ ಮನ್ನಾ ಎಂಬ ಸರ್ಕಾರದ ಮಾತು ನಂಬಿ ನಾವು ಸಾಲ ಮರು ಪಾವತಿಸಲಿಲ್ಲ. ಇದೀಗ ಬಡ್ಡಿಗೆ ಬಡ್ಡಿ ಬೆಳೆದು ನಿಂತಿದೆ. ನೆರೆಯಿಂದ ಬೆಳೆ ಹಾನಿಯಾಗಿ ಬರಿಗೈಯಲ್ಲಿರುವ ನಾವು ಲಕ್ಷ ರೂ. ಮೊತ್ತದ ಬಡ್ಡಿ ಪಾವತಿಸುವುದಾದರೂ ಹೇಗೆ? ಇದೀಗ ಬ್ಯಾಂಕ್‌ಗಳು ಸಾಲ ನವೀಕರಿಸದಿದ್ದರೆ ಖಾತೆ ಲಾಕ್ ನೋಟಿಸ್ ನೀಡಿವೆ. ನಮ್ಮ ನೋವು ಯಾರ ಮುಂದೆ ಹೇಳಬೇಕು. ಖಾತೆ ಲಾಕ್ ಆದರೆ ನಮ್ಮ ಮುಂದಿನ ಗತಿ ಏನು?-ಕಲ್ಲಪ್ಪ ಬೂದಿಹಾಳ, ಎಸ್.ಸುಭಾಸ, ಜೆ.ಬಸವಣ್ಣೆಪ್ಪ ಕೋಳಿವಾಡ ರೈತರು * ಅಮರೇಗೌಡ ಗೋನವಾರ