Advertisement

ಅಡಿಕೆಗೆ ಕೊಳೆ ರೋಗ: ಸಾವಿರಾರು ಎಕರೆ ಬೆಳೆ ನಾಶ

12:27 PM Aug 26, 2018 | |

ಅಜೆಕಾರು/ಸಿದ್ದಾಪುರ: ಮೇ ತಿಂಗಳ ಅಂತ್ಯದಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸಿದ್ದು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 70ರಷ್ಟು ಅಡಿಕೆ ಬೆಳೆ ಹಾನಿಗೊಂಡಿದೆ.

Advertisement

ಅಡಿಕೆ ಬೆಳೆಗಾರರು ಪ್ರತೀ ವರ್ಷ ಅಡಿಕೆಗೆ 2ರಿಂದ 3 ಬಾರಿ ಬೋರ್ಡೊ ದ್ರಾವಣ ಸಿಂಪಡಿಸುವ ಮೂಲಕ ಅಡಿಕೆಗೆ ಕೊಳೆರೋಗ ಬಾರದಂತೆ ತಡೆಯುವುದು ಕ್ರಮ. ಆದರೆ ಈ ಬಾರಿ ನಿರಂತರ ಮಳೆಯಿಂದಾಗಿ ಬೋಡೋì ಸಿಂಪಡಣೆಗೆ ಅವಕಾಶವೇ ಆಗಲಿಲ್ಲ. ನಡುವೆ ಒಂದೊಂದು ದಿನ ಮಳೆ ವಿರಾಮ ನೀಡಿದ್ದರೂ ಆಗ ಕಾರ್ಮಿಕರ ಕೊರತೆ ಯಿಂದ ಎಷ್ಟೋ ತೋಟಗಳಿಗೆ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ. ಕೆಲವರು ಮಳೆಯ ನಡುವೆಯೇ ಸಿಂಪಡಿಸಿದ್ದರೂ ಅದು ಫ‌ಲಕಾರಿಯಾಗಲಿಲ್ಲ. ಪರಿಣಾಮ ಅಡಿಕೆಗೆ ಕೊಳೆರೋಗ ತಗಲಿದೆ. ಎಳೆಯ ಅಡಿಕೆಗಳು ಉದುರಿ ಬೀಳುತ್ತಿವೆ. ಅಡಿಕೆಯನ್ನೇ ಅವಲಂಬಿಸಿರುವ ಕೃಷಿಕರು ಕಂಗಾಲಾಗಿದ್ದಾರೆ.

ತಾಲೂಕುವಾರು ವಿವರ
ಉಡುಪಿ ಜಿಲ್ಲೆಯಲ್ಲಿ ಸುಮಾರು 8,100 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ಸುಮಾರು 5,600 ಹೆಕ್ಟೇರ್‌ ಪ್ರದೇಶದ ಅಡಿಕೆಗೆ ಕೊಳೆ ರೋಗ ಬಂದು ನಾಶವಾಗಿದೆ. ಜಿಲ್ಲೆಯ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ 3,500 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ಸುಮಾರು 2,400 ಹೆಕ್ಟೇರ್‌ನ ಅಡಿಕೆಗೆ ಕೊಳೆ ರೋಗ ವ್ಯಾಪಿಸಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 3,300 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದ್ದು 2,100 ಹೆಕ್ಟೇರ್‌ನ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಬ್ರಹ್ಮಾವರ, ಉಡುಪಿ, ಕಾಪು ತಾಲೂಕುಗಳ 1,300 ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದ್ದು ಸುಮಾರು 700 ಹೆಕ್ಟೇರ್‌ನ ಅಡಿಕೆ ಬೆಳೆ ನಾಶವಾಗಿದೆ.

ಅತ್ಯಲ್ಪ ಪರಿಹಾರಧನ
ಅಡಿಕೆ ಸೇರಿದಂತೆ ಎಲ್ಲ ರೀತಿಯ ಕೃಷಿ ಉತ್ಪನ್ನಗಳು ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದಾಗ ಸರಕಾರ ನೀಡುವ ಪರಿಹಾರ ಧನವು ಮಾರುಕಟ್ಟೆ ಮೌಲ್ಯಕ್ಕಿಂತ ತೀರಾ ಕಡಿಮೆಯಾಗಿರುತ್ತದೆ. ಈ ಹಿಂದೆ 2013-14ನೇ ಸಾಲಿನಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸಿದಾಗ ಹೆಕ್ಟೇರಿಗೆ 12,000 ರೂ. ಪರಿಹಾರ ಧನ ವಿತರಿಸಲಾಗಿತ್ತು. ಈಗ ಅದನ್ನು 18,000 ರೂ.ಗೆ ಏರಿಸಲಾಗಿದ್ದರೂ ದು ಅಡಿಕೆ ಬೆಳೆಯ ಮೌಲ್ಯಕ್ಕಿಂತ ತೀರಾ ಕನಿಷ್ಠ ಪರಿಹಾರ. ಒಂದು ಹೆಕ್ಟೇರ್‌ನಲ್ಲಿ ವರ್ಷಕ್ಕೆ 25 ಕ್ವಿಂಟಲ್‌ ಅಡಿಕೆ ಬೆಳೆ ಬರುತ್ತಿದ್ದು ಪ್ರಸಕ್ತ ಇದರ ಮಾರುಕಟ್ಟೆ ಮೌಲ್ಯ ಸುಮಾರು 5 ಲಕ್ಷ ರೂ. ಆದರೆ ಸರಕಾರದ ಪರಿಹಾರಧನ ಕೇವಲ 18,000 ರೂ.!

ಬೆಳೆ ವಿಮೆಗೆ ಹಿಂದೇಟು
ರೈತರ ಹಿತರಕ್ಷಣೆಗಾಗಿ ಸರಕಾರ ಬೆಳೆವಿಮೆ ಜಾರಿಗೆ ತಂದಿದ್ದರೂ ಅದನ್ನು ಮಾಡಿಸುವಲ್ಲಿ ರೈತರು ಹಿಂದೇಟು ಹಾಕುತ್ತಿದ್ದಾರೆ. ಬೆಳೆವಿಮೆ ಮಾಡಿಸಿದಲ್ಲಿ ಪ್ರಕೃತಿ ವಿಕೋಪಗಳ ಸಂದರ್ಭ ಸಹಾಯಕ್ಕೆ ಬರುತ್ತದೆ. ಆದರೆ ರೈತರು ಬೆಳೆ ವಿಮೆಯತ್ತ ಮನಸ್ಸು ಮಾಡದ ಕಾರಣ ಬೆಳೆ ಸಂಪೂರ್ಣ ನಾಶವಾದಾಗ ಯಾವುದೇ ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. 
ವಿಮೆ ಮಾಹಿತಿ
ಪ್ರತೀ ಜೂನ್‌ ಅಂತ್ಯದ ಒಳಗೆ ಬೆಳೆವಿಮೆ ಮಾಡಿಸಬೇಕು. ಅಡಿಕೆಗೆ ಒಂದು ಹೆಕ್ಟೇರಿಗೆ 6,400 ರೂ. ವಾರ್ಷಿಕ ಕಂತು ಕಟ್ಟಬೇಕಾದರೆ ಕಾಳು ಮೆಣಸಿಗೆ ಪ್ರತೀ ಹೆಕ್ಟೇರಿಗೆ 2,350 ವಾರ್ಷಿಕ ಕಂತಾಗಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಸುವ ಒಟ್ಟು 1,825 ಕೃಷಿಕರು ಮಾತ್ರ ಬೆಳೆವಿಮೆ ಮಾಡಿಸಿದ್ದಾರೆ. 

Advertisement

ದ.ಕ. ಜಿಲ್ಲೆಯಲ್ಲೂ ಅಪಾರ ಹಾನಿ
ಸುಳ್ಯ/ವಿಟ್ಲ  /ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊಳೆ ರೋಗದಿಂದಾಗಿ ಶೇ. 70ರಿಂದ 80ರಷ್ಟು ಅಡಿಕೆ ಬೆಳೆ ನೆಲಕಚ್ಚಿದೆ. ಅಡಿಕೆ ಬೆಳೆಗಾರರು ಈ ಬಾರಿ ಕೊಳೆರೋಗದಿಂದ ಜರ್ಜರಿತರಾಗಿದ್ದಾರೆ. ತೋಟಗಾರಿಕೆ ಇಲಾಖೆಯ ಬೋಡೋ ದ್ರಾವಣಕ್ಕೂ ರೋಗ ಜಗ್ಗುತ್ತಿಲ್ಲ. ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಲ್ಲಿ  8,000 ಹೆಕ್ಟೇರ್‌ ಅಡಿಕೆ ಬೆಳೆಯುತ್ತಿದ್ದು, ತೋಟಗಾರಿಕೆ ಇಲಾಖೆಯ ಪ್ರಕಾರ 4,150 ಹೆಕ್ಟೇರ್‌ ಪ್ರದೇಶದಲ್ಲಿ ಕೊಳೆರೋಗ ಬಾಧಿಸಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸಹಿತ ದ.ಕ. ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ಹೆಕ್ಟೇರ್‌ ತೋಟ ಕೊಳೆರೋಗಕ್ಕೆ ಒಳಗಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಕ್ಷೇತ್ರ ಅಧ್ಯಯನದ ಬಳಿಕ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ವಿಪರೀತ ಮಳೆಯ ಪರಿಣಾಮ ಜಿಲ್ಲೆಯ ಅಡಿಕೆ ಕೃಷಿಕರಿಗೆ ಬಹಳಷ್ಟು ನಷ್ಟವಾಗಿದೆ. ಈಗಾಗಲೇ ತಾಲೂಕು ಅಧಿಕಾರಿಗಳಿಗೆ ನಷ್ಟದ ಅಂದಾಜು ಮಾಡುವಂತೆ ಸೂಚಿಸಲಾಗಿದೆ. ನಷ್ಟದ ಬಗ್ಗೆ ಸರಕಾರಕ್ಕೆ ವರದಿ ನೀಡಲಾಗುವುದು.
ಭುವನೇಶ್ವರಿ,  ಜಿಲ್ಲಾ ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ಉಡುಪಿ ಜಿಲ್ಲೆ

ಪ್ರತೀ ಗ್ರಾಮದಲ್ಲಿ ಪ್ರಮುಖ ಅಡಿಕೆ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸರಕಾರ ಅಡಿಕೆ ಬೆಳೆಗಾರರಿಗೆ ಮೈಲುತುತ್ತು ಖರೀದಿಸಲು ಸಹಾಯಧನ ನೀಡುತ್ತಿದ್ದು ಸಾಮಾನ್ಯ ರೈತರಿಗೆ ಶೇ. 75 ಹಾಗೂ ಪ.ಜಾತಿ/ಪಂಗಡದವರಿಗೆ ಶೇ. 90 ಸಹಾಯಧನ ನೀಡುತ್ತಿದೆ.
ಶ್ರೀನಿವಾಸ್‌,  ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕಾರ್ಕಳ

 *ಜಗದೀಶ್‌ ರಾವ್‌ ಅಂಡಾರು
 *ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next