ಗಂಗಾವತಿ: ತಾಲೂಕಿನ ಮರಳಿ, ಆನೆಗೊಂದಿ ಮತ್ತು ವೆಂಕಟಗಿರಿ ಕಂದಾಯ ಹೋಬಳಿಯ ವ್ಯಾಪ್ತಿಯಲ್ಲಿ ಮಳೆಗಾಳಿಯಿಂದ ಕಟಾವಿಗೆ ಬಂದಿರುವ ಭತ್ತದ ಬೆಳೆ ನೆಲಕ್ಕುರುಳಿದ್ದು, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆವಿಮೆಯ ಮಾಡಿಸಿಕೊಂಡಿರುವ ಖಾಸಗಿ ವಿಮಾ ಕಂಪನಿಯವರು ಪರಿಹಾರ ವಿತರಣೆಗೆ ಅಗತ್ಯ ಸೇವೆ ನೀಡುತ್ತಿಲ್ಲವೆಂದು ರೈತರು ಆರೋಪ ಮಾಡುತ್ತಿದ್ದಾರೆ.
ಮರಳಿ ಭಾಗದಲ್ಲಿ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಕಳೆದ ವಾರ ಬೀಸಿದ ಗಾಳಿಗೆ ನೆಲಕ್ಕುರುಳಿದ್ದು, ಈಗಾಗಲೇ ಕೃಷಿ ಇಲಾಖೆಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯ ಮಾಹಿತಿ ಮತ್ತು ಭಾವಚಿತ್ರ ಸಂಗ್ರಹಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಎಕರೆಗೆ 500-1000 ರೂ. ವರೆಗೆ ಖಾಸಗಿ ವಿಮಾ ಕಂಪನಿಯವರು ಬೆಳೆ ವಿಮೆ ಪಾವತಿಸಿಕೊಂಡಿದ್ದಾರೆ.
ಭತ್ತದ ಬೆಳೆ ನೆಲಕ್ಕೆ ಬಿದ್ದಿರುವ ಕುರಿತು ಖಾಸಗಿ ವಿಮಾ ಕಂಪನಿಯ ಟೋಲ್ ಫ್ರಿ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರೂ ಖುದ್ದು ರೈತರು ಕೊಪ್ಪಳಕ್ಕೆ ತೆರಳಿ ಖಾಸಗಿ ವಿಮಾ ಕಂಪನಿಯವರಿಗೆ ಮನವಿ ಸಲ್ಲಿಸಿ 10 ದಿನಗಳಾದರೂ ಕ್ಷೇತ್ರ ವೀಕ್ಷಣೆ ಮಾಡಲು ಯಾರೂ ಆಗಮಿಸುತ್ತಿಲ್ಲ.
ಮಳೆ ಬಂದರೆ ಪ್ರಸ್ತುತ ಬೆಳೆದು ನಿಂತ ಮತ್ತು ನೆಲಕ್ಕೆ ಬಿದ್ದಿರುವ ಭತ್ತ ಸಂಪೂರ್ಣ ನಷ್ಟವಾಗುವ ಸಾಧ್ಯತೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ. ಖಾಸಗಿ ವಿಮಾ ಕಂಪನಿಯ ಪರಿಹಾರವನ್ನು ನೆಚ್ಚಿಕೊಂಡರೆ ಇಡೀ ಭತ್ತದ ಬೆಳೆ ನಷ್ಟವಾಗುವ ಸಂಭವಿದ್ದು, ಜಿಲ್ಲಾಡಳಿತ ಕೂಡಲೇ ಖಾಸಗಿ ಬೆಳೆ ವಿಮಾ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಬೆಳೆ ವಿಮಾ ಪರಿಹಾರ ರೈತರಿಗೆ ದೊರಕುವಂತೆ ಮಾಡಬೇಕಿದೆ.
ಕಳೆದ ವಾರ ಗಾಳಿಯಿಂದ ಬೆಳೆದು ನಿಂತಿದ್ದ ಭತ್ತದ ಬೆಳೆಯ ಶೇ. 45ರಷ್ಟು ನೆಲಕ್ಕುರುಳಿದ್ದು, ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ. ಬೆಳೆ ವಿಮಾ ಪರಿಹಾರ ದೊರೆಯುವ ನಿರೀಕ್ಷೆಯಿಂದ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಂತೆ ಪ್ರಸಕ್ತ ಸಾಲಿನಲ್ಲಿ ಖಾಸಗಿ ವಿಮಾ ಕಂಪನಿಗೆ ಪ್ರತಿ ಎಕರೆಗೆ 600 ರೂ. ಗಳಂತೆ ವಿಮಾ ಕಂತಿನ ಹಣ ಪಾವತಿ ಮಾಡಲಾಗಿದೆ. ಬೆಳೆ ಬಿದ್ದಿರುವ ಕುರಿತು ಟೋಲ್ ಫ್ರಿ ನಂಬರ್‌ಗೆ ಮಾಹಿತಿ ನೀಡಿದರೂ ವಿಮಾ ಕಂಪನಿಯ ಪ್ರತಿನಿಧಿಗಳು ಸ್ಥಳ ಪರಿಶೀಲಿಸದ ಕಾರಣ ಭತ್ತ ಕಟಾವು ವಿಳಂಭವಾಗಿದೆ. ಬೆಳೆದು ನಿಂತಿರುವ ಭತ್ತವೂ ಮಳೆಯಿಂದ ನಷ್ಟವಾಗುವ ಸಂಭವವಿದೆ. ಕಟಾವು ಮಾಡಿದ ಭತ್ತಕ್ಕೆ ಸೂಕ್ತ ದರವೂ ಇಲ್ಲ. ನೆಲಕ್ಕುರುಳಿದ ಭತ್ತಕ್ಕೆ ಖಾಸಗಿ ವಿಮಾ ಕಂಪನಿಯವರು ನಷ್ಟ ಪರಿಹಾರ ಕೊಡುತ್ತಿಲ್ಲ. ರೈತರ ಸ್ಥಿತಿ ಬಹಳ ಕಷ್ಟವಾಗಿದೆ ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ ಪರಿಹಾರದ ವ್ಯವಸ್ಥೆ ಮಾಡಬೇಕಿದೆ. –
ಕೆ. ಶರಣಪ್ಪ, ಮರಳಿ ರೈತ
ಗಂಗಾವತಿ ತಾಲೂಕಿನಲ್ಲಿ ಬೆಳೆದು ನಿಂತಿದ್ದ ಭತ್ತದ ಗದ್ದೆ ಅಲ್ಲಲ್ಲಿ ಗಾಳಿಯಿಂದ ಬಿದ್ದಿರುವುದನ್ನು ರೈತರು ತಮ್ಮ ಗಮನಕ್ಕೆ ತಂದಿದ್ದಾರೆ. ವಿಮಾ ಕಂಪನಿಯವರು ವೈಜ್ಞಾನಿಕ ಸರ್ವೇ ಮಾಡಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಪ್ರಿಮಿಯಂ ಪಾವತಿಸಿದ ರೈತರಿಗೆ ಪರಿಹಾರ ಕೂಡಲೇ ವಿತರಿಸಬೇಕು. ಈಗಾಗಲೇ ಜಿಲ್ಲಾಡಳಿತ ಜತೆ ಮಾತನಾಡಿದ್ದು, ಖಾಸಗಿ ವಿಮಾ ಕಂಪನಿ ಅಧಿಕಾರಿಗಳು ಕೂಡಲೇ ಬಿದ್ದಿರುವ ಭತ್ತದ ಗದ್ದೆಯ ಕ್ಷೇತ್ರಕ್ಕೆ ತೆರಳಿ ಅಗತ್ಯ ಮಾಹಿತಿ ಜತೆ ಕೂಡಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲು ಸೂಚಿಸಲಾಗುತ್ತದೆ.
–ಸಂಗಣ್ಣ ಕರಡಿ, ಸಂಸದ
ಮಳೆಗಾಳಿಯಿಂದ ನೆಲಕ್ಕುರುಳಿದ ಭತ್ತದ ಗದ್ದೆಯ ಸರ್ವೇ ಕಾರ್ಯವನ್ನು ಈಗಾಗಲೇ ಕೃಷಿ ಇಲಾಖೆ ನಡೆಸಿದ್ದು, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡು ಪ್ರಿಮಿಯಂ ಪಾವತಿಸಿದ ರೈತರಿಗೆ ನಷ್ಟ ಪರಿಹಾರ ವಿತರಣೆ ವಿಳಂಬ ಕುರಿತು ವರದಿಯಾಗಿದ್ದು, ವಿಮಾ ಕಂಪನಿಯರು ಭತ್ತ ಹಾನಿಯಾದ ಪ್ರದೇಶಕ್ಕೆ ತೆರಳಿ ಸರ್ವೇ ನಡೆಸಿ ವಿಮಾ ಕಂಪನಿಯ ನಿಯಮಾನುಸಾರ ಪರಿಹಾರ ವಿತರಿಸಬೇಕಿದೆ. ಕೃಷಿ ಇಲಾಖೆ ಜಿಲ್ಲೆಯ ಅಧಿ ಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ವಿಮಾ ಕಂಪನಿಯವರು ಸ್ಥಳ ಪರಿಶೀಲನೆ ವಿಳಂಬ ಮಾಡಿದರೆ ಮುಂಗಾರು ಮಳೆ ಪರಿಣಾಮ ಇನ್ನಷ್ಟು ರೈತರಿಗೆ ನಷ್ಟವಾಗುವ ಸಂಭವವಿದೆ. –
ವಿಕಾಸ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿಗಳು
-ಕೆ. ನಿಂಗಜ್ಜ