ಆಳಂದ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹಾಳಾದ ಬೆಳೆಗೆ ಆರಂಭಿಸಿದ ಸರ್ವೇ ಮತ್ತು ಬಳಿಕ ಶುರುವಾದ ಹಾನಿಯ ಡಾಟಾ ಎಂಟ್ರಿ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಿ ರೈತರಿಗೆ ಪರಿಹಾರದ ಜತೆಗೆ ಹಿಂಗಾರು ಹಂಗಾಮಿಗೆ ಕಡಲೆ, ಕುಸುಬೆ ಇನ್ನಿತರ ಬೀಜಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕಿನಾದ್ಯಂತ ಶುಕ್ರವಾರ ಬೆಳೆ ಹಾನಿ ವೀಕ್ಷಣೆಗಾಗಿ ಕೈಗೊಂಡ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಡೆ ರೈತರು ಎಡ್ಮೂರು ಬಾರಿ ಮರು ಬಿತ್ತನೆ ಮಾಡಿದ್ದರೂ ಬೆಳೆ ಬಂದಿಲ್ಲ. ಹೆಸರು, ಉದ್ದು, ಸೋಯಾ ಕೈಕೊಟ್ಟಿವೆ. ಮುಂಗಾರಿನ ಕೃಷಿ ಸಂಪೂರ್ಣ ನೆಲಕ್ಕಚ್ಚಿದ್ದು, ಹಿಂಗಾರಿನ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ. ಆದರೆ ಅಲ್ಪಾವಧಿ ಬೆಳೆ ಕೈಗೆ ಬಾರದೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಅವರಿಗೆ ಉಚಿತವಾಗಿ ಕಡಲೆ, ಕುಸಬೆ ಇನ್ನಿತರ ಬಿತ್ತನೆ ಬೀಜ ವಿತರಿಸಬೇಕು ಎಂದು ಕೋರಿದರು.
ನರೋಣಾ ವಲಯದ ಹೊಲಗಳಿಗೆ ಭೇಟಿ ಮಾಡಿದ ಅಧ್ಯಕ್ಷರು ರೈತ ಮರೇಶ ಕ್ಷೇಮಲಿಂಗ್ ರಾಗಿ ಎನ್ನುವರ ಮೂರು ಎಕರೆ ಹೆಸರು, ಮೆಕ್ಕಜೋಳ ಬೆಳೆ ಪೂರ್ಣವಾಗಿ ಮಳೆ ನೀರಿಗೆ ನೆನೆದು ಹಾನಿಯಾಗಿದ್ದನ್ನು ವೀಕ್ಷಿಸಿದರು. ಬಳಿಕ ಆಳಂದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿ ಸರೋಜಾ ಕುಳಮುಟಕಿ ಅವರೊಂದಿಗೆ ಚರ್ಚಿಸಿದ ಪಾಟೀಲ, ಹಾನಿ ಕುರಿತು ದಾಖಲಿಸುವಂತೆ ಹಾಗೂ ಹಿಂಗಾರಿನ ಬೀಜ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು.
ದೇಗಾಂವ ರೈತ ಶಿವುಕುಮಾರ ಡೋಲೆ, ಶರಣಬಸಪ್ಪ ಬಿರಾದಾರ, ಶ್ರೀಶೈಲ ಬಿರಾದಾರ ಈ ಸಂದರ್ಭದಲ್ಲಿದ್ದರು. ತದನಂತರ ಖಜೂರಿ ಗ್ರಾಮ ಮತ್ತು ವಲಯದ ಹೊಲಗಳಿಗೆ ಅಧ್ಯಕ್ಷರು ಭೇಟಿ ನೀಡಿ ಬೆಳೆಯ ಸಾಧಕ ಬಾಧಕ ಪರಿಶೀಲಿಸಿದರು.
ರೈತ ಭೀಮಾಶಂಕರ ಎಸ್. ಬಂಡೆ, ಶಾಂತಪ್ಪ ಅಲ್ದಿ, ಶ್ರೀಕಾಂತ ಖೂನೆ ಮಳೆ ಏರುಪೇರಾಗಿ ಪ್ರಸಕ್ತ ಸಾಲಿನ ಕೃಷಿ ನೆಲಕ್ಕಿದ ಬಗ್ಗೆ ಅಳಲು ತೋಡಿಕೊಂಡರು. ರೈತ ಸಂಪರ್ಕ ಅಧಿಕಾರಿ ಮಚ್ಛೇಂದ್ರನಾಥ ವಡ್ಡಿ, ಸಹಾಯಕ ಅಧಿಕಾರಿ ವಿಲಾಸ ಹರಸೂರ, ನರೋಣಾ ಅಧಿಕಾರಿ ರಮೇಶ ತೆಲ್ಲೂರ ಮಾಹಿತಿ ನೀಡಿದರು. ಬಳಿಕ ಮಾದನಹಿಪ್ಪರಗಾ ನಿಂಬರಗಾ ವಲಯಗಳಲ್ಲಿ ಸಂಚರಿಸಿದ ಸಿದ್ರಾಮಪ್ಪ ಪಾಟೀಲ ರೈತರು ಮತ್ತು ಸ್ಥಳೀಯ ಕೃಷಿ ಅಧಿ ಕಾರಿಗಳೊಂದಿಗೆ ಚರ್ಚೆ ನಡೆಸಿದರು.