ವಿಜಯಪುರ: ‘ಗಾಳಿಯಲ್ಲಿ ನೀವು ಗುಂಡು ಹಾರಿಸಿದರೆ ಪ್ರಯೋಜನವಿಲ್ಲ.ಕೇಂದ್ರಕ್ಕೆ ಅತಿಹೆಚ್ಚು ತೆರಿಗೆ ಕೊಡುವ ರಾಜ್ಯ ಕರ್ನಾಟಕ. ಅತಿಹೆಚ್ಚು ತೆರಿಗೆ ಕೊಡುವಂತಹ ರಾಜ್ಯ ಯಾವುದಿದೆ ಎಂದು ಕೇಳಿ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗೇಟು ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾಧ್ಯಮಗಳೊಂದಿಗೆ ಮಾತನಾಡಿ ‘ಜಿಎಸ್ ಟಿ ಹಣದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ಹೇಳಿಕೆ ನೀಡಿದ್ದಾರೆ. ‘ಅವರ ಅಹಂಕಾರ ಎಂಥದ್ದು ಎಂದು ಮೊದಲು ಕೂಡ ನಾವು ನೋಡಿದ್ದೇವೆ. ಜಿಎಸ್‌ಟಿ ವಿಚಾರವಾಗಿ ನಾವು ಸ್ಪಷ್ಟವಾದಂತಹ ಮಾಹಿತಿಗಳನ್ನ ಜನರ ಮುಂದೆ ಇಟ್ಟಿದ್ದೇವೆ. ಹೇಗೆ ನಮಗೆ ನಷ್ಟ ಆಗಿದೆ, ಎಷ್ಟರಮಟ್ಟಿಗೆ ನಷ್ಟ ಆಗಿದೆ ಅನ್ನೋದನ್ನ ಹಾಗೂ ನಮ್ಮ ರಾಜ್ಯಕ್ಕೆ ಏನು ಕೊಡಬೇಕು ಅನ್ನೋದನ್ನ ಕೇಂದ್ರದ ಫೈನಾನ್ಸ್ ಕಮಿಷನ್ ರೆಕಮೆಂಡ್ ಮಾಡಿರುವಂತಹದ್ದು ಆಗಿದೆ. ಆದರೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಅವರು ಮಾಡದೇ ಇರೋದನ್ನ, ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿರುವಂತಹ ಯೋಜನೆಗಳಿಗೆ ಹಣ ಕೊಡದೇ ಇರುವಂತಹದ್ದು ಇದೆಲ್ಲಾ ಸ್ಪಷ್ಟ ನಿರ್ದಿಷ್ಟವಾದಂತಹ ಮಾಹಿತಿಗಳು ಎಂದರು.
‘ದೇಶಲ್ಲೇ ಅತೀ ಹೆಚ್ಚು ಎಫ್‌ಡಿಐ ಬರುವಂತಹ ರಾಜ್ಯ ಕರ್ನಾಟಕವಾಗಿದೆ. ಇಷ್ಟೇಲ್ಲಾ ಇದ್ದಾಗ ಕೇಂದ್ರ ಹಣಕಾಸು ಸಚಿವರು ಜಿಎಸ್ಟಿ ಹಣದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂಡಿಸುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಕೇಂದ್ರ ವಿತ್ತ ಸಚಿವರಾಗಿ ನಮ್ಮ ಸಮಸ್ಯೆಯನ್ನ ಬಗೆ ಹರಿಸುವುದನ್ನ ಬಿಟ್ಟು, ಮೇಲಾಗಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ನಮ್ಮ ರಾಜ್ಯದ ರಾಜ್ಯಸಭೆ ಸದಸ್ಯೆಯಾಗಿ ಈ ರೀತಿ ಮಾತನಾಡುವುದು ಯಾಕೆ? ಅವರಿಗೆ ಅಷ್ಟೂ ಕೂಡ ಜವಾಬ್ದಾರಿ ಇಲ್ಲವೆ ಎಂದು ವಾಗ್ದಾಳಿ ನಡೆಸಿದರು.
‘ನಿರ್ಮಲಾ ಸೀತಾಮನ್ ಅವರ ಮಾತುಗಳು ಅಹಂಕಾರದ ಪರಮಾವಧಿಯಾಗಿವೆ. ನನ್ನನ್ನ ಮೀರಿಸೋರು ಯಾರೂ ಇಲ್ಲ ಅಂತಾ ಅವರು ತಿಳ್ಕೊಂಬಿಟ್ಟಿದ್ದಾರೆ. ನನಗೆ ಹೇಳೋರು ಯಾರೂ ಇಲ್ಲ ಅಂತ ಅಂದುಕೊಂಡಿದ್ದಾರೆ. ಅದು ಒಳ್ಳೆಯದಲ್ಲ, ಸ್ವಭಾವ ಆ ರೀತಿ ಇರಬಾರದು ಎಂದು ಕಿವಿ ಮಾತು ಹೇಳಿದರು. ಯಾವತ್ತೂ ಕೂಡ ನಮ್ಮ ಒಕ್ಕೂಟದ ವ್ಯವಸ್ಥೆಯಲ್ಲಿ ಒಂದು ವಿಶ್ವಾಸದಿಂದ ನಾವು ಕೆಲಸ ಮಾಡಬೇಕು. ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನ ಎಷ್ಟು ಸಲ ಹೇಳಿದರೂ ಕೂಡ ಕಿವಿಗೊಡದ ಕಾರಣ ನಾವು ಬೀದಿಗೀಳಿಯಬೇಕಾಯಿತು’ ಎಂದರು.
‘ಮೂರು ವರ್ಷದಿಂದ ಹೇಳುತ್ತಿದ್ದೇವೆ, ಈಗಲಾದರೂ ಅದನ್ನ ಸರಿಪಡಿಸುವ ಕೆಲಸವಾಗಬೇಕು ಎಲ್ಲರೂ ಸೇರಿ ಸರಿ ಮಾಡಬೇಕು. ಯಾವುದೇ ವ್ಯವಸ್ಥೆಯಲ್ಲಿ ತಾರತಮ್ಮ ಆಗಿರಬಹುದು ಅದನ್ನ ಸರಿಪಡಿಸುವ ಕೆಲಸವಾಗಬೇಕು . ಎಲ್ಲವೂ ಹಂಡ್ರೆಡ್ ಪರ್ಸೆಂಟ್ ಕರೆಕ್ಟ್ ಇರಲ್ಲ. ಈ ತರಹ ಸಮಸ್ಯೆಗಳು ಇದೆ ಅಂತ ಹೇಳಿದಾಗ ನಮ್ಮ ಮಾತಿಗೆ ಕಿವಿಗೊಡಬೇಕು, ನಮಗೆ ಹೇಳಬೇಕು. ಆಯ್ತು ಇದನ್ನ ಸರಿಪಡಿಸುತ್ತೇವೆ, ಮುಂದೆ ಏನಾದರೂ ಇದಕ್ಕೆ ಮಾಡೋಣ ಎಂದು ಸರಿಪಡಿಸುವ ಕೆಲಸ ಮಾಡಬೇಕು’ ಎಂದರು.
‘ಎಲ್ಲವೂ ನಿಮ್ಮದೇ ತಪ್ಪು, ನಮ್ದೇನೂ ತಪ್ಪಿಲ್ಲ ಎಂದು ಮಾತಾಡುವಂಥಾದ್ದು ಸರಿ ಅಲ್ಲ ಎಂದರು. ಇದೇ ವೇಳೇ ಕೇಂದ್ರ ಹಣಕಾಸು ಸಚಿವರು ರಾಜ್ಯದ ಪ್ರತಿನಿಧಿಯಾಗಿ ರಾಜ್ಯಕ್ಕೆ ಮಲತಾಯಿ ದೋರಣೆ ಮಾಡುತ್ತಾ ಇದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿ ಆರೊಗ್ಯ ಸಚಿವರು ಅನ್ಯಾಯ ಮಾಡುತ್ತಿಲ್ಲಾ ಅನ್ಯಾಯ ಮಾಡಾಗಿದೆಯಲ್ಲಾ ಈಗಾಗಲೇ ಅದಕ್ಕೆ ನಮ್ಮ ಕರ್ನಾಟಕಕ್ಕೆ ಹಿನ್ನಡೆ ಆಗಿದೆ. ಸಾವಿರಾರು ಸಾವಿರಾರು ಕೋಟಿಯಷ್ಟು ಹಣ ನಮ್ಮ ಟ್ಯಾಕ್ಸ್ ಹಣ ಅನುದಾನ ಬರುತ್ತಿಲ್ಲ.ಜಿಎಸ್ ಟಿ ರೂಪದಲ್ಲಿ ನಾವು ಕೊಡುವಂತಹ ನೂರು ರೂಪಾಯಿಯಲ್ಲಿ ನಮಗೆ ಹದಿಮೂರು ರೂಪಾಯಿ ವಾಪಸ್ ಬಂದರೆ ನಾವು ಏನಂತ ಹೇಳಬೇಕು ಹೇಳಿ. ಕೇಂದ್ರದಿಂದ ನಮಗೆ ವಾಪಸ್ ನ್ಯಾಯಯುತವಾಗಿ ಅನುದಾನ ಬರಬೇಕು’ ಎಂದು ಆಕ್ರೋಶ ಹೊರ ಹಾಕಿದರು.