ಅಫಜಲಪುರ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅವರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಕೊರತೆಯಿಂದ ಈ ಸಲ ಹಿನ್ನಡೆಯಾಗಿದೆ ಎಂದು ಹೇಳಿರುವ ಹೇಳಿಕೆಗೆ ಶಾಸಕರ ಅಭಿಮಾನಿಗಳು ವೈಯಕ್ತಿಕ ಲಾಭಕ್ಕೆ ಟೀಕಿಸಿರುವುದು ಸರಿಯಲ್ಲ ಎಂದು ಜೆ.ಎಂ.ಕೊರಬು ಪೌಂಡೇಶನ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಜೆ.ಎಂ.ಕೊರಬು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಮತೀನ್ ಪಟೇಲ್, ಸಿದ್ಧಾರ್ಥ ಬಸರಿಗಿಡ ವಿನಾಕಾರಣ ಪಟೇಲರನ್ನು ಪಕ್ಷ ವಿರೋಧಿ ಎಂದು ಹೇಳಿದ್ದು ನೋವುಂಟಾಗಿದೆ. ಕೂಡಲೇ ಈ ಮುಖಂಡರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಎಂ.ವೈ. ಪಾಟೀಲ ವಿಧಾನ ಪರಿಷತ್ ಚುನಾವಣೆಯಲ್ಲಿ ತಾಲೂಕಿನ ಕೆಲ ಗ್ರಾಪಂ ಸದಸ್ಯರನ್ನು ಮನವೊಲಿಸಿ ಮತ ಕೇಳಿದ್ದರೆ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಬರುತ್ತಿದ್ದವು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೇ ಶಾಸಕರ ಅಭಿಮಾನಿಗಳು ಪಕ್ಷ ವಿರೋಧಿ ಚಟುವಟಿಕೆ ಎಂಬುದಾಗಿ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ಪಕ್ಷದಿಂದ ಬಂದವರಾದ ಇವರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಸಹಿಸುತ್ತಿಲ್ಲ. ಶಾಸಕರು ಇವರಿಗೆ ತಿಳಿ ಹೇಳಬೇಕು ಎಂದರು.
ಪೌಂಡೇಶನ್ ಅಧ್ಯಕ್ಷ ಶಿವಪುತ್ರ ಜಿಡ್ಡಗಿ ಮಾತನಾಡಿ ಮಕ್ಬೂಲ್ ಪಟೇಲರನ್ನು ವಿನಾಕಾರಣ ಟೀಕೆ ಮಾಡಿರುವ ಶಾಸಕರ ಬೆಂಬಲಿಗರು ಕೂಡಲೇ ಕ್ಷಮೆ ಯಾಚಿಸಬೇಕು. ಅನಾವಶ್ಯಕ ಗೊಂದಲಕ್ಕೆ ಎಡೆಮಾಡಿಕೊಡುವುದನ್ನು ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು.
ಮುಖಂಡರಾದ ಮಹಾಂತೇಶ ಬಳೂಂಡಗಿ, ಮಕ್ಬೂಲ್ ಶೇಖ್ ಮಾಶಾಳ, ರವಿ ಗೌರ, ಭೀರಣ್ಣ ಕನಕಟೇಲರ್, ರಾಜು ಆರೇಕರ್, ಖಾಜಪ್ಪ ಬಂಜತ್ರಿ, ಭೀಮಾಶಂಕರ ಬಿರಾದಾರ, ಸಂತೋಷ ಗಂಜಿ, ಗಡ್ಡೆಪ್ಪ ಮೇತ್ರಿ, ಕರೆಪ್ಪ ಪೂಜಾರಿ, ಇಸಾಕ್ ಮಕಾಂದಾರ ಇತರರಿದ್ದರು.