ಬಸವನಬಾಗೇವಾಡಿ: ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ಮಂಜಿನಿಂದ ಜಿಲ್ಲಾದ್ಯಾಂತ ಅಪಾರ ಪ್ರಮಾಣದ ಬೆಳೆಗಳು ಹಾಳಾಗಿದ್ದು ಕೇಂದ್ರ, ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಬಸವೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ಬಸವಸೈನ್ಯ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಬಸವೇಶ್ವರ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ಮಾಡಿದರು.
ಈ ವೇಳೆ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಕಳೆದೆರೆಡು ವರ್ಷ ಲಾಕ್‌ಡೌನ್‌ನಿಂದ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಅಪಾರ ಪ್ರಮಾಣ ಹಾನಿಯಾಗಿದೆ. ಈಗ ತೊಗರಿ, ದ್ರಾಕ್ಷಿ, ಈರುಳ್ಳಿ, ಹತ್ತಿ, ಗೋಧಿ, ಕಡಲೆ, ಗೋವಿನ ಜೋಳ, ಬಿಳಿ ಜೋಳ, ಅಜವಾನ ಸೇರಿದಂತೆ ಅನೇಕ ತೋಟಗಾರಿಕೆ ಹಾಗೂ ಖುಸ್ಕಿ ಜಮೀನಿನಲ್ಲಿರುವ ಬೆಳೆಗಳು ಹಾಳಾಗಿವೆ ಎಂದು ಹೇಳಿದರು.
ಕೇಂದ್ರ, ರಾಜ್ಯ ಸರ್ಕಾರ ರೈತರ ಖಾತೆಗೆ ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರಧನ ನೀಡಬೇಕು. ರೈತರು ತುಂಬಿದ ಭೀಮಾ ಫಸಲು ಹಾಗೂ ರೈತರು ತುಂಬಿರುವ ವಿಮೆ ಯೋಜನೆಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಒಂದು ವೇಳೆ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸರ್ಕಾರದ ವಿರುದ್ಧ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿರ್ವಾವಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ -2 ತಹಶೀಲ್ದಾರ್ ಪಿ.ಜೆ. ಪವಾರ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಜು ಬಿರಾದಾರ, ಸುನೀಲ ಚಿಕ್ಕೊಂಡ, ಸಂಗಮೇಶ ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ಗುರು ವಂದಾಲ, ವೀರೇಶ ಗಬ್ಬೂರ, ಮಂಜು ಜಾಲಗೇರಿ, ನಿಂಗಪ್ಪ ಅವಟಿ, ಆಕಾಶ ಗೊಳಸಂಗಿ, ಅರುಣ ಗೊಳಸಂಗಿ, ಸುರೇಶ ಹೂಗಾರ, ಕಿರಣ ಜನಗೊಂಡ, ಅರವಿಂದ ಗೊಳಸಂಗಿ, ಸಂಗಮೇಶ ವಾಡೇದ, ಮಶಾಕ್ ಮಕಾನದಾರ, ಆಶೀಫ್ ತಾಂಬೊಳೆ, ಅಮೀತ ಘೋರ್ಪಡೆ ಇದ್ದರು.