ರಾಯಚೂರು: ಸದಸ್ಯತ್ವ ಅನರ್ಹತೆ ಪ್ರಶ್ನಿಸಿ ನ್ಯಾಯಾಲಯ ಮೆಟ್ಟಿಲೇರಿದ ರಾಯಚೂರು ನಗರಸಭೆ ಸದಸ್ಯೆ ರೇಣಮ್ಮ ಭೀಮರಾಯ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿ ಶಿವಾನಂದ ನಗರದ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ 35ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ರೇಣಮ್ಮ ಪರಿಶಿಷ್ಟ ಜಾತಿ ವ್ಯಾಪ್ತಿಗೆ ಬರುವ ಶಿಳ್ಳೆಕ್ಯಾತ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾಯಿತರಾಗಿದ್ದಾರೆ ಎಂದು ಆರೋಪಿಲಾಗಿತ್ತು. ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಹಾಗೂ ಪ್ರಾದೇಶಿಕ ಆಯುಕ್ತರು ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡಿದ್ದರು.
ಇದನ್ನೂ ಓದಿ:ಪಂಚಾಯತ್ ಚುನಾವಣೆ ಎದುರಿಸಲು ಬಿಜೆಪಿ ರೆಡಿ: ಕೋರ್ ಕಮಿಟಿ ಸಭೆ ಬಳಿಕ ಲಿಂಬಾವಳಿ ಹೇಳಿಕೆ
ಈ ನಿಟ್ಟಿನಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರೇಣಮ್ಮರ ಸದಸ್ಯತ್ವ ರದ್ದುಗೊಳಿಸಿತ್ತು. ಆದರೆ ಈ ವಿಚಾರವಾಗಿ ರೇಣಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದು, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಫಲಿತಾಂಶ ಘೋಷಣೆಗೆ ತಡೆ ನೀಡಿದೆ. ಅಲ್ಲದೇ ರೇಣಮ್ಮರಿಗೆ ಹಕ್ಕು ಚಲಾಯಿಸಲು ನ್ಯಾಯಾಲಯ ಅವಕಾಶ ನೀಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಈಗ ರೇಣಮ್ಮರ ವಿರುದ್ಧ ಪ್ರಕರಣ ದಾಖಲಾಗಿದೆ.