ಸಿದ್ದಾಪುರ: ಆವರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಡಾÕಲೆ ಸಮೀಪದ ಒಂಟಿಯಾಗಿ ವಾಸಿಸುತ್ತಿದ್ದ 31 ವರ್ಷದ ವಿವಾಹಿತ ಮಹಿಳೆಯ ಮೇಲೆ ನೆರೆಮನೆಯ ಚಂದ್ರ ನಾಯ್ಕ ಅತ್ಯಾಚಾರಕ್ಕೆ ಯತ್ನಿಸಿದ್ದು , ಈ ಬಗ್ಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರೂ ಅವರು ಸರಿಯಾದ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದ ನೊಂದ ಮಹಿಳೆ ಚಂದ್ರನಾಯ್ಕನ ವಿರುದ್ಧ ಜು. 6ರಂದು ಮರು ದೂರು ದಾಖಲಿಸಿದ್ದಾರೆ.
ಘಟನೆ ವಿವರ
ಆವರ್ಸೆ ಸಮೀಪ ವಾಸಿಸುತ್ತಿದ್ದ ಮಹಿಳೆಗೆ 8 ವರ್ಷಗಳ ಹಿಂದೆ ಧಾರವಾಡ ಭಾಗದಿಂದ ದುಡಿಯಲು ಬಂದ ಕಾರ್ಮಿಕ ಯುವಕನೊಂದಿಗೆ ಶಂಕರನಾರಾಯಣದಲ್ಲಿ ಮದುವೆಯಾಗಿತ್ತು. ಒಂದು ವರ್ಷದ ಅನಂತರ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ 2 ತಿಂಗಳಲ್ಲಿ ಮಗುವಿನ ತಂದೆ ಯಾರಿಗೂ ಹೇಳದೇ ನಾಪತ್ತೆಯಾಗಿದ್ದನು. ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಈಕೆ ಗಂಡ ನಾಪತ್ತೆಯಾದ ಬಳಿಕ ದಿಕ್ಕು ಕಾಣದೇ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಸ್ಥಳೀಯರು ಆಕೆಯನ್ನು ಉಡುಪಿಯ ವಿಶ್ವಾಸದ ಮನೆಗೆ ಸೇರಿಸಿದ್ದು, ಅನಂತರ ಗುಣಮುಖಳಾಗಿದ್ದರು. ಆಕೆ ಕಳೆದ ಕೆಲವು ತಿಂಗಳುಗಳಿಂದ ಮನೆ ಸಮೀಪದ ಗೇರು ಬೀಜ ಕಾರ್ಖಾನೆಯಲ್ಲಿ ದುಡಿದು, ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಆಕೆಯ ಚಲನವಲನಗಳನ್ನು ತಿಳಿದುಕೊಂಡಿದ್ದ ನೆರೆ ಮನೆಯ ನಿವಾಸಿ ಕಂಬರಕೊಳ್ಕೆ ಹಾಡಿ ಮನೆಯ ವಿವಾಹಿತ, ಪತ್ನಿ ಹಾಗೂ ಎರಡು ಮಕ್ಕಳ ತಂದೆಯಾಗಿರುವ ಚಂದ್ರನಾಯ್ಕ (35) ಕಳೆದ ರವಿವಾರ ರಾತ್ರಿ 11 ಗಂಟೆಗೆ ಆಕೆಯ ಮನೆಗೆ ಕುಡಿದು ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾನೆ. ಆಕೆ ಬಾಗಿಲು ತೆರೆಯಲು ನಿರಾಕರಿಸಿದಾಗ ಆತ ಬಾಗಿಲನ್ನು ಒಡೆದು ಹಾಕಿ ಒಳ ಪ್ರವೇಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಹೆದರಿದ ಆಕೆ ಕೂಗಿಕೊಂಡು ಹಿಂಬಾಗಿಲನ್ನು ತೆರೆದು ನೆರೆ ಮನೆಗೆ ಓಡಿ ಹೋಗಿ ಆಶ್ರಯ ಪಡೆದಿದ್ದಾಳೆ. ಆರೋಪಿಯು ಆಕೆ ವಾಪಸ್ಸು ಮನೆಗೆ ಮರಳಿ ಬರಬಹುದೆಂದು ನಿರೀಕ್ಷೆಯಲ್ಲಿ ಆಕೆಯ ಮನೆಯಲ್ಲಿ ರಾತ್ರಿ ಪೂರ್ತಿ ಕಳೆದು ಆಕೆ ಬಾರದಿರುವ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಸೊತ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದು ಹಾಳು ಮಾಡಿದ್ದಾನೆ. ಈತನ ಮೇಲೆ ಈಗಾಗಲೇ ಎರಡು ಪೊಲೀಸ್ ದೂರುಗಳಿವೆ.
ಜು. 2ರ ರಾತ್ರಿ ಚಂದ್ರ ನಾಯ್ಕ ಆಕ್ರಮವಾಗಿ ಮನೆ ಪ್ರವೇಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಮರುದಿನ ಸ್ಥಳೀಯರ ಸಹಕಾರದಿಂದ ಶಂಕರ ನಾರಾಯಣ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಜು. 4ರಂದು ಮನೆಗೆ ಕಳುಹಿಸಿದ್ದರು. ದೂರಿನ ಕುರಿತು ಠಾಣೆಯಲ್ಲಿ ಪೊಲೀಸರು ಆರೋಪಿಯನ್ನು ಸಮಪರ್ಕವಾಗಿ ವಿಚಾರಣೆ ನಡೆಸಿರುವುದಿಲ್ಲವೆಂದು ಅಸಮಾಧಾನಗೊಂಡ ನೊಂದ ಮಹಿಳೆ ಸ್ಥಳೀಯರ ಹಾಗೂ ಸಂಬಂಧಿಕರ ಸಹಕಾರದೊಂದಿಗೆ ಚಂದ್ರ ನಾಯ್ಕ ವಿರುದ್ಧ ಜು. 6ರಂದು ಮರು ದೂರು ನೀಡಿರುತ್ತಾರೆೆ.