ಕೊರಟಗೆರೆ : ಅನೈತಿಕ ಸಂಬಂಧ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಮೂರು ದಿನಗಳ ಹಿಂದೆ ವ್ಯಕ್ತಿಯನ್ನು ಕೊಲೆ ಮಾಡಿ ಗ್ರಾಮದಲ್ಲೇ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದ್ದು ಶುಕ್ರವಾರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ತಾಲ್ಲೂಕಿನ ಕೋಳಾಲ ಹೋಬಳಿಯ ಎಂ ಗೊಲ್ಲಹಳ್ಳಿ ಗ್ರಾಮದ ನಿವಾಸಿ ಲಿಂಗಣ್ಣ(40) ಕೊಲೆಯಾದ ಮೃತ ದುರ್ದೈವಿ. ಕೊಲೆ ಆರೋಪದ ಮೇಲೆ ಬಸವರಾಜು ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.ಇನ್ನೊಬ್ಬ ಆರೋಪಿ ಮಡಿವಾಳರ ಪಾಳ್ಯದ ಅಂಜಿ ಎಂಬಾತನು ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಲಿಂಗಣ್ಣ ಕಾಣೆಯಾಗಿರುವ ಬಗ್ಗೆ ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೋಲೀಸರು ಲಿಂಗಣ್ಣ ಪೋನ್ ನಲ್ಲಿ ಕೊನೆಯದಾಗಿ ಸಂಭಾಷಣೆ ನಡೆಸಿದ್ದನ್ನು ಪತ್ತೆಹಚ್ಚಿ ಬಸವರಾಜು ಎಂಬಾತನನ್ನು ಬಂಧಿಸಿದ್ದಾರೆ.
ತಹಶಿಲ್ದಾರ್ ನಾಹೀದಾ ಜಮ್ ಜಮ್, ಸಿಪಿಐ ಸಿದ್ದರಾಮೇಶ್ವರ ಸಮ್ಮಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಲಿಂಗಣ್ಣನ ಪತ್ನಿ ಭಾಗ್ಯ ಮತ್ತು ಬಸವರಾಜುವಿನ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಜಮೀನು ಖರೀದಿ ವಿಚಾರದಲ್ಲಿ ಸುಮಾರು 80 ಸಾವಿರ ಸಾಲವನ್ನು ಪಡೆದಿದ್ದ. ಹಣ ವಾಪಸ್ಸು ಕೊಡುವಂತೆ ಲಿಂಗಣ್ಣ ಪದೇ ಪದೇ ಕೇಳುತ್ತಿದ್ದರಿಂದ ಹಾಗೂ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಕೊಲೆ ಮಾಡಿರುವುದಾಗಿ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಸಂಬಂಧ ಕೋಳಾಲ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಸಿಪಿಐ ಸಿದ್ದರಾಮೇಶ್ವರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.